‘ರಾಜಕೀಯ ವಿಷಯ ಬಂದಾಗ.. ತಾ ಮುಂದು… ನಾ ಮುಂದು..’ ಸ್ಮಶಾನಕ್ಕೆ ಜಾಗ ಕೊಡಿಸಿ ಎಂದಾಗ ಇತ್ತ ಬಾರದ ಜನಪ್ರತಿನಿಧಿಗಳು “ರಸ್ತೆ ಬದಿಯಲ್ಲಿ ದಲಿತರ ಅಂತ್ಯ ಕ್ರಿಯೆ”

ದಾವಣಗೆರೆ (ಮಾಯಕೊಂಡ): ಹೋಬಳಿಯ ಹುಚ್ಚವ್ವನಹಳ್ಳಿಯಲ್ಲಿ ಶವ ಸಂಸ್ಕಾರಕ್ಕೆ ಜಾಗ (ಸ್ಮಶಾನ) ಇಲ್ಲದೆ ದಲಿತ ವ್ಯಕ್ತಿಯೊಬ್ಬರ ಶವ ಸಂಸ್ಕಾರವನ್ನು ರಸ್ತೆ ಬದಿಯಲ್ಲೇ ನಡೆಸಲಾಗಿದ್ದು, ಅಸ್ಪೃಶ್ಯತೆ ಇನ್ನೂ ಇದೆ ಎಂಬುದು ಇಲ್ಲಿ ಗೊತ್ತಾಗುತ್ತಿದೆ.
ಮಾಯಕೊಂಡ ಎಂಬ ಕ್ಷೇತ್ರ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದು, ಇಲ್ಲಿ ಸ್ಪರ್ಧಿಸಲು ಸಾಕಷ್ಟು ಜನ ತಾ ಮುಂದು, ನಾ ಮುಂದು ಎಂದು ಬರುತ್ತಾರೆ..ಆದರೆ ದಲಿತರ ಅಭಿವೃದ್ದಿ ಮಾಡಿ ಎಂದಾಗ ಹಿಂದೆ ಸರಿಯುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಹುಚ್ಚವ್ವನಹಳ್ಳಿ ಗ್ರಾಮದ ದಲಿತ ಕೇರಿಯಲ್ಲಿ ದಲಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆದರೆ ಇವರ ಶವ ಸಂಸ್ಕಾರಕ್ಕೆ ಜಾಗ ಸಿಗಲಿಲ್ಲ. ಸಾರ್ವಜನಿಕ ರುದ್ರಭೂಮಿಯೂ ಇಲ್ಲ. ಬೇರೆ ದಾರಿ ಕಾಣದೆ ಮೃತರ ಕುಟುಂಬದವರು ರಸ್ತೆ ಬದಿಯಲ್ಲೇ ಶವ ಸಂಸ್ಕಾರ ನಡೆಸಿದ್ದಾರೆ. ಶಾಲಾ ಮಕ್ಕಳು, ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಇಂಥ ಪ್ರಕರಣ ನಡೆದಿರುವುದು ಪ್ರಜ್ಞಾವಂತರನ್ನು ಕಳವಳಕ್ಕೀಡು ಮಾಡಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಟ್ಟಾರೆ ಬದುಕಿದ್ದಾಗ ರಾಜನಂತೆ ಬಾಳಿದ ಮನುಷ್ಯನ ಬಾಳು ಸತ್ತ ಮೇಲೆ ರಸ್ತೆ ಬಳಿ ಬೀದಿ ಶವವಾಗುತ್ತಿರುವುದು ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹುಚ್ಚವ್ವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ 250 ಕ್ಕೂ ಹೆಚ್ಚು ದಲಿತ ಕುಟುಂಬಗಳಿದ್ದು ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ರುದ್ರಭೂಮಿಗಾಗಿ ಹಲವು ವರ್ಷಗಳಿಂದ ಬೇಡಿಕೆ ಇದ್ದರೂ ಅನುಷ್ಠಾನವಾಗಿಲ್ಲ. ಸುತ್ತಮುತ್ತ ಗುಡ್ಡ, ಗೋಮಾಳ ಸೇರಿದಂತೆ ದಲಿತರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಜಮೀನು ಸಿಗುತ್ತಿಲ್ಲ. ಖಾಸಗಿ ಭೂಹಿಡುವಳಿದಾರರು ರುದ್ರಭೂಮಿಗಾಗಿ ಜಾಗ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಹೀಗಾಗಿ ಸ್ಮಶಾನಕ್ಕೆ ಜಾಗ ಗುರುತಿಸುವುದು ಪಂಚಾಯಿತಿ ಆಡಳಿತಕ್ಕೆ ಕಷ್ಟವಾಗಿದೆ’ ಎಂಬುದು ಸಾರ್ವಜನಿಕರ ಅಹವಾಲು. ಮೂರು ಜನ ದಲಿತರ ಅಂತ್ಯ ಸಂಸ್ಕಾರ: ಕಳೆದ ವಾರ ಮೂರು ಜನರ ದಲಿತರ ಅಂತ್ಯ ಸಂಸ್ಕಾರ ರಸ್ತೆ ಬದಿಯಲ್ಲಿ ನಡೆದಿದೆ. ಮಳೆ ಬಂದಾಗ ಮಣ್ಣು ಕೊಚ್ಚಿ ಹೋಗಿ, ಮೂಳೆಗಳು ಹೊರ ಕಾಣುತ್ತವೆ.
ಜಾಗದ ಕೊರತೆ : ಈ ಊರಿನಲ್ಲಿ ದೇವರಿಗೆ ದೇವಸ್ಥಾನ ಇದೆ. ಆದರೆ ದೇವರನ್ನು ಭಕ್ತಿಯಿಂದ ಪೂಜೆ ಮಾಡಿದ ಭಕ್ತ ಮೃತಪಟ್ಟರೇ ಮಾತ್ರ ಹೂಳಲು ಜಾಗವಿಲ್ಲ. ಇದೊಂದು ಗ್ರಾಮ ಪಂಚಾಯಿತಿಯಾಗಿದ್ದು, ಎಲ್ಲ ವರ್ಗದ ಜನರು ಇಲ್ಲಿದ್ದಾರೆ..ಆದರೆ ದಲಿತರನ್ನು ಹೂಳಲು ಮಾತ್ರ ಜಾಗವಿಲ್ಲ
ಶಾಸಕರು ಮೌನ : ಸ್ಮಶಾನ ಭೂಮಿ ಇಲ್ಲದೇ ಜನರು ಶವ ಸಂಸ್ಕಾರ ಮಾಡಲು ತೊಂದರೆ ಎದುರಿಸುತ್ತಿರುವುದರಿಂದ ಈ ವರ್ಷ ಸ್ಮಶಾನ ಭೂಮಿ ಒದಗಿಸಲು 10 ಕೋಟಿ ರು.ಗಳನ್ನು ಒದಗಿಸಿದೆ. ಪ್ರತಿ ಹಳ್ಳಿಗೂ ಸ್ಮಶಾನ ಸೌಲಭ್ಯಕ್ಕೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದು, ಶಾಸಕ ಪ್ರೋ.ಲಿಂಗಣ್ಣ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಡಿಸಿ ಮೌನ: ರಾಜ್ಯದ ಪ್ರತಿ ಹಳ್ಳಿಯಲ್ಲಿ ಸ್ಮಶಾನ ಭೂಮಿ ಸೌಲಭ್ಯ ಇರುವಂತೆ ಕ್ರಮ ಕೈಗೊಳ್ಳಬೇಕೆಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದರು. ಅಲ್ಲದೇ ಜಿಲ್ಲಾಧಿಕಾರಿಗಳೇ ಖುದ್ದಾಗಿ ಆದ್ಯತೆ ಮೇಲೆ ಸ್ಮಶಾನ ಭೂಮಿ ಮಂಜೂರು ಮಾಡಲು ಮುಂದಾಗಬೇಕು ಎಂದು ಸಚಿವರೂ ಆದೇಶ ನೀಡಿದ್ದರೂ ಪ್ರಯೋಜನವಿಲ್ಲದಂತಾಗಿದೆ.