ಆರ್ ಎಸ್ ಎಸ್ ಮಾತು ಕೇಳಿ ಬಿ ಎಸ್ ವೈ ಬದಲಿಸಿದ್ರೆ ಮಹಾರಾಷ್ಟ್ರದಲ್ಲಾದಂತೆ ಕರ್ನಾಟಕದಲ್ಲೂ ಪಕ್ಷಕ್ಕೆ ಹೊಡೆತ – ಡಾ.ಅಭಿನವ ಅನ್ನದಾನ ಸ್ವಾಮೀಜಿ

ಹೊಸಪೇಟೆ: ಸಮರ್ಥ ನಾಯಕರಾಗಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದ್ದೇಯಾದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಅಧಿಕಾರಕ್ಕೇರಲು ಅನುಕೂಲವಾಗಲಿದ್ದು ಇದರಲ್ಲಿ ಯಾವುದೇ ಸಂಶಯವೂ ಇಲ್ಲ ಎಂದು ಹಾಲಕೆರೆ ಜಗದ್ಗುರು ಡಾ.ಅಭಿನವ ಅನ್ನದಾನ ಸ್ವಾಮೀಜಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಿಸಿದ್ದೇ ಆದಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಉಳಿಯಲು ಸಾಧ್ಯವಿಲ್ಲ. ಇಲ್ಲಿ ಪಕ್ಷ ನೆಲೆನಿಂತಿರುವುದೇ ಬಿ.ಎಸ್. ಯಡಿಯೂರಪ್ಪ ಅವರ ವರ್ಚಸ್ಸಿನಿಂದ ಮತ್ತು ಅವರ ಪರಿಶ್ರಮದಿಂದ ಎಂದರು.
ಹಾಗೊಂದು ವೇಳೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದೇ ಆದಲ್ಲಿ ಪಕ್ಷ ಬಲಹೀನವಾಗುತ್ತದೆ. ಕಾರಣ ಅವರನ್ನು ನೋಡಿಯೇ ಜನರು ಮತ ಹಾಕುತ್ತಿದ್ದಾರೆ. ಅವರೊಬ್ಬ ಸಮರ್ಥ ನಾಯಕ ಎಂದರು.
ಹೈಕಮಾಂಡ್ ಪಕ್ಷವನ್ನು ಬೆಳೆಸುವಂತಹ ನಿರ್ಧಾರ ಕೈಗೊಳ್ಳಬೇಕು. ಆದರೆ, ಬರೀ ಆರ್ ಎಸ್ ಎಸ್ ನವರ ಮಾತು ಕೇಳಿ ನಾಯಕತ್ವ ಬದಲಿಸಲು ಹೋದರೆ ಮಹಾರಾಷ್ಟ್ರದಲ್ಲಾದಂತೆ ಕರ್ನಾಟಕದಲ್ಲೂ ಪಕ್ಷಕ್ಕೆ ಹೊಡೆತ ಬೀಳುತ್ತದೆ ಎಂದು ಅವರು ಭವಿಷ್ಯ ನುಡಿದರು.
ಹೈಕಮಾಂಡ್ ಸಿಎಂ ಮುಂದುವರೆಸಬೇಕೊ ಅಥವಾ ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಆ ಬಗ್ಗೆ ಮೊದಲು ಅವರು ಸ್ಪಷ್ಟ ನಿಲುವು ತಾಳಬೇಕು. ಹಾಗೊಂದು ವೇಳೆ ತಪ್ಪಾಗಿ ನಿರ್ಧಾರ ಕೈಗೊಂಡು ಸಿಎಂ ಬದಲಾಯಿಸಿದ್ದೇ ಆದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲದಂತಾಗುತ್ತದೆ ಎಂದಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರಿಗೆ ವಿವಿಧ ಮಠಾಧೀಶರ ಬೆಂಬಲವಿದೆ. ಯಡಿಯೂರಪ್ಪ ಲಿಂಗಾಯತರು ಎಂಬ ಕಾರಣಕ್ಕೆ ನಾವು ಅವರನ್ನು ಬೆಂಬಲಿಸುತ್ತಿಲ್ಲ. ಅವರೊಬ್ಬ ಸಮರ್ಥ ನಾಯಕರು. ಅವರು ಜಾತ್ಯಾತೀತ, ಧರ್ಮಾತೀತವಾಗಿ ಬಡಜನರ ಪರ ಕೆಲಸ ಮಾಡುತ್ತಾರೆ. ಹಾಗಾಗಿ, ಅವರಿಗೆ ನಮ್ಮ ಬೆಂಬಲವೂ ಇದೆ. ಅವರೇ ಮುಖ್ಯಮಂತ್ರಿಯಾಗಿ ಉಳಿಯುವುದು ಸೂಕ್ತ ಎಂದರು.