ಸ್ವಂತ ವರ್ಚಸ್ಸಿನ ಮೇಲೆ ಸ್ಪರ್ಧೆಗೆ ಬರುವಂತೆ ಬಿಜೆಪಿಗರಿಗೆ ಎಸ್.ಎಸ್. ಮಲ್ಲಿಕಾರ್ಜುನ ಸವಾಲು
ದಾವಣಗೆರೆ: ನಾನು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ಹೆಸರು ಬಿಟ್ಟು ಸ್ಪರ್ಧೆಗಿಳಿಯುತ್ತೇನೆ. ಬಿಜೆಪಿಯವರು ತಮ್ಮ ಪಕ್ಷ ಹಾಗೂ ಮೋದಿ ಹೆಸರು ಬಿಟ್ಟು ಸ್ವಂತ ವರ್ಚಸ್ಸಿನ ಮೇಲೆ ಸ್ಪರ್ಧೆಗೆ ಬರಲಿ. ಜನರು ಯಾರಿಗೆ ಮತ ಹಾಕುತ್ತಾರೆ ನೋಡೋಣ ಎಂದು ಎಸ್.ಎಸ್. ಮಲ್ಲಿಕಾರ್ಜುನ್ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ದಾವಣಗೆರೆ ನಗರದ ಹಳೇಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಬುಧವಾರ ಅಗ್ನಿಕುಂಡ ಕಾರ್ಯದಲ್ಲಿ ಪಾಲ್ಗೊಂಡು ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಶಿಕ್ಷಣ, ಆಹಾರ, ವಸತಿ ಹಾಗೂ ಆರೋಗ್ಯ ಅಗತ್ಯವಿದೆ. ಈ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ನಮ್ಮ ಸರ್ಕಾರ ಎಂದಿಗೂ ಮುಂದಿದೆ. ಜಿಲ್ಲಾ ಹೆಚ್ಚು ಅಭಿವೃದ್ಧಿ ಪಥದತ್ತ ಸಾಗಬೇಕಿದೆ. ನಮ್ಮ ಕಾರ್ಯಕರ್ತರೇ ನಮಗೆ ಬೆನ್ನುಲುಬು. ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಹೆಚ್ಚಿನ ಸೀಟು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದರು.
ಕಟ್ಟೆ ಮೇಲೆ ಕುಳಿತು ತೂರಾ ಮುಚ್ಚಿ ಆಡುವವರಿಗೆ ಅಧಿಕಾರ ಕೊಟ್ಟಂತಾಗಿದೆ ಎಂದು ಬಿಜೆಪಿ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಮಲ್ಲಿಕಾರ್ಜುನ್, ನಗರದ ಅಭಿವೃದ್ಧಿ ಮಾಡುವಾಗ ತಾಂತ್ರಿಕತೆಯ ಜ್ಞಾನ ಇರಬೇಕು. ಏನು ಮಾಡಿದರೆ ಊರು ಏನಾಗುತ್ತದೆ ಎಂಬ ಜ್ಞಾನ ಇರಬೇಕು ಎಂದು ಕಿಡಿಕಾರಿದರು.
ನಾನು ಕುಂದುವಾಡ ಕೆರೆ ಮಾಡಿದಾಗ ಸಾಕಷ್ಟು ವಿರೋಧ ಬಂದಿತ್ತು. ಈಗ ನಗರದ ಜನರಿಗೆ ಅನುಕೂಲವಾಗಿದೆ. ಟಿವಿ ಸ್ಟೇಷನ್ ಕೆರೆಯನ್ನೂ ಅಭಿವೃದ್ಧಿ ಪಡಿಸಿದ್ದೆ. ಆದರೆ ಈಗ ಮತ್ತೆ ಅಭಿವೃದ್ಧಿ ನೆಪದಲ್ಲಿ ಲೂಟಿ ಹೊಡಿದ್ದಾರೆ. ಇಲ್ಲಿ ಹೇಳೋರೂ ಇಲ್ಲ ಕೇಳೋರು ಇಲ್ಲ ಎಂಬಂತಾಗಿದೆ ಎಂದರು.
1994ರಲ್ಲಿ ನೀರಿನ ಆಹಾಕಾರ ಅತಿಯಾಗಿತ್ತು. 2ನೇ ಹಂತದ ನೀರು ಸರಬರಾಜು ಯೋಜನೆ ತಂದು ಹಲವಾರು ಟ್ಯಾಂಕ್‌ಗಳನ್ನು ನಿರ್ಮಿಸಿದೆವು. ಆದರೆ ಇವರಿಗೆ ಎಲ್ಲಿ ಗುಂಡಿ ಅಗೆಯುತ್ತಾರೆ, ಎಲ್ಲಿ ಕಾಂಕ್ರೀಟ್ ಹಾಕುತ್ತಾರೆ ಎಂಬುದೇ ಗೊತ್ತಿಲ್ಲ. ಇವರನ್ನು (ಬಿಜೆಪಿಯವರು) ದೇವರೇ ಕಾಪಾಡಬೇಕಿದೆ. ಬೇರೆ ನಗರಗಳಲ್ಲಿ ಯಾವ ರೀತಿ ಅಭಿವೃದ್ಧಿ ನಡೆಯುತ್ತಿವೆ ಎಂಬುದನ್ನು ತೋರಿಸಲು ಇವರನ್ನು ಎಲ್ಲಿಗಾದರೂ ಪ್ರವಾಸ ಕರೆದುಕೊಂಡು ಹೋಗಬೇಕಿದೆ. ನಾನೇ ಕೈ ಮುಗಿದು ಕರೆದುಕೊಂಡು ಹೋಗಬೇಕಿದೆ ಎಂದರು.
ಭಾಷಾನಗರ ಭಾಗದ ಜನತೆ ರಾತ್ರಿ 9ರಿಂದ ಬೆಳಿಗ್ಗೆ ವರೆಗೂ ದೂಡುವ ಗಾಡಿ, ಸೈಕಲ್‌ಗಳಿಂದ ನೀರು ತರಲು ಬಾತಿ ಕೆರೆಗೆ ಹೋಗುತ್ತಿದ್ದರು. ಇಲ್ಲಿಂದ ಅಲ್ಲಿವರೆಗೂ ಸರದಿಯಲ್ಲಿ ನಿಲ್ಲುತ್ತಿದ್ದರು. ಕೆರೆ ನೀರು ತಂದು ಸೋರಿ ಇಲ್ಲಿ ಹಣಕ್ಕೆ ಮಾರಲಾಗುತ್ತಿತ್ತು. ಇವನ್ನೆಲ್ಲಾ ಜನ ಮರೆತಿಲ್ಲ. ಆಗ ನಾನು 13 ಟ್ಯಾಂಕ್‌ಗಳನ್ನು ಮಾಡಿಸಿದ್ದೆ. ಮಳೆ ಹೆಚ್ಚಾದಾಗ ಮನೆಗಳು ಬೀಳುತ್ತಿದ್ದವು. ಅದಕ್ಕೆ ಸೂಕ್ತ ಮಾರ್ಗೋಪಾಯ ಕಂಡುಕೊಂಡಿದ್ದೆವು. ನಗರದಲ್ಲಿ ಶಾಶ್ವತ ಕಾಮಗಾರಿಗಳ ಅಗತ್ಯವಿದೆ ಎಂದರು.
ಜಿಲ್ಲೆಯಲ್ಲಿ ಪದವಿ ಪಡೆದ ನಿರುದ್ಯೋಗಿಗಳು ಎಷ್ಟಿದ್ದಾರೆ? ಅವರಿಗೆ ಉದ್ಯೋಗ ಕೊಡುವ ಚಿಂತನೆ ಮಾಡಬೇಕು. ಅದು ಬಿಟ್ಟು ಬರೀ ಮೋದಿ ಮೋದಿ ಎನ್ನುತ್ತಿದ್ದಾರೆ. ಮೋದಿ ಹೆಸರು ಹೇಳಿಕೊಂಡೇ ಇವರು ಗೆದ್ದಿದ್ದಾರೆ ಎಂದರು. ಗೆದ್ದು ಊರನ್ನೆಲ್ಲಾ ಹಾಳು ಮಾಡಿಟ್ಟಿದ್ದಾರೆ. ಇದನ್ನು ಸರಿ ಮಾಡಲು ಹತ್ತು ವರ್ಷಗಳೇ ಬೇಕಾಗುತ್ತವೆ ಎಂದರು.
ಐದು ವರ್ಷದ ಹಿಂದಿನ ನಮ್ಮ ಕೆಲಸಗಳನ್ನು ಇವರು ಉದ್ಘಾಟಿಸಿದ್ದಾರೆ. ಸ್ಮಾರ್ಟ್ ಸಿಟಿ ನಾವು ಮಾಡಿಸಿದ್ದು ಎನ್ನುತ್ತಾರೆ. ಸ್ಮಾರ್ಟ್ ಸಿಟಿಗೆ 9ನೇ ನಂಬರ್ ಬಂದಿದೆ. ಈ ನಂಬರ್ ತಂಬಾಕು ತಿಕ್ಕಿ ತಂದಿದ್ದಾರಾ? ಗುಟ್ಕಾ ಮಾರಿ ತಂದಿದ್ದಾರಾ? ಅಲ್ಲಿ ಲಾಭವಿದ್ದರೂ ಇಲ್ಲಿ 40% ಕಮಿಷನ್ ಪಡೆಯುತ್ತಾರೆ ಅದೇ ನಮಗೆ ಬೇಜಾರು ಎಂದು ಪರೋಕ್ಷವಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಕುಟುಕಿದರು.
ಕೋವಿಡ್ ವೇಳೆ ಜನರು ಸಾಕಷ್ಟು ತೊಂದರೆ ಅನುಭವಿಸಿದರು. ಸ್ವಂತವಾಗಿ ಲಸಿಕೆ ತರಿಸಿ ನೀಡಿದೆವು. ಈಗ ಇವರು ನಾವು ಕೋವಿಡ್ ಅನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ ಎಂದು ಹೇಳುತ್ತಾರೆ. ಜನರು ಸಾಯುವಾಗ ಎಲ್ಲಿ ಹೋಗಿದ್ದರು ಇವರೆಲ್ಲಾ? ಎಂದು ಎಸ್ಸೆಸ್ಸೆಂ ಪ್ರಶ್ನಿಸಿದರು.