ಯಶಸ್ವಿನಿ ಯೋಜನೆಯಡಿ ರಾಜ್ಯದಲ್ಲಿ 20 ಲಕ್ಷ ಸಹಕಾರಿಗಳ ನೋಂದಣಿ
ಬೆಂಗಳೂರು: 2022ರ ಏಪ್ರಿಲ್ ನಲ್ಲಿ ಮಾನ್ಯ ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಅವರು ಯಶಸ್ವಿನಿ ಯೋಜನೆಗೆ ಮರುಚಾಲನೆ ನೀಡಿದರು. 2022-23ನೇ ಸಾಲಿನಲ್ಲಿ 30 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದ್ದು ಇದುವರೆಗೂ 20 ಲಕ್ಷ ಸಹಕಾರಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ..
ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಹಕಾರಿ ಫಲಾನುಭವಿಗಳ ಸಮಾವೇಶದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಚಿವರು, ಪ್ರಸಕ್ತ ಸಾಲಿನಲ್ಲಿ 30 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಇದುವರೆಗೆ 18.11 ಲಕ್ಷ ರೈತರಿಗೆ 13480 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
ಬೆಳೆ ಸಾಲ ಬಡ್ಡಿ ಸಹಾಯಧನಕ್ಕಾಗಿ ರಾಜ್ಯ ಸರ್ಕಾರ 1078 ಕೋಟಿ ರೂ.ಗಳ ಆಯವ್ಯಯ ಅವಕಾಶ ಕಲ್ಪಿಸಿದ್ದು, ಇದುವರೆಗೂ 798.59 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. 2.5 ಲಕ್ಷ ಸ್ತ್ರೀ ಶಕ್ತಿ/ಸ್ವಸಹಾಯ ಗುಂಪುಗಳ ರಚನೆ ಮಾಡಲಾಗಿದ್ದು, ಈಗಾಗಲೇ ಶೂನ್ಯ ಬಡ್ಡಿದರದಲ್ಲಿ 20466 ಗುಂಪುಗಳಿಗೆ 839.18 ಕೋಟಿ ರೂ. ಸಾಲ ವಿತರಿಸಲಾಗಿದೆ. ಇದಕ್ಕಾಗಿ ಸರ್ಕಾರ 96.61 ಕೋಟಿ ರೂ.ಗಳ ಬಡ್ಡಿ ಸಹಾಯಧನ ಆಯವ್ಯಯ ಅವಕಾಶವನ್ನು ನೀಡಿದೆ ಎಂದರು.
ಇಂದು 30-12-22 ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಹಕಾರ ಇಲಾಖೆ ಹಾಗೂ ರಾಜ್ಯದ ಎಲ್ಲ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ "ಸಹಕಾರ ಫಲಾನುಭವಿಗಳ ಸಮಾವೇಶ" ಕಾರ್ಯಕ್ರಮವನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಉದ್ಘಾಟಿಸಿದರು. @narendramodi @AmitShah @CMofKarnataka @BSBommai @BSYBJP @pibcooperation pic.twitter.com/1DSrRsYibN
— S T Somashekar Gowda (@STSomashekarMLA) December 30, 2022
ಕೇಂದ್ರ ಪುರಸ್ಕೃತ ಯೋಜನೆಯಡಿ ರಾಜ್ಯದ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು 235 ಕೋಟಿ ರೂ. ವೆಚ್ಚದಲ್ಲಿ ಏಕರೂಪ ತಂತ್ರಾಂಶ ಬಳಸಿ ಗಣಕೀಕರಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ಉದ್ಘಾಟಿಸಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವರಾದ ಅರಗ ಜ್ಞಾನೇಂದ್ರ, ಅಶೋಕ್, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಎನ್.ನಾಗರಾಜು, ಸಂಸದರಾದ ಡಿ.ವಿ.ಸದಾನಂದಗೌಡ, ಪಿ.ಸಿ.ಮೋಹನ್, ಶಾಸಕರಾದ ಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.