ಸಚಿವ ಸ್ಥಾನ ಸಿಗದಿದ್ರೆ ಗುಮ್ಮುತ್ತಾ ಹೊನ್ನಾಳಿ ಹೋರಿ? ಮೊದಲಿನ ರೇಣುಕಾಚಾರ್ಯ ನಾನಲ್ಲ ಅಂದ ಮಾತಿನ ಮರ್ಮವೇನು?
ದಾವಣಗೆರೆ: ಅಂದಿನ ರೇಣುಕಾಚಾರ್ಯ ಬೇರೆ ಇಂದಿನ ರೇಣುಕಾಚಾರ್ಯನೇ ಬೇರೆ. ಫೀಲ್ಡ್ ಗೆ ಇಳಿಯಬೇಕಾದ್ರೆ ಎಲ್ಲದಕ್ಕೂ ರೆಡಿ ಆಗಿ ಇಳಿಯಬೇಕು..! ಮೌನವಾಗಿದ್ದರೆ ಯಾವ ಕೆಲಸವೂ ಆಗಲ್ಲ!
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಸಚಿವ ಸ್ಥಾನ ಖಾಲಿ ಇದೆ. ಮೌನವಾಗಿದ್ದರೆ ಯಾವ ಕೆಲಸವೂ ಆಗಲ್ಲ. ಹಾಗಾಗಿ, ದೆಹಲಿ ನಾಯಕರನ್ನು ಭೇಟಿ ಮಾಡಿದ್ದು, ಮಗು ಅಳದೇ ಇದ್ದರೆ ತಾಯಿ ಕೂಡ ಹಾಲು ಕೊಡುವುದಿಲ್ಲ ಎಂದು ಪರೋಕ್ಷವಾಗಿ ಸಚಿವ ಸ್ಥಾನ ಸಿಗದಿದ್ದರೆ ಸಿಡಿದೇಳುವ ಮುನ್ಸೂಚನೆ ನೀಡಿದರು.
ನಾನು ಸನ್ಯಾಸಿ ಅಲ್ಲ, ರಾಜಕಾರಣಿ, ಸಚಿವ ಸ್ಥಾನ ಸಿಕ್ಕರೆ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಸಿಗದಿದ್ದರೆ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. ನಾನು ಹಳೆಯ ರೇಣುಕಾಚಾರ್ಯ ಅಲ್ಲ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ ಎಂದರು.
ಸಚಿವ ಸ್ಥಾನದ ಹಂಚಿಕೆ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರಿತ್ತು ಆದರೆ ಕೊನೆಗಳಿಗೆಯಲ್ಲಿ ಸ್ಥಾನ ಮಿಸ್ ಆಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಬಿಎಸ್ ವೈ, ಅರುಣ್ ಸಿಂಗ್, ಸಂತೋಷ್ ಎಲ್ಲರನ್ನು ಭೇಟಿ ಮಾಡಿದ್ದೇನೆ ಎಂದರು.
ದಾವಣಗೆರೆ ಜಿಲ್ಲೆ ಸಚಿವ ಸ್ಥಾನ ನೀಡಲು ವರಿಷ್ಠರಿಗೆ ಮನವಿ ಮಾಡಿದ್ದೇನೆ. ನಾನು ಆಶಾವಾದಿಯಾಗಿದ್ದೇನೆ. ಆತ್ಮವಿಶ್ವಾಸ ಕಳೆದುಕೊಂಡಿಲ್ಲ, ರಾಜಕಾರಣದಲ್ಲಿ ಮುಜುಗರ ಇರಬಾರದು. ಜಿಲ್ಲೆಗೊಂದು ಸಚಿವ ಸ್ಥಾನದ ಭರವಸೆ ಇದೆ. ಜಿಲ್ಲೆಯ ಐದೂ ಜನರು ಒಗ್ಗಟ್ಟಾಗಿದ್ದೇವೆ ಎಂದರು.
ಜಿಲ್ಲೆಯಲ್ಲಿ ಹಿರಿಯರು ಎಸ್.ಎ. ರವೀಂದ್ರನಾಥ್ ಮತ್ತು ನಾನು ಮೂರು ಬಾರಿ ಶಾಸಕರಾಗಿದ್ದೇವೆ. ಅವಕಾಶ ಸಿಕ್ಕಾಗ ನಾವೆಲ್ಲರೂ ಪ್ರತ್ಯೇಕವಾಗಿ ಮಂತ್ರಿ ಸ್ಥಾನಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಆರು ತಿಂಗಳಲ್ಲಿ ಪತನವಾಗುತ್ತೆ ಎಂಬ ಮಾಜಿ ಸಿಎಂ ಸಿದ್ದರಾಮ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಯಾವಾಗ ಜ್ಯೋತಿಷ್ಯ ಹೇಳೊಕೆ ಶುರು ಮಾಡಿದ್ರೋ ಗೊತ್ತಿಲ್ಲ. ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ ಅಷ್ಟೇ. ಸರ್ಕಾರ ಸುಭದ್ರವಾಗಿದ್ದು, ಅವಧಿ ಪೂರ್ಣಗೊಳಿಸುತ್ತೇವೆ. ಅಲ್ಲದೇ, ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.