ಏ.6ರಂದು ಕರುನಾಡ ಅರಸೊತ್ತಿಗೆಗಳು ಇತಿಹಾಸ ಮಾಹಿತಿ ಪಟದ ಬಿಡುಗಡೆ

ಏ.6ರಂದು ಕರುನಾಡ ಅರಸೊತ್ತಿಗೆಗಳು ಇತಿಹಾಸ ಮಾಹಿತಿ ಪಟದ ಬಿಡುಗಡೆ

ದಾವಣಗೆರೆ: ಕರುನಾಡ ಅರಸೊತ್ತಿಗೆಗಳು ಇತಿಹಾಸ ಮಾಹಿತಿ ಪಟದ ಬಿಡುಗಡೆ ಕಾರ್ಯಕ್ರಮ ಇದೇ ಏಪ್ರಿಲ್ 6ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ.
ಚನ್ನವೀರಪ್ಪ ಯಳಮಲ್ಲಿ ಮೋಮೆರಿಯಲ್ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಸವರಾಜ್ ಯಳಮಲ್ಲಿ ಅವರು, ಕ್ರಿಸ್ತ ಪೂರ್ವ 270ರಿಂದ ಕ್ರಿಸ್ತ ಶಕ 1947ರ ವರೆಗೆ ಕರ್ನಾಟಕವನ್ನಾಳಿದ 130 ರಾಜ ವಂಶಗಳ ಕಾಲಮಾನ, ರಾಜಧಾನಿ ಹಾಗೂ ರಾಜಕೀಯ ಕುರಿತ ಮಾಹಿತಿಯನ್ನು ಪಟದ ರೂಪದಲ್ಲಿ ಹೊರತರಲಾಗಿದೆ ಎಂದು ಹೇಳಿದರು.
ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಾಮದೇವಪ್ಪ ಬಿ. ಪಟ ಬಿಡುಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎವಿಕೆ ಕಾಲೇಜು ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ನಟರಾಜ್ ಡಿ.ಆರ್. ಆಗಮಿಸಲಿದ್ದಾರೆ. ಚನ್ನವೀರಪ್ಪ ಯಳಮಲ್ಲಿ ಮೆಮೋರಿಯಲ್ ಟ್ರಸ್ಟ್‌ ಗೌರವಾಧ್ಯಕ್ಷ ಎನ್.ಟಿ. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಂದೀಶ್ ಬಾದಾಮಿ, ಎನ್.ಟಿ. ಮಂಜುನಾಥ್, ಶೇಷಾಚಲ, ದಿಳ್ಯಪ್ಪ, ಸುರೇಶ್, ಡಿ.ಆರ್. ನಟರಾಜ್, ನಾಗರಾಜ್ ಉಪಸ್ಥಿತರಿದ್ದರು.
130 ರಾಜ ವಂಶಸ್ಥರ ಮಾಹಿತಿ: ದಾವಣಗೆರೆಯಲ್ಲಿ ತೂಕ ಅಳತೆ ಸಾಧನಗಳ ವ್ಯಾಪಾರವನ್ನು ನಡೆಸುತ್ತಿರುವ ಶ್ರೀ ಬಸವರಾಜ್ ಯಳಮಲ್ಲಿ ಇವರು ತಮ್ಮ ಹವ್ಯಾಸವಾಗಿದ್ದ ತೂಕ ಅಳತೆ ಸಾಧನಗಳ ಸಂಗ್ರಹವನ್ನು ಕುರಿತು ತುಲಾಭವನವೆಂಬ ರಾಷ್ಟ್ರದ ಪ್ರಥಮ ತೂಕ ಅಳತೆ ವಸ್ತುಗಳಿಗೆ ಮೀಸಲಾದ ವಸ್ತುಸಂಗ್ರಹಾಲಯವನ್ನು ಪ್ರಾರಂಭಿಸಿದ್ದು ಸರಿಯಷ್ಟೇ.
ಈ ಸಂಗ್ರಹಾಲಯದಲ್ಲಿ ಏಳು ಶತಮಾನಗಳ ಕಾಲಘಟ್ಟದಲ್ಲಿ ಬಳಸಿದ ಐದು ಸಾವಿರಕ್ಕೂ ಹೆಚ್ಚಿನ ಸಾಮಾಗ್ರಿಗಳ ಸಂಗ್ರಹವಿದ್ದು, ಈ ಸಂಗ್ರಹಾಲಯವು ವಿಶ್ವದಾಖಲೆ ಮಾಡುವ ಪ್ರಯತ್ನದಲ್ಲಿದೆ. ಈಗ ಅದಕ್ಕೆ ಪೂರಕವಾಗಿ ಒಂದು ವರ್ಷದ ಕಾಲಾವಧಿಯಲ್ಲಿ ನೂರಾರು ಪುಸ್ತಕಗಳನ್ನು ಅಭ್ಯಸಿಸಿ ಅವುಗಳಲ್ಲಿ ಆಯ್ಕೆಯಾದ 65 ಪುಸ್ತಕಗಳಿಂದ ಪಡೆದ ಮಾಹಿತಿಗಳನ್ನು ಪರಿಗಣಿಸಿ, ಸಾಮಾನ್ಯ ಶಕ ಪೂರ್ವ 270 ರಿಂದ ನಮಗೆ ಸ್ವಾತಂತ್ರ್ಯ ಬಂದ ಸಾಮಾನ್ಯ ಶಕ 1947 ರ ವರೆಗಿನ ಸುಮಾರು 2217 ವರ್ಷಗಳ ಅವಧಿಯ ಸುಧೀರ್ಘ ಕಾಲದಲ್ಲಿ ಕರ್ನಾಟಕ ಪ್ರದೇಶವನ್ನು ಆಳಿದ 130 ರಾಜ ವಂಶಗಳ ಆಡಳಿತಾವಧಿ, ರಾಜಧಾನಿ ಮತ್ತು ರಾಜಕೀಯ ಕುರಿತ ಸಮಗ್ರ ಮಾಹಿತಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಬಟ್ಟೆಯ ಮೇಲೆ ಮುದ್ರಿಸಿ (12.2 X 2.4 ಮೀಟರ್ ಅಳತೆಯ) ಪಟದ ರೂಪದಲ್ಲಿ ವಿಶೇಷವಾಗಿ ಸಿದ್ದಪಡಿಸಿದ್ದಾರೆ. ಈ ಬಟ್ಟೆಯ ಮೇಲೆ ಮುದ್ರಿತ ಪಟವು ರಾಜ ವಂಶಗಳ ಮಾಹಿತಿಗಳಲ್ಲದೆ, ಅದಕ್ಕೆ ಬಳಸಿದ ಆಧಾರ ಗ್ರಂಥಗಳ ವಿವರವನ್ನು, ಜೊತೆಗೆ ಓದುವ ಕ್ರಮವನ್ನು ಸಹ ನೀಡಿದ್ದಾರೆ.
ಪ್ರಸ್ತುತ ಕರ್ನಾಟಕ ರಾಜ್ಯದ ನಕ್ಷೆಯನ್ನು ಮಾಹಿತಿಗಾಗಿ ನೀಡಿದ್ದು, ಇನ್ನೊಂದು ನಕ್ಷೆಯಲ್ಲಿ ರಾಜ ವಂಶಗಳ ರಾಜಧಾನಿಗಳನ್ನು ಗುರುತಿಸಿ ಕರ್ನಾಟಕ ಇತಿಹಾಸವನ್ನು ಒಂದೇ ನೋಟದಲ್ಲಿ ಸುಲಭವಾಗಿ ಸರಳವಾಗಿ ಅರ್ಥವಾಗುವಂತೆ ರೂಪಿಸಿದ್ದಾರೆ. ಅಲ್ಲದೇ ಪಟದ ಕೆಳಭಾಗ ಮತ್ತು ಮೇಲ್ಬಾಗದಲ್ಲಿ ಪ್ರತಿ ಐದು ವರ್ಷಗಳ ಅಂತರದಲ್ಲಿ ಕಾಲಮಾನವನ್ನು ಗುರುತು ಹಾಕಿದ್ದು, ರಾಜ ವಂಶಗಳ ಕಾಲಘಟ್ಟವನ್ನು ಅರಿಯಲು ಸಹಾಯಕವಾಗಿದೆ. ಈ ವಿಸ್ತಾರವಾದ ಪಟವನ್ನು ಹೊರಾಂಗಣ ಅಥವಾ ಒಳಾಂಗಣ ಪ್ರದೇಶಗಳಲ್ಲಿ ಮತ್ತು ಶಾಲೆ, ಸಭೆ, ಸಮಾರಂಭಗಳಲ್ಲಿ ಪ್ರದರ್ಶನಕ್ಕೆ ಬರುವಂತೆ ರೂಪಿಸಿದ್ದು, ಜೊತೆಗೆ ಬಟ್ಟೆಯ ಮೇಲೆ ಮುದ್ರಿತವಾಗಿರುವುದರಿಂದ ಚಿಕ್ಕ ಕೊಠಡಿಗಳಲ್ಲಿಯೂ ಸಹ ಮಡಿಕೆಮಾಡಿ ಪ್ರದರ್ಶಿಸಬಹುದಾಗಿದೆ. ಅಲ್ಲದೆ ಕರುನಾಡ ಅರಸೊತ್ತಿಗೆಗಳು ಎಂಬ ಇತಿಹಾಸ ಮಾಹಿತಿ ಪಟವು ಐಎಸ್‌ಬಿಎನ್ (ಅಂತರಾಷ್ಟ್ರೀಯ ಮಾನದಂಡದ ಪುಸ್ತಕ ಸಂಖ್ಯೆ) ಅಡಿಯಲ್ಲಿ ನೊಂದಣಿಯಾಗಿದ್ದು, ಕಾಪಿ ರೈಟ್ಸ್‌ಗಾಗಿ ಸಲ್ಲಿಸಲಾಗಿದೆ.
ಕರುನಾಡ ಅರಸೊತ್ತಿಗೆಗಳ ಕಲ್ಪನೆಯ ಕೆಲಸ ಆರಂಭವಾದ ದಿನಗಳಿಂದ ಜೊತೆಗಿದ್ದು ಸಹಕಾರ ನೀಡಿ ಸ್ಪೂರ್ತಿ ತುಂಬಿದ ಶ್ರೀ ಎನ್. ಟಿ. ಮಂಜುನಾಥ್ ರವರ ಸಹಕಾರವು ಈ ಕೆಲಸಕ್ಕೆ ಉತ್ತೇಜನವಾಗಿದೆ.
ಅಲ್ಲದೇ ಈ ವಿಭಿನ್ನ ಪರಿಕಲ್ಪನೆಯ ಕನಸನ್ನು ಡಿ. ಶೇಷಾಚಲ, ಚಂದನ್ ಪಬ್ಲಿಸಿಟಿ ಇವರು ಒಂದು ಸವಾಲಾಗಿ ಸ್ವೀಕರಿಸಿ ಆದ್ಯತೆಯ ಮೇಲೆ ವಿನ್ಯಾಸಗೊಳಿಸಿ ಕಲ್ಪನೆಯ ಕನಸನ್ನು ನನಸಾಗಿಸಿದ್ದಾರೆ. ಈ 130 ರಾಜ ವಂಶಜರ ಮಾಹಿತಿ ಸಂಗ್ರಹದ ಸಮಯದಲ್ಲಿ ನಂದೀಶ್ ಬಿ. ಮುದಹದಡಿ, ನವೀನ್ ಕುಮಾರ್ ಎನ್. ಆರ್. ನೇಗಿ, ಮುದ್ದು ಬಸವೇಶ್ ಕೆ.ಬಿ. ಚಿತ್ತಾನಹಳ್ಳಿ, ಉಪನ್ಯಾಸಕರಾದ ಸಂತೋಷ್ ಕುಮಾರ್ ಎನ್.ಜಿ. ನೇರಿಗಿ, ಲಿಂಗರಾಜ್ ಈ.ಹೆಚ್. ನೇರಿಗಿ, ನಂದೀಶ್ ಬದಾಮಿ, ಶ್ರೀನಿವಾಸ್‌ ಡಿ.ಸಿ., ಶಿವಕುಮಾರ್ ಡಿ.ಇ, ಮತ್ತು ಹೊನ್ನಪ್ಪ ಗೌಡ‌ ಸಂತೇಬೆನ್ನೂರು ಇವರುಗಳು ನೀಡಿದ ಸಹಕಾರದಿಂದ ಈ ಹಂತದವರೆಗೆ ಕಾರ್ಯ ನಿರ್ವಹಿಸಲು ಅನುವಾಗಿದೆ.

Leave a Reply

Your email address will not be published. Required fields are marked *

error: Content is protected !!