ಸಚಿವ ಸ್ಥಾನಕ್ಕೆ ಇವರು ಲಾಭಿ ಮಾಡೊದಿಲ್ಲವಂತೆ:.! ಹಾಗಾದ್ರೆ, ಈ ಪ್ರಭಾವಿ ಶಾಸಕ ಏನು ಮಾಡ್ತಾರೆ ಗೊತ್ತಾ.?
ದಾವಣಗೆರೆ: ಜಿಲ್ಲೆಯ ಐವರು ಶಾಸಕರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರಿಗೆ ಮತ್ತು ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿರೋದು ನಿಜಾ. ಆದರೆ, ತಾವೆಂದು ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ. ಪಕ್ಷದ ತೀರ್ಮಾನದಂತೆ ಮಂತ್ರಿ ಸ್ಥಾನ ಕೊಟ್ಟರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಹೊನ್ನಾಳಿ-ನ್ಯಾಮತಿ ತಾಲೂಕಿನ ಅತಿವೃಷ್ಟಿ ಪೀಡಿತ ಗ್ರಾಮಗಳಾದ ಮಾರಿಕೊಪ್ಪ, ಹತ್ತೂರು, ದೊಡ್ಡೇರಹಳ್ಳಿ, ಮಾದೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೆಲವು ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಗೆ ತೆರಳಿ ಲಾಭಿ ಮಾಡುತ್ತಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ಲಾಬಿ ಮಾಡುವುದಿಲ್ಲ. ನನ್ನ ಚಿತ್ತವೇನಿದ್ದರೂ ಈಗ ರೈತರ ಕಡೆಗೆ. ಅತಿವೃಷ್ಟಿಯಿಂದಾಗಿ ಬೆಳೆ ನಾಶವಾಗಿರುವುದರಿಂದ ಅವರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಅವರಿಗೆ ಬೆಳೆ ಪರಿಹಾರ ಒದಗಿಸಲು ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸುತ್ತಿದ್ದೇನೆ ಎಂದರು.
ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ ಎಂದು ಮಾಧ್ಯಮದವರಿಗೆ ಮೊನ್ನೆ ನಡೆದ ಶಾಸಕಾಂಗ ಸಭೆಯ ವೇಳೆಯೇ ಸ್ಪಷ್ಟವಾಗಿ ಹೇಳಿದ್ದೆ. ಹಳ್ಳಿಗಳತ್ತ ಮುಖಮಾಡಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವುದಾಗಿ ತಿಳಿಸಿದ್ದೆ. ಅದರಂತೆ ಅತಿವೃಷ್ಟಿ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಅಧಿಕಾರಿಗಳೊಂದಿಗೆ ಗ್ರಾಮಗಳಿಗೆ ಸುತ್ತುತ್ತಿದ್ದೇನೆ. ಅಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ನಂತರ ನಷ್ಟ ಪರಿಹಾರಕ್ಕೆ ಮತ್ತು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ಮನವಿ ಮಾಡುವುದಾಗಿ ಹೇಳಿದರು.
ದಾವಣಗೆರೆ ಜಿಲ್ಲೆ ಬೆಣ್ಣೆದೋಸೆ, ಮಿರ್ಚಿ ಮಂಡಕ್ಕಿ, ವಾಣಿಜ್ಯ, ಶಿಕ್ಷಣ ಮತ್ತು ಕೈಗಾರಿಕೆಗಳ ನಗರಿ ಎಂದು ಹೆಸರು ಪಡೆದಿದೆ. ವರಿಷ್ಠರು ಸಚಿವ ಸ್ಥಾನ ನೀಡಿದರೆ ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.