ಸರ್ಕಾರ ಲಸಿಕೆ ನೀಡದೇ ಜನರ ಜೀವ ತೆಗೆಯುತ್ತಿದೆ. ಸರ್ಕಾರದ ಬಳಿ ಲಸಿಕೆ ಇಲ್ಲ: ಸಿದ್ದರಾಮಯ್ಯರಿಂದ ಆರೋಪಗಳ ಸುರಿಮಳೆ

ದಾವಣಗೆರೆ: ಲಸಿಕೆ ನೀಡಿ ಜನರ ಜೀವ ಉಳಿಸಬೇಕೆಂಬ ಆಲೋಚನೆ ಸರ್ಕಾರಕ್ಕಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಪ್ರತಿದಿನ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ ಎಂದು‌ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಖಾಸಗಿ ಕಾರ‍್ಯಕ್ರಮ ಪ್ರಯುಕ್ತ ದಾವಣಗೆರೆಗೆ ಆಗಮಿಸಿದ ಸಿದ್ದರಾಮಯ್ಯ ಅವರು ನಗರ ದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ ಉಚಿತ ಲಸಿಕಾ ಶಿಬಿರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸರ್ಕಾರ ಕೆಲಸ ಜನರ ಜೀವ ಉಳಿಸುವುದು ಇದಕ್ಕಾಗಿ ಸಮರ್ಪಕವಾಗಿ ಲಸಿಕೆ ನೀಡಬೇಕು. ಆದರೆ, ಸರ್ಕಾರ ಲಸಿಕೆ ನೀಡದೇ ಜನರ ಜೀವ ತೆಗೆಯುತ್ತಿದೆ. ಸರ್ಕಾರದ ಬಳಿ ಲಸಿಕೆ ಇಲ್ಲ. ಲಸಿಕೆ ನೀಡಬೇಕೆಂಬ ಆಲೋಚನೆಯೂ ಸರ್ಕಾರಕ್ಕೆ ಇಲ್ಲ. ಇದರಿಂದ ಲಸಿಕೆ ಪಡೆಯಲು ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತರೆ ನೂರು ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಸರ್ಕಾರಕ್ಕೆ ಜನರ ಜೀವ ಉಳಿಸಬೇಕೆಂಬ ಯೋಚನೆ ಇದ್ದಂತೆ ಕಾಣುತ್ತಿಲ್ಲ ಎಂದು ದೂರಿದರು.

ಶಾಸಕ ಶಾಮನೂರು ಶಿವಶಂಕರಪ್ಪ‌ ಮತ್ತು ಅವರ ಪುತ್ರ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಉಚಿತ ಲಸಿಕೆ ನೀಡುವ ಮೂಲಕ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರುಗಳು ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದು, ದಾವಣಗೆರೆ ಜನರ ಉಳಿಸಬೇಕೆಂಬ ಉದ್ದೇಶದಿಂದ ಉಚಿತ ಲಸಿಕಾ ಕಾರ‍್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು, ಮತ್ತವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮುದೇಗೌಡ್ರು ಗಿರೀಶ್, ಬಿ.ಹೆಚ್. ವೀರಭದ್ರಪ್ಪ, ಅನಿತಾಬಾಯಿ ಮಾಲತೇಶ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಕೆ.ಚಮನ್ ಸಾಬ್, ಜಿ.ಡಿ.ಪ್ರಕಾಶ್, ವಿನಾಯಕ ಪೈಲ್ವಾನ್, ಆಶಾ ಉಮೇಶ್, ಜೆ.ಎನ್.ಶ್ರೀನಿವಾಸ್, ಶ್ವೇತಾ ಶ್ರೀನಿವಾಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!