ಸಚಿವರು-ಅಧಿಕಾರಿಗಳಿಂದ ಕಾರ್ಮಿಕರಿಗೆ ವಂಚನೆ – ಉಮೇಶ್ ಆರೋಪ
ದಾವಣಗೆರೆ; ಫುಡ್ ಕಿಟ್ ಕೊಡುವ ನೆಪದಲ್ಲಿ ನೂರಾರು ಕೋಟಿ ರೂಗಳನ್ನು ಕಾರ್ಮಿಕ ಸಚಿವರು ಮತ್ತು ಮಂಡಳಿಯ
ಅಧಿಕಾರಿಗಳು ಕಬಳಿಸಲು ಮುಂದಾಗಿದ್ದಾರೆ ಇದನ್ನು ತಡೆಹಿಡಿಯಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜಿ ಉಮೇಶ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಅನ್ಲೈನ್ ಮುಖಾಂತರ ಪ್ರತಿಯೊಬ್ಬ ಕಾರ್ಮಿಕ ಕಾರ್ಡುದಾರನಿಗೆ ಹತ್ತು ಸಾವಿರ ರೂಪಾಯಿಗಳನ್ನು ಸಹಾಯಧನ ನೀಡಲು ಸರ್ಕಾರ ಮತ್ತು ಜಿಲ್ಲಾ ಕಾರ್ಮಿಕರ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಹಸಿದ ಹೊಟ್ಟೆಗೆ ತುಸು ಗಂಜಿ ಹಾಕುವ ರೀತಿಯಲ್ಲಿ , ಕೇವಲ ಮೂರು ಸಾವಿರ ರೂಗಳನ್ನು ಹಾಕಲು ಎಲ್ಲಾ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಆದೇಶಿಸಿದ್ದಾರೆ.
ಇದರ ಮಧ್ಯೆ ಫುಡ್ ಕಿಟ್ ಕೊಡುವ ನೆಪದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಮಂಡಳಿಯಿಂದ ಕಬಳಿಸುವ ವಂಚನೆ ನಡೆಯುತ್ತಿದೆ. ಈ ವಿಚಾರವಾಗಿ ಕಾರ್ಮಿಕ ಮಂತ್ರಿಗಳು , ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳು ಫುಡ್ ನೀಡುವುದನ್ನು ತಡೆಯೊಡ್ಡಿದ್ದು, 10 ಸಾವಿರ ರೂಗಳನ್ನು ನೇರ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಹಣವನ್ನು ಸಂದಾಯ ಮಾಡಲು ವಿನಂತಿಸಲಾಗಿತ್ತು. ಆದರೆ ನಮ್ಮ ಸಂಘಟನೆಯ ಯಾವ ವಿನಂತಿಗೂ ಬೆಲೆ ಕೊಡದೆ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುವ ದುರಾಸೆಯಿಂದ ಫುಡ್ ಕಿಟ್ ನೀಡುವ ಅವ್ಯವಹಾರ ದಂಧೆಯನ್ನು ಪ್ರಾರಂಭ ಮಾಡಿಕೊಂಡಿದ್ದಾರೆ .
ಈ ಹಿಂದಿನ ವರ್ಷದ ಲಾಕ್ಡೌನ್ ಸಮಯದಲ್ಲಿಯೂ ಪ್ರತಿ ಕಟ್ಟಡ ನಿರ್ಮಾಣ ಕಾರ್ಮಿಕನಿಗೆ ತಲಾ 5 ಸಾವಿರ ನೀಡುತ್ತೇವೆ ಎಂದು ಘೋಷಣೆ ಮಾಡಿ 16 ಲಕ್ಷ ಜನರ ಖಾತೆಗಳಿಗೆ ಮಾತ್ರ 5000 ರೂ ಜಮಾ ಮಾಡಿ ಇನ್ನು 10 ಲಕ್ಷದ 151 ಫಲಾನುಭವಿಗಳಿಗೆ ತಲಾ 5000 ಮಂಜೂರು ಮಾಡದೆ ಹಸಿದ ಬಡ ಕಾರ್ಮಿಕರಿಗೆ ಬರೆ ಎಳೆಯುವ ಕೆಲಸವನ್ನು ಕಾರ್ಮಿಕ ಸಚಿವರು ಮತ್ತು ಅಧಿಕಾರಿಗಳು ಮಾಡಿದ್ದಾರೆಂದು ಆರೋಪಿಸಿದರು.
ಹಿಂದಿನ ವರ್ಷದ ಲಾಕ್ಡೌನ್ ಸಮಯದಲ್ಲಿ ಫುಡ್ ಕಿಟ್ಗಳನ್ನು ಸಂಬಂಧಿಸಿದ ಎಂ.ಎಲ್.ಎ. ಕ್ಷೇತ್ರವಾರು ವಿತರಣೆ ಮಾಡಲು ಆದೇಶಿಸಿ ಆ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಹಿಂಬಾಲಕರು ಫುಡ್ ಕಿಟ್ಗಳನ್ನು ತಮ್ಮ ಮನಸ್ಸಿಗೆ ತಿಳಿದ ರೀತಿ ಕಾರ್ಡ್ ಇಲ್ಲದವರಿಗೂ ಫುಡ್ ಕಿಟ್ನಲ್ಲಿ ಇದ್ದ ಲೇಬಲ್ ಕಿತ್ತು ತಮ್ಮ ಹಿಂಬಾಲಕರಿಗೆ ವಿತರಿಸಿದ್ದಾರೆ. ಆದ್ದರಿಂದ ಕಾರ್ಮಿಕ ಸಚಿವರು ಫಲಾನುಭವಿಗಳಿಗೆ ನೇರವಾಗಿ ಸಂದಾಯವಾಗುವ ರೀತಿ ಕ್ರಮ ವಹಿಸಬೇಕು .
ಹಾಲಿ ಬಂದಿರುವ ಕಿಟ್ ಗಳನ್ನು ಕಾರ್ಮಿಕರ ಇಲಾಖೆ ಅಧಿಕಾರಿಗಳು ಕಟ್ಟಡ ನಿರ್ಮಾಣದ ಕಾರ್ಮಿಕರು , ಅತಿ ಕಡು ಬಡವರು ಹಾಗೂ ನಿರ್ಗತಿಕರು ಇರುವುದನ್ನು ಸ್ಥಳೀಯ ಪ್ರಮುಖ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ವಿಭಾಗವಾರು ಸಮಿತಿ ಮಾಡಿ ಕಿಟ್ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಇಲಾಖೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿ.ಲಕ್ಷಣ್, ಶಿವಕುಮಾರ್ ಡಿ ಶೆಟ್ಟರ್,ಮಹಮ್ಮದ್ ರಫೀಕ್,ಸಿದ್ದೇಶ್,ಮುರುಗೇಶ್ ಇದ್ದರು.