ರಾಣೆಬೆನ್ನೂರು ತಾಲ್ಲೂಕಿನ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ ಎಸ್ ಪಿ.! ದಾಳಿ ವೇಳೆ 1,43,500 ರೂ. ಮೌಲ್ಯದ 205 ಟನ್ ಅಕ್ರಮ ಮರಳು ವಶ
ರಾಣೆಬೆನ್ನೂರು: ತಾಲ್ಲೂಕಿನ ತುಂಗಭದ್ರಾ ನದಿ ತೀರದ ನಾನಾ ಗ್ರಾಮಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ಮೇಲೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಎಸ್.ಪಿ ಹನುಮಂತರಾಯ ಅವರ ಮಾರ್ಗದರ್ಶನದಡಿ ಸೋಮವಾರ ಜಂಟಿ ದಾಳಿ ನಡೆಸಿ, ಅಂದಾಜು 1,43,500 ರೂ. ಮೌಲ್ಯದ 205 ಟನ್ ಬೆಲೆಬಾಳುವ ಅಕ್ರಮ ಮರಳು ಹಾಗೂ ಕುದರಿಹಾಳ ಗ್ರಾಮದಲ್ಲಿ 17 ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.
ತುAಗಭದ್ರ ನದಿ ತೀರದ ಚಂದಾಪುರಗ ಚಿಕ್ಕಕುರವತ್ತಿ, ಹನರಗಿರಿ, ಕೋಣತಂಬಿಗಿ, ಕುದರಿಹಾಳ, ಉದಗಟ್ಟಿ, ಬೇಲೂರು, ಕೋಟಿಹಾಳ, ಪತ್ತೆಪೂರ ಹಾಗೂ ಮಾಕನೂರು ಗ್ರಾಮಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಕ್ರಮ ಮರಳು ದಾಸ್ತಾನುಗಳ ಮೇಲೆ ದಾಳಿ ನಡೆಸಿ ಮರಳನ್ನು ವಶಕ್ಕೆ ಪಡೆದುಕೊಂಡರು.
ಕುದರಿಹಾಳ ಗ್ರಾಮದಲ್ಲಿ 60 ಮೆಟ್ರಿಕ್ ಟನ್, ಉದಗಟ್ಟಿ ಗ್ರಾಮದಲ್ಲಿ 40 ಮೆಟ್ರಿಕ್ ಟನ್, ಬೇಲೂರು ಗ್ರಾಮದಲ್ಲಿ 10 ಮೆಟ್ರಿಕ್ ಟನ್, ಕೋಟಿಹಾಳ ಗ್ರಾಮದಲ್ಲಿ 90 ಮೆಟ್ರಿಕ್ ಟನ್ ಹಾಗೂ ಚಿಕ್ಕಕುರವತ್ತಿ ಗ್ರಾಮದಲ್ಲಿ 05 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 205 ಟನ್ ಅಕ್ರಮ ಮರಳನ್ನು ವಶಪಡಿಸಿಕೊಂಡರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ವಿಜಯಕುಮಾರ ಸಂತೋಷ, ರಾಣೆಬೆನ್ನೂರು ಉಪ ವಿಭಾಗದ ಡಿಎಸ್‌ಪಿ ಟಿ.ವಿ. ಸುರೇಶ, ಡಿಸಿಆರ್‌ಬಿ ಹಾಗೂ ಡಿಎಸ್‌ಬಿ ಎಮ್.ಎಸ್.ಪಾಟೀಲ, ಕುಮಾರಪಟ್ಟಣ ಸಿಪಿಐ ಭಾಗ್ಯವತಿ ಭಂತಿ, ರಾಣೆಬೆನ್ನೂರು ಗ್ರಾಮೀಣ ಠಾಣೆ ಪಿಐ ಶ್ರೀಶೈಲ್ ಚೌಗುಲಾ, ರಾಣೆಬೆನ್ನೂರು ಶಹರ ಠಾಣೆಯ ಸಿಪಿಐ ಎಮ್.ಐ.ಗೌಡಪ್ಪ, ಪಿಎಸ್‌ಐ ಮೇಘರಾಜ ಹಲಗೇರಿ ಪಿಎಸ್, ಪ್ರಕಾಶ್ ಶಿಡ್ಲಣ್ಣ, ಆರ್.ಜೆ.ಹಿರೇಮಠ, ತೇಗೂರ, ನಾಗರಾಜ, ಕೋದಂಡರಾಮ ಸೇರಿದಂತೆ ಮತ್ತಿತರರು ಇದ್ದರು.