Sand: ದಾವಣಗೆರೆ ಜಿಲ್ಲೆಯ ತುಂಗಭದ್ರೆಯ ಒಡಲು ಬಗೆಯುತ್ತಿರುವ ನಿರ್ದಯಿಗಳು.. ಗಣಿ ಸಚಿವರ ಸೈನ್ಯದ ಜಾಣ ಕುರುಡು..?

ದಾವಣಗೆರೆ: (SAND) ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿರುವ ತುಂಗಭದ್ರೆ ಗರ್ಭಕ್ಕೆ ಕನ್ನ.. ಟಾಸ್ಕ್ ಫೊರ್ಸ್ ಕಣ್ಣಂಚಿನಲ್ಲೇ ದಂಧೆ.. ಸರ್ಕಾರದ ರಾಜಸ್ವ ಸಂಗ್ರಹಣೆಗೆ ದಕ್ಕೆ.. ಅಕ್ರಮ ಮರಳು ದಂಧೆ ತಡೆಯಲು ಗಣಿ ಇಲಾಖೆ ಸಚಿವರ ತವರು ಜಿಲ್ಲೆಯ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ..
ಕಳೆದ ಎರಡು ತಿಂಗಳಿನಿಂದ ಹರಿಹರ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸುವ ಅಧಿಕಾರಿಗಳೆ ಮರಳು ದಂಧೆಕೊರರ ಜೊತೆ ಶಾಮೀಲಾಗಿರುವ ಬಗ್ಗೆ ಗ್ರಾಮಸ್ಥರು ಮಾತನಾಡುತ್ತಿದ್ದಾರೆ. ಹರಿಹರ, ಹೊನ್ನಾಳಿ, ತಾಲ್ಲೂಕಿನಲ್ಲಿ ದೊರೆಯುವ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ಅಕ್ರಮವಾಗಿ ರಾತ್ರಿ ವೇಳೆ ಅಕ್ರಮವಾಗಿ ನೂರಾರು ಲೋಡ್ ಮರಳು ಅಕ್ರಮವಾಗಿ ಸಾಗಾಟವಾಗುತ್ತಿದೆ.
ತುಂಗಭದ್ರ ನದಿಯ ಮಧ್ಯ ಭಾಗದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಭೋಟ್, ತೆಪ್ಪಗಳಲ್ಲಿ ಮರಳನ್ನು ತೆಗೆಯಲಾಗುತ್ತಿತ್ತು. ಕೆಲವರ ವಿರೋಧದಿಂದ ಅಕ್ರಮ ಮರಳುಗಾರಿಕೆ ಕೊಂಚಮಟ್ಟಿಗೆ ನಿಂತಿತ್ತು. ಪುನಃ ಅಕ್ರಮ ಮರಳುಗಾರಿಕೆ ಸದ್ದಿಲ್ಲದೆ ನಡೆಯುತ್ತಿದ್ದರೂ ಯಾರೂ ಕೇಳೋರು ಹೇಳೋರು ಇಲ್ಲದಂತಾಗಿದೆ.
ಇನ್ನೊಂದೆಡೆ ಇಟಾಚಿ, ಜೆಸಿಬಿ, ಟ್ರಾಕ್ಟರ್ ಜೊತೆ ಮೊಟಾರ್ ಬಳಸಿ ನದಿಯಲ್ಲಿ ಭಾರಿ ಆಳವಾಗಿ ಮರಳನ್ನ ತೆಗೆದು ಬೃಹತ್ ಗಾತ್ರದ ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ.ಹರಿಹರ ತಾಲ್ಲೂಕು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿ ಹಾಗೂ ಮಲೆಬೆನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಇಂಗಳಗೊಂದಿ, ದೂಳೆಹೊಳೆ, ಮಳಲಹಳ್ಳಿ ಬಳಿಯ ತುಂಗಭದ್ರಾ ನದಿಯ ಒಡಲು ಆಗೆದು ಅಕ್ರಮ ಮರಳುಗಾರಿಕೆ ನಡೆಸಿ ದಾವಣಗೆರೆ ನಗರಕ್ಕೆ ರಾತ್ರಿ ವೇಳೆಯಲ್ಲಿ ನೂರಾರು ಲೋಡ್ ಮರಳು ತುಂಬಿಕೊಂಡು ಬರುವ ಟಿಪ್ಪರ್ ಗಳ ಹಾವಳಿ ತಡೆಯಲು ಸಾಧ್ಯವಾಗುತ್ತಿಲ್ಲವಂತೆ.
ಹರಿಹರ, ಹೊನ್ನಾಳಿ, ನ್ಯಾಮತಿ ತಾಲ್ಲೂಕಿನ ತುಂಗಭದ್ರ ನದಿಯಲ್ಲಿ ಅಧಿಕೃತವಾಗಿ ಮರಳು ಗಣಿಗಾರಿಕೆ ಮಾಡಲು 20 ಮರಳು ಬ್ಲಾಕ್ ಗಳನ್ನ ಗುರುತಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಟೆಂಡರ್ ಕರೆಯಲಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ಮುಗಿದು ಮರಳುಗಾರಿಕೆ ಪ್ರಾರಂಭವಾಗುವ ಮುನ್ನವೇ ಅಧಿಕೃತವಾಗಿ ಮರಳು ಬ್ಲಾಕ್ ಸೇರಿದಂತೆ ಅನೇಕ ಕಡೆ ಲೀಸ್ ಪಡೆದು ಮರಳುಗಾರಿಕೆ ನಡೆಸುವವರಿಗೆ ಅಕ್ರಮ ಮರಳುಗಾರಿಕೆಯಿಂದ ಮರಳು ಸಿಗದಂತಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸರ್ಕಾರ ಹಲವು ಆದೇಶಗಳನ್ನು ನೀಡಿದೆಯಾದರೂ ಗಣಿ ಇಲಾಖೆ, ತಾಲ್ಲೂಕು, ಜಿಲ್ಲಾಡಳಿತದ ಅಧಿಕಾರಿಗಳು ಮಾತ್ರ ತಮಗೆ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ.
ಕಾಟಾಚಾರಕ್ಕೆ ಅಲ್ಲೊಂದು ಇಲ್ಲೊಂದು ಕಡೆ ಮರಳನ್ನು ಸೀಜ್ ಮಾಡಿ ಒಂದರೆಡು ಟ್ರಾಕ್ಟರ್ ಹಾಗೂ ಎರಡ್ಮೂರು ಲಾರಿಗಳನ್ನ ಸೀಜ್ ಮಾಡಿ ಕೈ ತೊಳೆದುಕೊಂಡಿದ್ದಾರೆ ವಿನಃ ಸಕ್ರಿಯವಾಗಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವವರನ್ನ ಎಡೆಮುರಿ ಕಟ್ಟಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಅಕ್ರಮ ಮರಳು ಸಾಗಾಣಿಕೆಗೆ ಪರೋಕ್ಷವಾಗಿ ಹಾಲಿ ಮಾಜಿ ಜನಪ್ರತಿನಿಧಿಗಳ ಬೆಂಬಲಿಗರು ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಅಕ್ರಮವಾಗಿ ನದಿಯ ಒಡಲನ್ನು ಬಗಿಯುತ್ತಿರುವುದರಿಂದ ಜಲಚರ ಪ್ರಾಣಿಗಳ ಜೀವಕ್ಕೆ ಸಂಚಕಾರ ಬರುತ್ತಿದೆ. ಅಲ್ಲದೆ ಪರಿಸರದ ಮೇಲು ಪರಿಣಾಮ ಭೀರುತ್ತಿದೆ. ಹಿಂದೆ ರಾಜಾರೋಷವಾಗಿ ಸಂಜೆ 4 ರಿಂದ ಅಕ್ರಮ ಮರಳುಗಾರಿಕೆ ಪ್ರಾರಂಭವಾಗುತ್ತಿತ್ತು. ಆದರೆ ಇದೀಗ ರಾತ್ರಿ 10 ಗಂಟೆಯಾದರೆ ಸಾಕು, ಅಕ್ರಮ ಮರಳುಗಾರಿಕೆ ಪ್ರಾರಂಭವಾಗಿ ಮುಂಜಾನೆವರೆಗೆ ಮರಳುಗಾರಿಕೆ ನಡೆಯುತ್ತಿದೆ ಎನ್ನಲಾಗುತ್ತಿದೆ.