ಸಮಾಜದಲ್ಲಿನ ದೀನ, ದುರ್ಬಲರ ಪರವಾಗಿ ಹೋರಾಡುವುದೇ ಎಐಟಿಯುಸಿ ಧ್ಯೇಯ – ಕೆ.ರಾಘವೇಂದ್ರ ನಾಯರಿ. ಎಐಟಿಯುಸಿ ಜಿಲ್ಲಾಧ್ಯಕ್ಷ

IMG-20211029-WA0016

 

ದಾವಣಗೆರೆ: ಸಮಾಜದಲ್ಲಿರುವ ದೀನ ದುರ್ಬಲರ, ಕಾರ್ಮಿಕರ ಪರವಾಗಿ ಹೋರಾಡುವುದೇ ಎಐಟಿಯುಸಿ ಸಂಘಟನೆಯ ಧ್ಯೇಯವಾಗಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಹೇಳಿದರು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಾಂಡಳಿ ಮತ್ತು ದಾವಣಗೆರೆ ಜಿಲ್ಲಾ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಜಂಟಿಯಾಗಿ ಆಯೋಜಿಸಲಾಗಿದ್ದ ಮನೆಗೆಲಸಗಾರರು ಮತ್ತು ಧೋಬಿ ಕಾರ್ಮಿಕರಿಗೆ ಕಾಮ್ರೇಡ್ ಪಂಪಾಪತಿ ಭವನದಲ್ಲಿ ಪುಡ್ ಕಿಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕಾರ್ಮಿಕರ ಸಂಕಷ್ಟದ ಸಂದರ್ಭದಲ್ಲಿಯೂ ಕಾರ್ಮಿಕರ ಜೊತೆಗಿದ್ದು ಅವರಿಗೆ ಪುಡ್ ಕಿಟ್ ಹಾಗೂ ಇತರ ಸೌಲಭ್ಯಗಳನ್ನು ಸರಕಾರದಿಂದ ಕೊಡಿಸುವಲ್ಲಿ ಎಐಟಿಯುಸಿ ಅವಿರತವಾಗಿ ಶ್ರಮಿಸಿದೆ.

ಕಾಂ.ಹೆಚ್.ಕೆ.ರಾಮಚಂದ್ರಪ್ಪ ಅವರಂತಹ ಹಿರಿಯ ಕಾರ್ಮಿಕ ಮುಖಂಡರು ಕೊರೋನಾಗೆ ಬಲಿಯಾಗಿದ್ದರೂ ಎಐಟಿಯುಸಿ ನಾಯಕರು ಎದೆಗುಂದದೇ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರ ಜೊತೆಗಿದ್ದು ಅವರ ನೋವಿಗೆ ಸ್ಪಂದಿಸಿದ್ದರು. ಇದೇ ಕಾರ್ಮಿಕ ಮುಖಂಡರಿಗೂ ಹಾಗೂ ರಾಜಕಾರಣಿಗಳಿಗೂ ಇರುವ ವ್ಯತ್ಯಾಸ ಎಂದು ಕೆ.ರಾಘವೇಂದ್ರ ನಾಯರಿ ತಿಳಿಸಿದರು.

ಕಾರ್ಮಿಕರು ಸಂಘಟನೆಯ ಮೂಲಕ ಸರಕಾರಿ ಸವಲತ್ತುಗಳನ್ನು ಪಡೆಯಬೇಕು – ಎಲ್.ಹೆಚ್‌.ಅರುಣ್‌ಕುಮಾರ್

ಪುಡ್ ಕಿಟ್ ವಿತರಿಸಿದ ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್‌ಕುಮಾರ್ ಮಾತನಾಡಿ ಕಾರ್ಮಿಕರು ಸಂಘಟನೆಯ ಮೂಲಕ ಸರಕಾರಿ‌ ಸವಲತ್ತುಗಳನ್ನು ಪಡೆಯಲು‌ ಮುಂದಾಗಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರು ಸಂಘಟನೆಯ ಆಶ್ರಯದಲ್ಲಿ ಇನ್ನಷ್ಟು ಸಂಘಟಿತರಾಗಬೇಕು. ಸಂಘಟನೆ ಮತ್ತು ಹೋರಾಟ ಇಲ್ಲದೇ ಹೋದರೆ ಕಾರ್ಮಿಕರಿಗೆ ನ್ಯಾಯ ಸಿಗುವುದು ಕಷ್ಟವಾಗುತ್ತದೆ. ಪುಡ್ ಕಿಟ್ ಪಡೆಯುವುದರಿಂದ ಕಾರ್ಮಿಕರ ಎಲ್ಲ ಕಷ್ಟಗಳು‌ ಪರಿಹಾರವಾಗುವುದಿಲ್ಲ. ಆದರೆ ಕಾರ್ಮಿಕರು ಸಂಘಟನೆಯ ಬಗ್ಗೆ ತಮ್ಮ ಒಲವು ಹೆಚ್ಚಿಸಿಕೊಳ್ಳಲು ಮತ್ತು ಹೆಚ್ಚು ಸಂಘಟಿತರಾಗಲು ಇದು ಸಕಾಲ ಎಂದು ತಿಳಿಸಿದರು.

ಪುಡ್ ಕಿಟ್ ವಿತರಿಸಿ‌ ಮಾತನಾಡಿದ ಇನ್ನೋರ್ವ ಮುಖ್ಯ ಅತಿಥಿ ಹಿರಿಯ ಕಾರ್ಮಿಕ ನಾಯಕ ಆನಂದ್‌ರಾಜ್ ಮಾತನಾಡಿ ಸರಕಾರದಿಂದ ಶಾಶ್ವತವಾದ ಯೋಜನೆಗಳನ್ನು ಪಡೆಯುವ ನಿಟ್ಟಿನಲ್ಲಿ‌ ಮನೆ ಕೆಲಸಗಾರರು ಸಂಘಟಿತರಾಗಿ ಹೋರಾಡುವ ಅವಶ್ಯಕತೆ ಇದೆ. ಕಟ್ಟಡ ಕಟ್ಟುವ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಮಂಡಳಿ ಮಾದರಿಯಲ್ಲೇ ಮನೆ ಕೆಲಸಗಾರರಿಗೂ ಕಲ್ಯಾಣಾಭಿವೃದ್ಧಿ ಮಂಡಳಿ ರಚಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹೆಚ್‌.ಜಿ.ಉಮೇಶ್ ಅವರಗೆರೆ ಪ್ರಾಸ್ತಾವಿಕವಾಗಿ ಮಾತನಾಡಿ ಹಲವಾರು ಕಾರ್ಮಿಕ ನಾಯಕರುಗಳ ತ್ಯಾಗ ಬಲಿದಾನದಿಂದ ಎಐಟಿಯುಸಿ ಸಂಘಟನೆ ಬೆಳೆದಿದೆ. ಕೊರೋನಾವು ಕಾರ್ಮಿಕರ ದುಡಿಯುವ ಮತ್ತು ಜೀವಿಸುವ ಹಕ್ಕನ್ನು ಕಸಿದುಕೊಂಡಂತಹ ಸಂದರ್ಭದಲ್ಲಿ ಎಐಟಿಯುಸಿ ಸಂಘಟನೆಯು ಸರಕಾರಕ್ಕೆ ಒತ್ತಾಯವನ್ನು ಮಾಡಿ ಅಸಂಘಟಿತ ಕಾರ್ಮಿಕರಿಗೆ ಪುಡ್ ಕಿಟ್ ಮತ್ತು ಕೊರೋನಾ ಪರಿಹಾರವನ್ನು‌ ಕೊಡಿಸಲು ಶ್ರಮಿಸಿದೆ. ರಾಜಕಾರಣಿಗಳು ಚುನಾವಣಾ ಸಮಯದಲ್ಲಿ‌ ಮಾತ್ರ ಕಾರ್ಮಿಕರನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಎಐಟಿಯುಸಿ ಸಂಘಟನೆ ಕಾರ್ಮಿಕರ ಜೊತೆ ಸದಾಕಾಲ ಇರಲಿದೆ. ಸರಕಾರದ ವಿವಿಧ ಯೋಜನೆಗಳಾದ ಪ್ರಧಾನಮಂತ್ರಿ ಆವಾಸ್ ಯೋಜನೆ, ವಿಮಾ ಯೋಜನೆ, ಪಿಂಚಣಿ ಯೋಜನೆಗಳ ಲಾಭ ಕಾರ್ಮಿಕರಿಗೆ ಸಮರ್ಪಕವಾಗಿ ತಲುಪಬೇಕು ಎಂದರು.

ಕಾರ್ಯಕ್ರಮದಲ್ಲಿ ಮನೆಗೆಲಸಗಾರರು, ದೋಬಿ ಕಾರ್ಮಿಕರು ಮತ್ತು ಇತರೇ ಅಸಂಘಟಿತ ಕಾರ್ಮಿಕರಿಗೆ ಪುಡ್ ಕಿಟ್ ವಿತರಿಸಲಾಯಿತು.

ಇಪ್ಟಾ ಕಲಾವಿದ ಐರಣಿ ಚಂದ್ರು ಕ್ರಾಂತಿ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ವಿ.ಲಕ್ಷ್ಮಣ್, ಟಿ.ಎಸ್.ನಾಗರಾಜ್, ಬಿ.ದುಗ್ಗಪ್ಪ, ಬಾನಪ್ಪ, ದುರುಗೇಶ್, ಐರಣಿ ಚಂದ್ರು, ಬಸವರಾಜಪ್ಪ, ದಾದಾಪೀರ್, ರಮೇಶ್ ಸಿ, ಸರೋಜಾ, ಉಮಾಪತಿ, ಚನ್ನಮ್ಮ, ಗಂಗಮ್ಮ, ಗೌರಮ್ಮ, ಗಿರಿಜಮ್ಮ, ಮೊಹಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

ಬಾನಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು ಮತ್ತು ದುರುಗೇಶ್ ವಂದನಾರ್ಪಣೆ ಮಾಡಿದರು.

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್
ದಾವಣಗೆರೆ ಜಿಲ್ಲಾ ಸಮಿತಿ.

Leave a Reply

Your email address will not be published. Required fields are marked *

error: Content is protected !!