ಸಚಿವ ಸ್ಥಾನಕ್ಕೆ ಯಾವುದೇ ಲಾಬಿ ಅಥವಾ ಒತ್ತಡ ತಂತ್ರ ಮಾಡಲ್ಲ – ಜಗಳೂರು ಶಾಸಕ ಎಸ್.ವಿ. ರಾಮಚಂದ್ರ

 

ದಾವಣಗೆರೆ: ಸಚಿವ ಸ್ಥಾನಕ್ಕಾಗಿ ತಾವು ಯಾವುದೇ ಲಾಬಿ ನಡೆಸುವ ಅಥವಾ ಒತ್ತಡ ತಂತ್ರ ಅನುಸರಿಸುವ ಪ್ರಶ್ನೆಯೇ ಇಲ್ಲ. ನಮ್ಮ ತಾಲೂಕಿಗೆ ಭದ್ರೆಯ ನೀರು ಹರಿಸಿದರೆ ಅದೇ ಶಾಶ್ವತ ಸಚಿವ ಸ್ಥಾನ ಸಿಕ್ಕಂತಾಗುತ್ತದೆ ಎಂದು ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಹೇಳಿದ್ದಾರೆ.

ದಾವಣಗೆರೆಯ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಪರವಾಗಿ ಐವರೂ ಶಾಸಕರು ಒಟ್ಟಾಗಿ ಸಿಎಂ ಅವರನ್ನು ಭೇಟಿ ಆಗಿ ಜಿಲ್ಲೆಗೊಂದು ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ.
ಐವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವಕ್ಕೆ ಸ್ಥಾನ ನೀಡಿ ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕಳೆದ ಬಾರಿಯೇ ನಾನು ನಮ್ಮ ತಾಲೂಕಿನ ಜನರಿಗೆ ನೀರು ಕೇಳಿದ್ದೆ. ಅದರಂತೆ ಭದ್ರೆಯ ನೀರು ನಮ್ಮ ತಾಲೂಕಿಗೆ ಹರಿಸುವ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಜಗಳೂರು ತಾಲೂಕಿಗೆ ಭದ್ರೆಯ ನೀರು ಹರಿಸಿದರೆ ಅದೇ ಶಾಶ್ವತ ಸಚಿವ ಸ್ಥಾನ ಸಿಕ್ಕಂತಾಗುತ್ತದೆ ಎಂದರು.

ಮೂರು ಬಾರಿ ಶಾಸಕನಾದ ಅನುಭವವಿದೆ. ನಾನೇನು ಸಚಿವ ಸ್ಥಾನ ಕೇಳಿಲ್ಲ. ಕ್ಯಾಬಿನೆಟ್ ಸ್ಥಾನಮಾನದ ಎರಡು ನಿಗಮಗಳ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಒಂದು ವೇಳೆ ವರಿಷ್ಠರು ಸಚಿವ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯವಿದೆ. ಪಕ್ಷ ಯಾವ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ ಎಂದರು.

ಎಸ್‌ಟಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬೊಮ್ಮಾಯಿ ಅವರು ಇದೀಗ ತಾನೆ ಅಧಿಕಾರ ವಹಿಸಿಕೊಂಡಿದ್ದಾರೆ. ಅಲ್ಲದೇ ರಾಜ್ಯ ಸಂಕಷ್ಟದಲ್ಲಿದ್ದು, ಇಂಥ ಸಂದರ್ಭದಲ್ಲಿ ಮೀಸಲಾತಿ ವಿಚಾರ ಬೇಡ. ಈ ಬಗ್ಗೆ ವಾಲ್ಮೀಕಿ ಶ್ರೀಗಳು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಸಿಎಂ ಬೊಮ್ಮಾಯಿ ರಬ್ಬರ್ ಸ್ಟಾಂಪ್ ಸಿಎಂ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಸವರಾಜ್ ಬೊಮ್ಮಾಯಿ ಬುದ್ಧಿವಂತರು, ಅನುಭವಸ್ಥರು. ಸದನ ಕಲಾಪದ ವೇಳೆ ಹಲವು ಚರ್ಚೆಗಳಲ್ಲಿ ಸಮರ್ಥವಾಗಿ ಉತ್ತರಿಸಿದ್ದಾರೆ. ಖಂಡಿತವಾಗಿ ಅವರು ಒಳ್ಳೆಯ ಆಡಳಿತ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!