ಸಂಸದ ಬಿವೈ ರಾಘವೇಂದ್ರ ಅವರಿಂದ ಭದ್ರಾ ಜಲಾಶಯಕ್ಕೆ ಬಾಗಿನ

ಭದ್ರಾವತಿ– ಬಿ.ಆರ್. ಪ್ರಾಜೆಕ್ಟ್: ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಕೃಷಿ ಕ್ಲಸ್ಟರ್ ಎಂದು ಗುರುತಿಸಬೇಕು. ಕೃಷಿ ಸೇರಿದಂತೆ ಇತರೆ ಪೂರಕ ಚಟುವಟಿಕೆಗಳು ನಡೆಯಬೇಕು. ಈ ಕಾರ್ಯಸಾಧನೆಗೆ ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದು ಸಂಸದ ಬಿ.ವೈ.ರಾಘವೇಂದ್ರ ಆಶಯ ವ್ಯಕ್ತಪಡಿಸಿದರು.
ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಿ ಗಂಗಾ ಪೂಜೆ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಚನ್ನಪಟ್ಟಣವನ್ನು ಮರದ ಗೊಂಬೆ ತಯಾರಿಕೆಗೆ, ಬೆಂಗಳೂರನ್ನು ಸಾಫ್ಟ್ ವೇರ್ ಕ್ಲಸ್ಟರ್ ಗಳಾಗಿ, ಹೀಗೆ ವಿವಿಧ ಜಿಲ್ಲೆಗಳ ಸಂಪ್ರದಾಯದಂತೆ ಕ್ಲಸ್ಟರ್ ಗಳಾಗಿ ಗುರುತಿಸಲಾಗಿದ್ದು, ಶಿವಮೊಗ್ಗ ಜಿಲೆಯನ್ನು ಕೃಷಿ ಕ್ಲಸ್ಟರ್ ಎಂದು ಹೆಮ್ಮೆಯಿಂದ ಹೇಳಬೇಕು.ಆ ರೀತಿಯಲ್ಲಿ ಕೆಲಸಗಳು ಸರಾಗವಾಗಿ ನಡೆಯಬೇಕು ಇದರಿಂದ ನಮಗೆ ಎಲ್ಲವನ್ನು ನೀಡಿರುವ ಅನ್ನದಾತರು ಸ್ವಾಭಿಮಾನದಿಂದ ಬದುಕಲು ಅನುವಾಗುವಂತೆ ಕೆಲಸ ಮಾಡಿ ಪ್ರಕೃತಿ ಕೊಟ್ಟ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
1940 ರ ಸ್ವಾತಂತ್ರ್ಯ ಪೂರ್ವದ ಕಾಲಘಟ್ಟದಲ್ಲಿ 48 ಕೋಟಿ ವೆಚ್ಚದಲ್ಲಿ ಬೃಹತ್ ಭದ್ರಾ ಜಲಾಶಯವನ್ನು ನಿರ್ಮಿಸಲಾಗಿದ್ದು, ಪ್ರಸ್ತುತ ಸುಮಾರು 2 ಲಕ್ಷಕ್ಕೂ ಅಧಿಕ ಎಕರೆಗೆ ನೀರುಣಿಸುವ ಪುಣ್ಯದ ಕೆಲಸ ಈ ಜಲಾಶಯದಿಂದ ಆಗುತ್ತಿದೆ. ರಾಜ್ಯದ ದೊಡ್ಡ ಜಲಾಶಯಗಳ ಪೈಕಿ ಭದ್ರಾ ಕೂಡ ಒಂದಾಗಿದ್ದು ಇಂತಹ ಜಲಾಶಯ ಹೊಂದಿರುವ ಶಿವಮೊಗ್ಗವು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ರೈತರಿಗೆ ನೀರಿನ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಚ್ಚರಿಕೆಯಿಂದ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರ, ಚಿತ್ರದುರ್ಗ, ಹಾವೇರಿ, ಗದಗ, ವಿಜಯನಗರ ಸೇರಿ 8 ಜಿಲ್ಲೆಗಳಿಗೆ ಈ ಜಲಾಶಯದಿಂದ ನೀರಾವರಿ, ಕುಡಿಯುವ ನೀರು ಹಾಗೂ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಕೃತಿ ವಿರುದ್ದ ಮನಷ್ಯನ ತೋರುತ್ತಿರುವ ದರ್ಪ ಮತ್ತು ವಿನಾಶಕಾರಿ ಪ್ರವೃತ್ತಿಗೆ ಸಾಕಷ್ಟು ಬಾರಿ ಸುನಾಮಿ ಹಾಗೂ ನೆರೆಯಂತಹ ಪ್ರಾಕೃತಿಕ ವಿಕೋಪಗಳ ಮೂಲಕ ಸೇಡನ್ನು ತೀರಿಸಿಕೊಳ್ಳುತ್ತಿದೆ ಜೊತೆಗೆ ಮನುಷ್ಯನ ಕೇಡು ಬುದ್ದಿಗೆ ಛಾಟಿ ಏಟು ನೀಡುತ್ತಿದೆ, ಹಾಗಾಗಿ ನಾವೆಲ್ಲರು ಪ್ರಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ಕೊಟ್ಟರು.
ಪ್ರಸ್ತುತ ಕೋವಿಡ್ ಕೂಡ ಪ್ರಕೃತಿಯ ನೀಡುತ್ತಿರುವ ಬಹು ದೊಡ್ಡ ಶಿಕ್ಷೆಯೇ ಆಗಿದ್ದು, ನಾವೆಲ್ಲರು ಬಹಳಷ್ಟು ಎಚ್ಚರಿಕೆಯಿಂದ ಪ್ರಕೃತಿಯನ್ನ ಉಳಿಸಿಕೊಳ್ಳುವ ಹಾಗೂ ಸಮಯ ಸಿಕ್ಕಾಗಲೆಲ್ಲಾ ವನಮಹೋತ್ಸವ ಕಾರ್ಯಕ್ರಮ ಮಾಡುವ ಮೂಲಕ ಪ್ರಕೃತಿ ಉಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ,ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ದತ್ತಾತ್ರಿ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಭದ್ರಾ ಕಾಡಾ ಸದಸ್ಯರಾದ ಷಡಕ್ಷರಪ್ಪ ನಾಗಸಮುದ್ರ, ಕೆ.ಎಸ್.ರುದ್ರಮೂರ್ತಿ, ರಾಜಪ್ಪ, ಹನುಮಂತಪ್ಪ, ಮಂಜುನಾಥ್, ವಿನಾಯಕ್, ಅನೇಕ ಜನಪ್ರತಿನಿಧಿಗಳು, ಶಿವಮೊಗ್ಗ ಭಾಜಪ ಪ್ರಮುಖ ಗಣ್ಯರು, ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್, ಬಿ.ಆರ್. ಪ್ರಾಜೆಕ್ಟ್ ಅಧೀಕ್ಷಕ ಅಭಿಯಂತರ ಚಂದ್ರಹಾಸ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು, ಭದ್ರಾ ಕಾಡಾ ಸಿಬ್ಬಂದಿ ವರ್ಗದವರು ಹಾಜರಿದ್ದರು.