Robbers: ಬ್ಯಾಂಕ್ ದರೋಡೆಕೊರನಿಗೆ ದಾವಣಗೆರೆ ಫೋಲೀಸರಿಂದ ಗುಂಡೆಟು; ನಾಲ್ವರ ಬಂಧನದಿಂದ ಉಪಯುಕ್ತ ಮಾಹಿತಿ

ದಾವಣಗೆರೆ: (Robbers) ಬೆಣ್ಣೆ ನಗರಿ ಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದ್ದು, ಬ್ಯಾಂಕ್ ದರೋಡೆಗೆ ಪ್ಲಾನ್ ಮಾಡಿ ಉತ್ತರ ಪ್ರದೇಶದಿಂದ ಆಗಮಿಸುತ್ತಿದ್ದ ದರೋಡೆಕೋರ ಗ್ಯಾಂಗ್ ಪ್ಲಾನ್ ಅನ್ನು ದಾವಣಗೆರೆ ಪೊಲೀಸರು ತಪ್ಪಿಸಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಿದ ದರೋಡೆಕೋರನ ಕಾಲನ್ನು ಪೋಲೀಸ್ ಬುಲೆಟ್ ಸೀಳಿದ್ದು, ಪೊಲೀಸ್ ಫೈರಿಂಗ್ ನ ಥ್ರಿಲ್ಲಿಂಗ್ ಸ್ಟೋರಿ ಇಲ್ಲಿದೆ ನೋಡಿ
ಘಟನೆ ನಡೆದ ಸ್ಥಳದಲ್ಲಿ ಭಯದ ವಾತಾವರಣದಲ್ಲಿ ನಿಂತಿರುವ ಜನ, ಡಿಕ್ಕಿಯಾಗಿ ನಿಂತಿರುವ ಕಾರುಗಳು, ದರೋಡೆಕೋರರಿಗೆ ಉತ್ತರ ಕೊಟ್ಟ ಪೊಲೀಸರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು, ಇದೆಲ್ಲ ಕಂಡು ಬಂದಿದ್ದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಅರಬಘಟ್ಟ ಗ್ರಾಮದ ಕ್ರಾಸ್ ಬಳಿ, ಇಂದು ಬೆಳ್ಳಂ ಬೆಳಗ್ಗೆ ದರೋಡೆಕೋರರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದು, ದರೋಡೆಕೋರಿಗೆ ಪೊಲೀಸರು ಸರಿಯಾಗಿ ಬುದ್ದಿ ಕಲಿಸಿದ್ದಾರೆ..
ದರೋಡೆಕೋರರು ಬರುವುದು ಖಚಿತ ಮಾಹಿತಿ ಮೇರೆಗೆ ಹೊನ್ನಾಳಿ ಠಾಣೆಯ ಪೊಲೀಸರು ಕಡದಕಟ್ಟೆ ಚಕ್ ಪೋಸ್ಟ್ ಬಳಿ ರಾತ್ರಿ 1 ಗಂಟೆ ಸುಮಾರಿಗೆ ವಾಹನಗಳ ತಪಾಸಣೆ ನಡೆಸುತ್ತಿದ್ದರು, ಅದೇ ಸಮಯಕ್ಕೆ ಯುಪಿ ನಂಬರ್ ಪ್ಲೇಟ್ ಇರುವ ಎರಡು ಕಾರುಗಳು ಬರುತ್ತಿದ್ದು ಅವುಗಳನ್ನು ತಡೆಯಲು ಪೊಲೀಸರು ಮುಂದಾಗಿದ್ದೇ ತಡ ನಿಲ್ಲಿಸದೇ ಹಾಗೇ ಹೋಗಿದ್ದಾರೆ. ಯುಪಿ ಕಾರುಗಳನ್ನು ಬೆನ್ನಟ್ಟಿದ ಪೊಲೀಸರು ಎರಡು ಕಾರ್ ಗಳಲ್ಲಿದ್ದ ಏಳು ಜನ ದರೋಡೆಕೋರರನ್ನು ಹಿಡಿಲು ಪ್ರಯತ್ನ ಮಾಡಿದ್ದು, ನ್ಯಾಮತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿ ನೇತೃತ್ವದ ತಂಡ ಅರಬಘಟ್ಟ ಬಳಿ ಅಡ್ಡಲಾಗಿ ಗಾಡಿ ನಿಲ್ಲಿಸಿದ್ದಾರೆ,
ಉತ್ತರ ಪ್ರದೇಶದ ಎರಡು ಕಾರುಗಳು ಡಿಕ್ಕಿ ಹೊಡೆದುಕೊಂಡು ಅರೋಪಿಗಳು ಓಡಿ ಹೋಗಲು ಯತ್ನಿಸಿದ್ದು , ಕೂಡಲೇ ನಿಲ್ಲುವಂತೆ ಸೂಚನೆ ನೀಡಿ ಗಾಳಿಯಲ್ಲಿ ಎರಡು ಗುಂಡುಗಳನ್ನು ಹಾರಿಸಿದರೂ ಕೂಡ ದರೋಡೆಕೋರ ನ್ಯಾಮತಿ ಠಾಣೆಯ ಕಾನಿಸ್ಟೇಬಲ್ ಅನಂದ್ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾನೆ..ಕೂಡಲೇ ಇನ್ಸ್ಪೆಕ್ಟರ್ ರವಿ ಯುಪಿಯ ದರೋಡೆಕೋರ ಗುಡ್ಡು ಅಲಿಯಾನ್ ಗುಡು ಖಾಲಿಯಾ ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ಅಲ್ಲದೆ ಆತನ ಜೊತೆಗಿದ್ದ ಉತ್ತರ ಪ್ರದೇಶ ಮೂಲದ ಹಸ್ರತ್ ಅಲಿ, ಅಸಾಂ ಯಾನೆ ಟನ್ ಟನ್, ಕಮರುನ್ ಯಾನೆ ಬಾಬು ಸೆರಲಿ ಬಂಧನವಾಗಿದ್ದು, ಉಳಿದ ಗ್ಯಾಂಗ್ ನ ನಟೋರಿಯಸ್ ಲೀಡರ್ ರಾಜಾರಾಮ್, ಬಾಬುಷಾ, ಹಾಗೂ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಆಪೀಜ್ ಪರಾರಿಯಾಗಿದ್ದಾರೆ. ಪರಾರಿಯಾದ ಅರೋಪಿಗಳ ಬಂಧನಕ್ಕೆ ಎಸ್ ಪಿ ನಾಲ್ಕು ತಂಡ ರಚನೆ ಮಾಡಿದ್ದು,, ಪೈರಿಂಗ್ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳದಲ್ಲೇ ಮಚ್ಚು, ಬುಲೇಟ್ ಎರಡು ಕಾರುಗಳು ಮಂಕಿ ಕ್ಯಾಪ್ ಸಿಕ್ಕಿದ್ದು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.
ಇದು ಉತ್ತರ ಪ್ರದೇಶದ ಕಕ್ರಾಳ್ ಗ್ಯಾಂಗ್ ಎಂದು ತಿಳಿದು ಬಂದಿದ್ದು, ಇವರು ಸವಳಂಗದ ಬ್ಯಾಂಕ್ ದರೋಡೆಗೆ ಬಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಕಳೆದ ಕೆಲ ತಿಂಗಳ ಹಿಂದೆ ನ್ಯಾಮತಿಯಲ್ಲಿ ನಡೆದ ಎಸ್ ಬಿಐ ಬ್ಯಾಂಕ್ ನ ದರೋಡೆಗೆ ಇವರಿಗೂ ಸಂಬಂಧ ಇದೆ ಎಂದು ಶಂಕೆ ವ್ಯಕ್ತವಾಗುತ್ತಿದ್ದು ತನಿಖೆ ನಡೆಸುತ್ತಿದ್ದಾರೆ.
ಆರೋಪಿತರ ವಿವರ:
01)ಗುಡ್ಡು @ ಗುಡ್ಡು ಕಾಲಿಯಾ ತಂದೆ ಇಸ್ತಾಕ್ ಅಲಿ, 45 ವರ್ಷ, ಹಣ್ಣಿನ ವ್ಯಾಪಾರಿ ವಾಸ ವಾರ್ಡ್ ನಂ 07 ಕಕ್ರಾಳ ಗ್ರಾಮ, ದಾಟಗಂಜ್ ತಾಲ್ಲೂಕ್, ಬಾದಾಯ್ ಜಿಲ್ಲೆ, ಉತ್ತರ ಪ್ರದೇಶ ರಾಜ್ಯ. 2) ಹಜರತ್ ಅಲಿ ತಂದೆ ಸಿದ್ದೀಕ್ ಅಲಿ 50 ವರ್ಷ, ಹಣ್ಣಿನ ವ್ಯಾಪಾರಿ, ವಾಸ ವಾರ್ಡ್ ನಂ 09 ಕಕ್ರಾಳ ಗ್ರಾಮ, ದಾಟಗಂಜ್ ತಾಲ್ಲೂಕ್ ಬಾದಾಯ್ ಜಿಲ್ಲೆ ಉತ್ತರ ಪ್ರದೇಶ ರಾಜ್ಯ. 3) ಅಸ್ಲಾಂ @ ಟನ್ ಟನ್ ತಂದೆ ಮಿಟೂವರಿ, 55 ವರ್ಷ,ವಾಸ ವಾರ್ಡ್ ನಂ: 08 ಕಕ್ರಾಳ ಗ್ರಾಮ, ದಾಟಗಂಜ್ ತಾಲ್ಲೂಕ್ ಬಾದಾಯ್ ಜಿಲ್ಲೆ ಉತ್ತರ ಪ್ರದೇಶ ರಾಜ್ಯ. 4) ಕಮರುದ್ದೀನ್ @ ಬಾಬು ಸೆರೆಲಿ ತಂದೆ ತಾರುದ್ದೀನ್, 40 ವರ್ಷ, ಸರೆಲಿ ಗ್ರಾಮ, ಬರೆಲಿ ಮಂಡಲ್ ತಾಲ್ಲೂಕ್ ಬಾದಯ್ ಜಿಲ್ಲೆ ಉತ್ತರ ಪ್ರದೇಶ ರಾಜ್ಯದವರು ಎಂದು ತಿಳಿಸಿರುತ್ತಾರೆ.
ಸ್ಥಳದಲ್ಲಿದ್ದ ಕಾರುಗಳನ್ನು ಪರೀಶಿಲಿಸಲಾಗಿ 01) ಯುಪಿ-24-ಎಯು-1365 ನೇ ನೊಂದಣಿ ಸಂಖ್ಯೆಯ ಬಿಳಿ ಬಣ್ಣದ ಮಾರುತಿ ಸುಜುಕಿ ಕಂಪನಿಯ ಯರಟೀಗಾ ಕಾರು ಆಗಿರುತ್ತದೆ. ಹಾಗು 02) ಯುಪಿ-16-ಎಎಸ್-5712 ನೇ ನೊಂದಾಣಿ ಸಂಖ್ಯೆಯ ಗ್ರೇ ಬಣ್ಣದ ಮಹಿಂದ್ರಾ ಕಂಪನಿಯ XUV 500 ಮಾಡಲ್ ನ ಕಾರು ಆಗಿರುತ್ತದೆ. ತಪ್ಪಿಸಿಕೊಂಡು ಓಡಿ ಹೋದ ಇತರೆ ಆರೋಪಿಗಳ ಬಗ್ಗೆ ವಿಚಾರಿಸಲಾಗಿ 5) ರಾಜಾರಾಮ್, ವಾಸ ಬಚೌರ ಗ್ರಾಮ, ಬದಾಯೂ ಜಿಲ್ಲೆ, ಉತ್ತರ ಪ್ರದೇಶ ರಾಜ್ಯ 6) ಬಾಬುಷಾ, ವಾಸ ನೌಲಿ ಗ್ರಾಮ, ಬದಾಯೂ ಜಿಲ್ಲೆ, ಉತ್ತರ ಪ್ರದೇಶ ರಾಜ್ಯ. ಮತ್ತು 7) ಆಪೀಜ್, ವಾಸ ಮಾಲೂರು, ಕೋಲಾರ ಜಿಲ್ಲೆ ಎಂದು ತಿಳಿಸಿರುತ್ತಾರೆ.
ಸದರಿ ಆರೋಪಿತರುಗಳಿಂದ ಕೃತ್ಯವೆಸಗಲು ಬಳಸಿದ್ದ ಎರಡು ಕಾರುಗಳು. 04 ಜೀವಂತ ಗುಂಡುಗಳು, 01 ಆಕ್ಸಿಜನ್ ಸಿಲೆಂಡರ್ ರೇಗ್ಯೂಲೇಟರ್, 03 ಕಬ್ಬಿಣದ ರಾಡ್, 05 ಪಾಕೆಟ್ ಕಾರದ ಪುಡಿ, 05 ಮಂಕಿ ಕ್ಯಾಪ್, 05 ಜೊತೆ ಹ್ಯಾಂಡ್ ಗ್ಲೌಜ್, ಒಂದು ಮಚ್ಚುನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿತರ ಹಿನ್ನೇಲೆ:
ಸದರಿ ಮೇಲ್ಕಂಡ 04 ಆರೋಪಿತರುಗಳು ಈ ಹಿಂದೆ ಈ ಕೆಳಕಂಡ ಸ್ವತ್ತು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಳ್ಳಿ ಠಾಣೆಯ ಗುನ್ನೆ ನಂ 29/2022 ಕಲಂ:-457, 380 ಐಪಿಸಿ ರೀತ್ಯಾ ಪ್ರಕರಣದಲ್ಲಿ 3 ಕೋಟಿ, 18 ಲಕ್ಷ, 96 ಸಾವಿರದ 508 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, 14 ಲಕ್ಷ 86 ಸಾವಿರ, 432 ರೂಪಾಯಿ ನಗದು ಹಣ ಒಟ್ಟು -3,33,82,940/- ರೂ ಮೌಲ್ಯದ ಸ್ವತ್ತನ್ನು ಕಳ್ಳತನ ಮಾಡಿರುತ್ತಾರೆ.
ಕೊಪ್ಪಳ ಜಿಲ್ಲೆ ಬೆವೂರು ಪೊಲೀಸ್ ಠಾಣೆಯ ಗುನ್ನೆ ನಂ 78/2020 ಕಲಂ 457,458, 382, 380, 201,120 ಐಪಿಸಿ ರೀತ್ಯಾ ಪ್ರಕರಣದಲ್ಲಿ 1 ಕೋಟಿ, 46ಲಕ್ಷ, 56 ಸಾವಿರದ 905 ರೂಪಾಯಿ ಮೌಲ್ಯದ 3ಕೆಜಿ 761 ಗ್ರಾಂ ಬಂಗಾರದ ಆಭರಣಗಳು ಹಾಗೂ 21.75 ಲಕ್ಷ ನಗದು ಹಣ ಒಟ್ಟು 1,46,55,905/- ಮೌಲ್ಯದ ಸ್ವತ್ತನ್ನು ಕಳ್ಳತನ ಮಾಡಿರುತ್ತಾರೆ
ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸ್ ಠಾಣೆಯ ಗುನ್ನೆ ನಂ 10/2014 ಕಲಂ 457,511ಐಪಿಸಿ ರೀತ್ಯಾ ದಾಖಲಾಗಿರುವ ಪ್ರಕರಣಗಳಲ್ಲಿ ಆರೋಪಿತರಾಗಿರುತ್ತಾರೆ
ಸದರಿ ಮೇಲ್ಕಂಡ 04 ಆರೋಪಿತರುಗಳಿಂದ ಪತ್ತೆಯಾದ ಹೊಸ ಪ್ರಕರಣಗಳು
ಶಿವಮೊಗ್ಗ ಜಿಲ್ಲೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ 152/2024 ಕಲಂ 331 (3),331(4),305(ಎ) ಬಿಎನ್ಎಸ್ ರೀತ್ಯಾ ದಾಖಲಾಗಿರುವ ಎಸ್ ಬಿ ಐ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ 1,25,000/- ಮೌಲ್ಯದ ಕ್ಯಾಮೇರಾ, ಡಿವಿಆರ್, ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡಿರುತ್ತಾರೆ.
ಹಾವೇರಿ ಜಿಲ್ಲೆ ತಡಸ ಪೊಲೀಸ್ ಠಾಣೆಯ ಗುನ್ನೆ ನಂ 95/2021 ಕಲಂ:- 457, 380 ಐಪಿಸಿ ದಾಖಲಾಗಿರುವ ಜ್ಯೂವೆಲ್ಲರಿ ಶಾಪ್ ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ 1,55,000/- ಮೌಲ್ಯದ ಬೆಳ್ಳಿಯ ಮತ್ತು ರೋಲ್ಡ್ ಗೋಲ್ಡ್ ಸಾಮಾನುಗಳನ್ನು ಕಳ್ಳತನ ಮಾಡಿರುತ್ತಾರೆ.
ತಮಿಳುನಾಡಿನ ಕೃಷ್ಣಗಿರಿಯ ಬೆರಿಗಾಯಿ ಪೊಲೀಸ್ ಠಾಣೆಯ ಗುನ್ನೆ ನಂ 179/2024 ಕಲಂ:- 305, 62 ಬಿ ಎನ್ ಎಸ್ ರೀತ್ಯಾ ದಾಖಲಾಗಿರುವ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಯತ್ನ ಪ್ರಕರಣದಲ್ಲಿ ಆರೋಪಿತರಾದ ಗುಡ್ಡು ಕಾಲಿಯ & ಹಜರತ್ ಅಲಿ ರವರು ಭಾಗಿಯಾಗಿರುತ್ತಾರೆ
ಫೇಬ್ರುವರಿ 2025 ರಲ್ಲಿ ಜಾರ್ಕಾಂಡ್ ರಾಜ್ಯದ ಪಲಮು ಜಿಲ್ಲೆಯಲ್ಲಿ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ.
ಸದರಿ ಆರೋಪಿತರುಗಳು ಕರ್ನಾಟಕದಲ್ಲಿ 2014 ರಿಂದ 2024 ರವರೆಗೆ ಕರ್ನಾಟಕ ರಾಜ್ಯದ ಹಲವು ಕಡೆ ಬ್ಯಾಂಕ್ ಗಳು ಸೇರಿದಂತೆ ಇತರೆ ಸ್ವತ್ತಿನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.
ಹೀಗೆ ಮೇಲ್ಕಂಡ ಆರೋಪಿತರುಗಳು ಕರ್ನಾಟಕ ರಾಜ್ಯವಲ್ಲದೇ ಹೊರ ರಾಜ್ಯಗಳಾದ ತಮಿಳ್ನಾಡು, ಉತ್ತರ ಪ್ರದೇಶ, ಆಂದ್ರಪ್ರದೇಶ, ತೆಲಂಗಾಣ, ಮದ್ಯಪ್ರದೇಶ, ದೆಹಲಿ ಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ. ಮೇಲ್ಕಂಡ ಆರೋಪಿತರುಗಳಲ್ಲಿ 01)ಗುಡ್ಡು @ ಗುಡ್ಡು ಕಾಲಿಯಾ, 2) ಅಸ್ಲಾಂ @ ಟನ್ ಟನ್, 3) ಕಮರುದ್ದೀನ್ ಇವರುಗಳು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಂಧನವಾಗಿರುತ್ತಾರೆ.
ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ಸಾರ್ವಜನಿಕರು ಭಯಗೊಳಿಸಬಹುದಾಗಿದ್ದ ಬ್ಯಾಂಕ ದರೋಡೆ ಪ್ರಕರಣವನ್ನು ತಡೆಗಟ್ಟುವಲ್ಲಿ ಹಾಗೂ ಕುಖ್ಯಾತ ಅಂತರ್ ರಾಜ್ಯ ಬ್ಯಾಂಕ್ ಕಳ್ಳತನ ಮಾಡುವ ಆರೋಪಿತರನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಅಧಿಕಾರಿಗಳಾದ ಚನ್ನಗಿರಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ಸ್ಯಾಮ್ ವರ್ಗೀಸ್ ಐಪಿಎಸ್ ರವರು & ದಾವಣಗೆರೆ ಗ್ರಾಮಾಂತರ ವಿಭಾಗದ ಪೊಲೀಸ್ ಉಪಾಧೀಕ್ಷರಾದ ಶ್ರೀ ಬಸವರಾಜ್ ಬಿ.ಎಸ್ ರವರು, ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರವಿ ಎನ್ ಎಸ್ ಹಾಗೂ ಹೊನ್ನಾಳಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಸಂಜೀವ್ ಕುಮಾರ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಸಾಗರ್ ಅತ್ತರವಾಲಾ ರವರು ಹಾಗೂ ಡಿಸಿಆರ್ ಬಿ ಘಟಕದ ಸಿಬ್ಬಂದಿಗಳಾದ ಮಜೀದ್ ಕೆ ಸಿ, ಆಂಜನೇಯ, ರಾಘವೇಂದ್ರ, ಬಾಲಾಜಿ, ರಮೇಶ್ ನಾಯ್ಕ್, ಮಲ್ಲಿಕಾರ್ಜುನ ಮತ್ತು ನ್ಯಾಮತಿ ಪೊಲೀಸ್ ಠಾಣೆಯ ಮಹೇಶ್ ನಾಯ್ಕ್, ಆನಂದ, ಶಿವರಾಜ್, ದೇವರಾಜ್, ನಾಗರಾಜ್ ನಾಯ್ಕ್,ಮುರಳಿ, ಹೊನ್ನಾಳಿ ಪೊಲೀಸ್ ಠಾಣೆಯ ಬಸವರಾಜ್ ಮತ್ತು ರಾಜಶೇಖರ್ ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಶ್ಲಾಘೀಸಿರುತ್ತಾರೆ.
ಒಟ್ಟಾರೆಯಾಗಿ ದರೋಡೆಕೋರ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ದು, ಹಲ್ಲೆಗೊಳಗಾದ ಪೊಲೀಸ್ ಕಾನಿಸ್ಟೇಬಲ್ ನ್ಯಾಮತಿ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಂಡು ತಗುಲಿದ ದರೋಡೆಕೋರನಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಇನ್ನುಳಿದ ದರೋಡೆಕೋರರ ಶೋಧಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.