ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿಗೆ ಫೆ.18 ರಿಂದ ನೊಂದಣಿ ಪ್ರಾರಂಭ: ₹ 5230 ಪ್ರತಿ ಕ್ವಿಂಟಾಲ್ ಗೆ ದರ ನಿಗದಿ – ಮಹಾಂತೇಶ್ ಬೀಳಗಿ
ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಅದರನ್ವಯ ಜಿಲ್ಲೆಯಲ್ಲಿ ಕಡಲೆಕಾಳು ಖರೀದಿಗೆ ನೊಂದಣಿ ಕಾರ್ಯ ಫೆ. 18 ರಿಂದ ಪ್ರಾರಂಭಿಸಬೇಕು, ರೈತರಿಗೆ ಯಾವುದೇ ಗೊಂದಲವಾಗದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಕಡಲೆಕಾಳಿಗೆ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ 5230 ರೂ. ನಿಗದಿಪಡಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಲೆಕಾಳಿನ ಬೆಲೆ ಕುಸಿದಿದ್ದು, ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ರೈತರ ಹಿತಕಾಯಲು ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ ಕೂಡಲೆ ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಗೆ ಫೆ. 18 ರಿಂದಲೇ ಜಗಳೂರು ಎಪಿಎಂಸಿ ಆವರಣದಲ್ಲಿ ರೈತರ ನೊಂದಣಿ ಕಾರ್ಯ ಪ್ರಾರಂಭಿಸಬೇಕು. ನೊಂದಣಿಗೂ ಮುನ್ನ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿರಬೇಕು. ರೈತರು ಅವಸರ ಮಾಡಿ ಎಲ್ಲಿಯೂ ಕೂಡ ಬೇರೆ ಕಡೆಗೆ ಮಾರಾಟ ಮಾಡಿ ನಷ್ಟ ಅನುಭವಿಸುವುದು ಬೇಡ. ಜಗಳೂರು ಎಪಿಎಂಸಿ ಆವರಣದಲ್ಲಿನ ಖರೀದಿ ಕೇಂದ್ರದಲ್ಲಿಯೇ ಮಾರಾಟ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಖರೀದಿ ಕೇಂದ್ರಕ್ಕೆ ಅವಶ್ಯಕವಿರುವ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಖರೀದಿಗೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಪೂರ್ವ ಸಿದ್ಧತೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿಯ ಶಾಖಾ ವ್ಯವಸ್ಥಾಪಕ ಶ್ರೀಕಾಂತ್ ಎಸ್. ಅವರು ಮಾಹಿತಿ ನೀಡಿ, ಎಫ್‍ಎಕ್ಯೂ ಗುಣಮಟ್ಟದ ಕಡಲೆಕಾಳಿಗೆ ಪ್ರತಿ ಕ್ವಿಂಟಾಲ್ ರೂ. 5230 ರೂ. ಬೆಂಬಲ ಬೆಲೆ ನಿಗದಿಪಡಿಸಿದ್ದು, ಕರ್ನಾಟಕ ಸಹಕಾರ ಮಾರಾಟ ಮಹಾ ಮಂಡಳಿಯೇ ದಾವಣಗೆರೆ ಜಿಲ್ಲೆಗೆ ಖರೀದಿ ಏಜೆನ್ಸಿಯಾಗಿದೆ. ಫೆ. 18 ರಿಂದ 45 ದಿನಗಳ ಕಾಲ ರೈತರಿಂದ ನೊಂದಣಿ ಕಾರ್ಯ ನಡೆಯಲಿದ್ದು, ಖರೀದಿಯೂ ಕೂಡ 45 ದಿನಗಳ ಕಾಲ ನಡೆಯಲಿದೆ. ಪ್ರತಿ ಎಕರೆಗೆ 04 ಕ್ವಿಂಟಾಲ್, ಪ್ರತಿ ರೈತರಿಂದ ಗರಿಷ್ಟ 15 ಕ್ವಿಂ. ಕಡಲೆಕಾಳು ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 4500 ರಿಂದ 4600 ರೂ. ಪ್ರತಿ ಕ್ವಿಂಟಾಲ್‍ಗೆ ದರ ಇದೆ. ಹೀಗಾಗಿ ಬೆಂಬಲ ಬೆಲೆ ಯೋಜನೆಯಲ್ಲಿ ರೈತರು ಮಾರಾಟ ಮಾಡಿದಲ್ಲಿ ಅವರಿಗೆ ಅನುಕೂಲವಾಗಲಿದೆ. ಕಳೆದ 2021 ರಲ್ಲಿ 3730 ಕ್ವಿಂ. ಹಾಗೂ 2020 ರಲ್ಲಿ 10800 ಕ್ವಿಂ. ಕಡಲೆಕಾಳು ಬೆಂಬಲ ಬೆಲೆಯಲ್ಲಿ ಖರೀದಿಯಾಗಿತ್ತು. ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಜಿಲ್ಲೆಯಲ್ಲಿ ಈ ವರ್ಷ ಸುಮಾರು 2900 ಹೆ. ನಲ್ಲಿ ಕಡಲೆಕಾಳು ಬಿತ್ತನೆಯಾಗಿದ್ದು, ಉತ್ತಮ ಇಳುವರಿಯ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ. ಹೆಚ್ಚಿನ ರೈತರು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವ ಸಾಧ್ಯತೆಗಳಿವೆ ಎಂದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಜೆ ಪ್ರಭು, ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ಶಾಖಾ ವ್ಯವಸ್ಥಾಪಕ ಶ್ರೀಕಾಂತ್ ಎಸ್ ಹಾಗೂ ಇತರರು ಹಾಜರಿದ್ದರು.