Sand: ಗಣಿ ಸಚಿವರ ಹೆಸರಿಗೆ ಕಳಂಕ ತರಲು ಪಿತೂರಿ! ತವರಿನಲ್ಲಿ ನಿಲ್ಲದ ಅಕ್ರಮ ಮರಳು ಮಾಫಿಯಾ! ಶಾಮನೂರು ಬಳಿ ಅಕ್ರಮ ಮರಳು, ಜೆಸಿಬಿ, ಲಾರಿ, ಇಬ್ಬರು ಚಾಲಕರು ವಶಕ್ಕೆ

ದಾವಣಗೆರೆ: (Sand Mine) ದಾವಣಗೆರೆ ಜಿಲ್ಲೆಯ ಗಣಿ ಇಲಾಖೆ ಸಚಿವರ ತವರಿನಲ್ಲಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಟ, ಅಕ್ರಮ ಸಂಗ್ರಹ ಪ್ರಕರಣಗಳು ವರದಿಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗಣಿ ಮತ್ತು ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಹೆಸರಿಗೆ ಕಳಂಕ ತರುವ ವ್ಯವಸ್ಥಿತ ಪಿತೂರಿಯನ್ನು ಕೆಲವರಿಂದ ನಡೆಯುತ್ತಿರುವ ಬಗ್ಗೆ ಚರ್ಚೆಯಾಗುತ್ತಿದೆ
ಹರಿಹರದ ಹನಗವಾಡಿ ಗ್ರಾಮದ ಬಳಿಯ ಹೋಟೆಲ್ ಹಿಂಭಾಗದಲ್ಲಿ ಎರಡು ದಿನದ ಹಿಂದೆ 15 ಲೋಡ್ ಮರಳನ್ನು ಸೀಜ್ ಮಾಡಿ ಓರ್ವ ವ್ಯಕ್ತಿಯ ವಿರುದ್ದ ಹರಿಹರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. 48 ಗಂಟೆಗಳೊಳಗೆ ದಾವಣಗೆರೆ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 40 ಸಾವಿರ ಅಂದಾಜು ಮೌಲ್ಯದ ಮೂರು ಲೋಡ್ ಮರಳು, ಒಂದು ಜೆಸಿಬಿ, ಒಂದು ಟಿಪ್ಪರ್ ಲಾರಿ ಸೇರಿದಂತೆ ಇಬ್ಬರು ಚಾಲಕರ ವಿರುದ್ದ ಮತ್ತೊಂದು ಎಫ್ ಐ ಆರ್ ದಾಖಲಾಗಿದ್ದು ಅಕ್ರಮ ಮರಳುಗಾರಿಕೆ, ಸಾಗಾಟ, ಅಕ್ರಮ ಮರಳು ಸಂಗ್ರಹದ ಪ್ರಮುಖ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಮರಳುಗಾರಿಕೆ, ಸಾಗಾಟ, ಅಕ್ರಮ ಸಂಗ್ರಹ ಬಗ್ಗೆ ಇತ್ತೀಚಿಗೆ ಹಲವಾರು ದೂರುಗಳಿದ್ದರೂ ಕೆಲವು ಪ್ರಕರಣಗಳು ಮಾತ್ರ ದಾಖಲಾಗುತ್ತಿದ್ದು, ಉಳಿದಂತೆ ಕೆಲ ರಾಜಕೀಯ ಪ್ರಭಾವ, ಸಂಬಂಧಿಸಿದ ಕೆಲ ಅಧಿಕಾರಿಗಳು ದುರ್ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವುದು ಎದ್ದು ಕಾಣುತ್ತಿದೆ. ವ್ಯವಸ್ಥೆಯಲ್ಲಿ ಹಿತಾಸಕ್ತಿ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಕೆಲ ಹಿರಿಯ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಪ್ರಕರಣದ ಸಂಕ್ಷಿಪ್ತ ಸಾರಾಂಶ:- ದಿನಾಂಕ:15.1.2025 ರಂದು ಸಂಜೆ 7.00 ಗಂಟೆಗೆ ಪಿರ್ಯಾದಿ ಸುನಿಲ್ ಬಿ ಸಿ ಪಿ ಎಸ್ ಐ ಇವರು ಠಾಣೆಗೆ ನಾನು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಆಗಿ ಕರ್ತವ್ಯಕ್ಕೆ ಹಾಜರಾಗಿ ನೀಡಿದ ದೂರಿನ ಸಾರಾಂಶದ ವರದಿ ಮಾಡಿರುತ್ತಾರೆ.
ನಾನು ಈ ದಿನ ಸಂಜೆ 5.00 ಗಂಟೆ ಸಮಯದಲ್ಲಿ ಠಾಣೆಯಲ್ಲಿರುವಾಗ ನಮ್ಮ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿ ಸ್ವಾಮಿ ಲಿಂಗಪ್ಪ ರವರಿಗೆ ಯಾರೋ ಬಾತ್ಮಿದಾರರು ಪೋನ್ ಮಾಡಿ ಶಾಮನೂರು ಗ್ರಾಮದ ಡಾಲರ್ಸ ಕಾಲೋನಿ ಜರಿಕಟ್ಟೆ ರಸ್ತೆ, ಸಿದ್ದೇಶ್ವರ ರೈಸ್ ಮಿಲ್ ಹಿಂಬಾಗದ ಖಾಲಿ ಜಮೀನಿನಲ್ಲಿ ಯಾರೋ ಕಳ್ಳರು ಮರುಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು ಅಕ್ರಮವಾಗಿ ಮರಳು ಸಂಗ್ರಹ ಮಾಡಿರುತ್ತಾರೆ ಅಂತ ಮಾಹಿತಿ ಬಂದ ಮೇರೆಗೆ ಸದರಿ ಸಿಬ್ಬಂದಿ ಪಿ ಐ ಮೇಡಂರವರಿಗೆ ಮಾಹಿತಿ ತಿಳಿಸಿದಾಗ ಪಿ ಐ ಮೇಡಂರವರು ನನಗೆ ದಾಳಿ ಮಾಡಿ ಕ್ರಮ ಕೈಗೊಳ್ಳಲು ಮೌಖಿಕವಾಗಿ ಸೂಚಿಸಿರುತ್ತಾರೆ.
ಸೂಚನೆ ಮೇರೆಗೆ ನಾನು ಸದರಿ ಮಾಹಿತಿಯನ್ನು ಗಣಿ ಹಾಗು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಠಾಣೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಪಂಚರಿಗೆ ಮಾಹಿತಿ ನೀಡಿ ದಾಳಿ ಮಾಡಲು ಸಹಕರಿಸುವಂತೆ ಕೇಳಿಕೊಂಡ ಮೇರೆಗೆ
ಸದರಿಯವರು ಒಪ್ಪಿದ ಮೇರೆಗೆ ನೋಟಿಸ್ ಜಾರಿ ಮಾಡಿ, ಸಿಬ್ಬಂದಿಗಳನ್ನು ಪಂಚರನ್ನು ಹಾಗು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಇಲಾಖಾ ಜೀಪಿನಲ್ಲಿ, ಹಾಗು ಸಿಬ್ಬಂದಿಗಳ ಬೈಕುಗಳಲ್ಲಿ ಮೇಲ್ಕಂಡ ಸ್ಥಳಕ್ಕೆ ಸಂಜೆ 5.40 ಗಂಟೆಗೆ ಹೋಗಿ ನೋಡಿದಾಗ ಸಿದ್ದೇಶ್ವರ ರೈಸ್ ಮಿಲ್ ಹಿಂಬಾಗದ ಖಾಲಿ ಜಮೀನಿನಲ್ಲಿ ಸುಮಾರು 3 ಟಿಪ್ಪರ್ ಲಾರಿಯಷ್ಟು ಮರುಳನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವುದು ಕಂಡು ಬಂದಿದೆ.
ಮರುಳು ಇದ್ದ ಜಾಗದಲ್ಲಿ ಒಂದು ಕೆಎ17-ಎಮ್ ಸಿ-0130 ನೇ ನಂಬರಿನ ಜೆಸಿಬಿ ಹಾಗು ಕೆಎ-28-ಬಿ-4869 ನೇ ನಂಬರಿನ ಒಂದು ಲಾರಿ ನಿಂತಿದ್ದು, ಅಲ್ಲಿದ್ದ ಚಾಲಕರನ್ನು ವಿಚಾರಿಸಲಾಗಿ ಜೆಸಿಬಿ ಚಾಲಕನ ಹೆಸರು ಜಗಧೀಶ ಹಾಗೂ ಕೆಎ28-ಬಿ-4869 ನೇ ನಂಬರಿನ ಲಾರಿ ಚಾಲಕ ಹೆಸರು ವಿಳಾಸ ಕೇಳಲಾಗಿ ಹನುಮಂತ ಅಂತ ತಿಳಿಸಿದ್ದು ನಂತರ ಸದರಿ ಇಬ್ಬರು ಚಾಲಕರಿಗೆ ಸದರಿ ಮರುಳನ್ನು ಸಂಗ್ರಹ ಮಾಡಲು ಹಾಗೂ ಸಾಗಣಿಕೆ ಮಾಡಲು ಪರವಾನಗಿ ಬಗ್ಗೆ ಕೇಳಿದಾಗ ಸದರಿಯವರು ಸಮಂಜಸ ಉತ್ತರ ಕೊಡದೇ ಇದ್ದುದರಿಂದ ಸದರಿ ಆಸಾಮಿಗಳು ಮರುಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು ಅದನ್ನು ಅಕ್ರಮವಾಗಿ ಸಂಗ್ರಹ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.
ಸ್ಥಳದಲ್ಲಿ ಸಂಜೆ 5.45 ಗಂಟೆಯಿಂದ 6.45 ಗಂಟೆಯವರೆಗೆ ಪಂಚರ
ಸಮಕ್ಷಮ ಪಂಚನಾಮೆ ಜರುಗಿಸಿ ಸುಮಾರು 40000/- ರೂ ಬೆಲೆಯ ಮೂರು ಟಿಪ್ಪರ್ ಮರುಳನ್ನು 10 ಲಕ್ಷ ರೂ ಬೆಲೆಯ ಕೆಎ17-ಎಮ್ ಸಿ-0130 ನೇ ನಂಬರಿನ ಜೆಸಿಬಿ ಹಾಗು ಕೆಎ-28-ಬಿ-4869 ನೇ ನಂಬರಿನ ಒಂದು ಲಾರಿಯನ್ನು ಹಾಗು ಇಬ್ಬರು ಚಾಲಕರನ್ನು ವಶಕ್ಕೆ ಪಡೆದುಕೊಂಡು ಸಂಜೆ 7.00 ಗಂಟೆಗೆ ಠಾಣೆಗೆ ಬಂದು ನೀಡಿದ ದೂರು ಸ್ವೀಕರಿಸಿ ಠಾಣೆ ಗುನ್ನೆ ನಂ:227/2025 ಕಲಂ 303(2) BNS ರಿತ್ಯ ಪ್ರಕರಣ ದಾಖಲಿಸಿರುತ್ತದೆ, ಎಂದು ಎಫ್ ಐ ಆರ್ ನಲ್ಲಿ ದಾಖಲಿಸಲಾಗಿದೆ.
ಲಾಸ್ಟ್ ಪಂಚ್: ಅಕ್ರಮವಾಗಿ ಮರಳು ಸಂಗ್ರಹಿಸಿದ್ದ ವ್ಯಕ್ತಿ ಯಾರು.? ಆತನಿಗೆ ರಕ್ಷಣೆ ಮಾಡುತ್ತಿರುವುದು ಯಾರು? ಯಾಕೆ.? ವಾಹನಗಳ ಚಾಲಕರು ಕೇವಲ ನಾಮಕಾವಸ್ಥೆ ಆಗಿರುತ್ತಾರೆ, ಆದರೆ ಇವರುಗಳು ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕಾಗುತ್ತದೆ ಹಾಗೂ ಕಾನೂನಿನ ಪ್ರಕಾರ ಕ್ರಮವನ್ನು ವಹಿಸಿದರೆ ಮುಂದೊಮ್ಮೆ ಇಂತಹ ದುರ್ನಡತೆಗೆ ಕಾರಣಕರ್ತನಾಗಲು ಯೋಚಿಸುವಂತೆ ಮಾಡುತ್ತಾರೆ. ಅಕ್ರಮ ದಂಧೆಗೆ ಇಲಾಖೆಗಳ ಕಾಣದ ಕೈಗಳ ಕುಮ್ಮಕ್ಕು, ಸಹಕಾರ ಇರುವುದರಿಂದ ಅಕ್ರಮ ದಂಧೆ ದುರುಳರು ಕಾನೂನು ಪಾಲನೆ ಮಾಡಲು ಯಾವುದೇ ಭಯ ಇಲ್ಲದಂತಾಗಿರುವುದು ಸ್ಪಷ್ಟವಾಗಿದೆ ಎನ್ನಲಾಗಿದೆ.