SAR:ಎಸ್ ಎಸ್ ಗೆ ಟಾಂಗ್: ಸಿನಿಯಾರಿಟಿ ಜತೆಗೆ ಸಚಿವ ಸ್ಥಾನ ನಿಭಾಯಿಸುವ ಶಕ್ತಿ ಇದೆ – ಎಸ್ ಎ ರವೀಂದ್ರನಾಥ್

ದಾವಣಗೆರೆ: ಹೈಕಮಾಂಡ್ ಗೆ ಕೊಟ್ಟ ಮಾತಿನಂತೆ ಯಡಿಯೂರಪ್ಪ ನಡೆದು ಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ ಎಂಬುದನ್ನು ಅವರು ಆಚರಣೆಯಲ್ಲಿ ತೋರಿಸಿದ್ದಾರೆ ಎಂದು ದಾವಣಗೆರೆ ಉತ್ತರ ಶಾಸಕ ಎಸ್.ಎ. ರವೀಂದ್ರನಾಥ್ ಬಿಎಸ್ ವೈ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎರಡು ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿರುವುದಾಗಿ ವರಿಷ್ಠರ ಬಳಿ ಮೊದಲೇ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಅವರ ಶಿಸ್ತಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಹೊಸ ಸಿಎಂ ಯಾರೇ ಆದರೂ ಅವರಿಗೆ ನಾವು ಬೆಂಬಲ ನೀಡುತ್ತೇವೆ. ಈಗ ರಾಜ್ಯದಲ್ಲಿ ಪ್ರಹ್ಲಾದ್ ಜೋಷಿ, ಸಂತೋಷ್ ಜಿ, ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ ಸೇರಿದಂತೆ ಐವರು ಸೀನಿಯರ್‌ಗಳಿದ್ದು, ಅವರೆಲ್ಲಾ ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ. ಇವರಲ್ಲಿ ಯಾರಾದರೂ ಸಿಎಂ ಆಗಬಹುದು ಅಥವಾ ಇವರನ್ನು ಬಿಟ್ಟು ಬೇರೆಯವರೂ ಸಿಎಂ ಆಗಬಹುದು ಎಂದರು.
ಬಿಜೆಪಿ ಅಂದರೆ ಲಿಂಗಾಯತರ ಪಕ್ಷ ಅನ್ನುವುದು ನಿಜಾ ಅದರಲ್ಲಿ ಸಂದೇಹವೇ ಇಲ್ಲ.ಬಿಎಸ್‌ವೈ ಕೆಜೆಪಿ ಕಟ್ಟಿದಾಗ ಲಿಂಗಾಯತರು ಬಿಜೆಪಿಗೆ ಬೆಂಬಲಿಸಿದ್ದರು, ಕೆಜೆಪಿಯಿಂದ ಆರು ಜನ ಮಾತ್ರ ಗೆಲುವು ಸಾಧಿಸಿದ್ದರು. ಆಗಲೂ ಲಿಂಗಾಯತರೂ ಬಿಜೆಪಿ ಜತೆಗಿದ್ದರು. ಈಗಲೂ ಜತೆಗಿದ್ದಾರೆ. ಬಿಎಸ್‌ವೈ ರಾಜೀನಾಮೆಯಿಂದ ಬಿಜೆಪಿ ಸಂಘಟನೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಎಸ್ ಯಡಿಯೂರಪ್ಪ ಅವರ ನಾಯಕತ್ವ ಬೆಂಬಲಿಸಿದ ಅಖಿಲ ಭಾರತ ವೀರಶೈವ ಮಹಾ ಸಭಾ ಹಾಗೂ ನೂರಾರು ಮಠಾಧೀಶರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರಲರು, ಹಣ ಇದ್ದವರು ಅಧಿಕಾರದಲ್ಲಿ ಇದ್ದವರನ್ನು ಬೆಂಬಲಿಸುತ್ತಾರೆ. ಹೊಸ ಸಿಎಂ ಬಂದರೆ ಅವರಿಗೂ ಹಾರ ಹಾಕಿ ಸ್ವಾಗತಿಸುತ್ತಾರೆ ಎಂದು ಪರೋಕ್ಷವಾಗಿ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಟಾಂಗ್ ಕೊಟ್ಟರು.
ತಾವು ಐದು ಬಾರಿ ಸೋತು, ಐದು ಬಾರಿ ಗೆದ್ದಿದ್ದು, ತಮಗೆ ಸಿನಿಯಾರಿಟಿ ಜತೆಗೆ ಸಚಿವ ಸ್ಥಾನ ನಿಭಾಯಿಸುವ ಶಕ್ತಿ ಇದೆ. ಹಾಗಾಗಿ, ತಮಗೂ ಸಚಿವ ಸ್ಥಾನ ನೀಡಿದರೆ ಅದನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.