ರಮೇಶ್ ಜಾರಕಿಹೊಳಿ ಅಶ್ಲೀಲ ಶಬ್ಧಗಳಿಂದ ನಿಂದಿಸಿ ಅಪಮಾನ.! ಮಹಿಳಾ ಕಾಂಗ್ರೆಸ್‌ನಿಂದ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಇಲಾಖೆಗೆ ಮನವಿ

ದಾವಣಗೆರೆ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇತ್ತೀಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅಶ್ಲೀಲ ಶಬ್ಧಗಳಿಂದ ನಿಂದಿಸಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕ್ರಮಕ್ಕೆ ಒತ್ತಾಯಿಸಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಶಾಸಕ ರಮೇಶ್ ಜಾರಕಿಹೊಳಿಯವರು ಒಬ್ಬ ಮಹಿಳಾ ಶಾಸಕಿಗೆ ಬಹಿರಂಗವಾಗಿ ಮಾಧ್ಯಮಗಳ ಎದುರೇ ಪರಿಜ್ಞಾನವಿಲ್ಲದೇ ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ರಾಜು ಅವರ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ಕ್ರಮಕ್ಕೆ ಒತ್ತಾಯಿಸಿದರು.
ಮಹಿಳೆಯ ಘನತೆಗೆ ಧಕ್ಕೆ ತರುವಂತೆ ಅಶ್ಲೀಲ ಪದಗಳಿಂದ ನಿಂದಿಸಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗೌರವಕ್ಕೆ ಚ್ಯುತಿ ತಂದಿರುವ ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶ್ರೀಮತಿ ಅನಿತಾಬಾಯಿ ಮಾಲತೇಶ್, ಸುಷ್ಮಾ ಪಾಟೀಲ್, ಆಶಾ ಮುರುಳಿ, ನಾಗರತ್ನಮ್ಮ, ರಾಜೇಶ್ವರಿ, ಶುಭಮಂಗಳ, ಗೀತಾ ಚಂದ್ರಶೇಖರ್, ಪುಷ್ಪ ಮತ್ತಿತರರು ಆಗ್ರಹಿಸಿದರು.