ಸರ್ಕಾರದ ಶಿಕ್ಷಣ ಇಲಾಖೆಯ ವೈರುಧ್ಯಗಳಿಂದ ನಲುಗಿದ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಅನಿಸಿಕೆ ವ್ಯಕ್ತ ಪಡಿಸಿದ ಜಸ್ಟೀನ್ ಡಿಸೊಜಾ

ದಾವಣಗೆರೆ. ಜು.೧೭; ಕೊರೋನಾ ಕಾರಣದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಗದಾಪ್ರಹಾರವಾಗಿದೆ. ಹರಸಾಹಸಪಟ್ಟು ತಾಂತ್ರಿಕ ಸಲಕರಣೆಗಳ ಮೂಲಕ ಮಕ್ಕಳಿಗೆ ನಿರಂತರ ಕಲಿಕೆಯಲ್ಲಿ ಪ್ರಾಮಾಣಿಕವಾಗಿ ತೊಡಗಿರುವ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಚಿತ್ರ – ವಿಚಿತ್ರ ತಾರ್ಕಿಕವಲ್ಲದ ನಿಯಮಾವಳಿಗಳಿಂದ ನಲುಗಿ ವಿನಾಶದಂಚಿಗೆ ತಲುಪುತ್ತಿವೆ.
1) ಪಾಠ ಮಾಡಿ ಫೀ ಕೇಳಬೇಡಿ.
ಅನುದಾನರಹಿತ ಶಿಕ್ಷಣ ಸಂಸ್ಥೆಗಳು ನಡೆಯುತ್ತಿರುವುದೇ ಪಾಲಕರು ಕಟ್ಟುವ ಶುಲ್ಕದ ಆಧಾರದಿಂದ. ಯಾವ ಶಾಲೆಯಲ್ಲಿ ಮಗು ಓದಬೇಕೆಂಬ ಆಯ್ಕೆ ಪಾಲಕರದ್ದು ದಾಖಲಾತಿ ಪಡೆಯುವಾಗ ಸಂಸ್ಥೆಯ ಶುಲ್ಕ ವಿವರಣೆ – ನಿಯಮಗಳನ್ನು ಒಪ್ಪಿ ಪ್ರವೇಶ ಪಡೆದಿರುತ್ತಾರೆ. ವೆಚ್ಚ ಭರಿಸಲು ಸಾಧ್ಯವಾಗದಿದ್ದಲ್ಲಿ ಪಾಲಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಗದಿ ಬಗ್ಗೆ ಸರ್ಕಾರದ ಹಸ್ತಕ್ಷೇಪ ಸಲ್ಲದು. ಕಳೆದ ವರ್ಷವಿಡೀ ಶುಲ್ಕ ನಿಗದಿಯ ವಿಚಾರ ನೆನೆಗುದಿಗೆ ಬಿದ್ದು ಫೀ ಕಟ್ಟಲು ಸಮರ್ಥರಿರುವ ಪಾಲಕರೂ ಸರ್ಕಾರದ ಉಳಿತಾಯ ಯೋಜನೆಗೆ ಕಾದು ಕುಳಿತರು. ಯಾವುದೂ ತೀರ್ಮಾನವಾಗದಿದ್ದಾಗ ಹಲವಾರು ಶಿಕ್ಷಣ ಸಂಸ್ಥೆಗಳು ಶುಲ್ಕ ರಿಯಾಯಿತಿ ಮಾಡಿ ಪಾಲಕರ ನೆರವಿಗೆ ಧಾವಿಸಿದರು. ಇದಕ್ಕೆ ಪಾಲಕರೂ ಕೃತಜ್ಞತೆ ತೋರಿದರು. ಆದರೂ ಮಾಧ್ಯಮದಲ್ಲಿ ದಂಧೆಕೋರರು, ಧನ ದಾಹಿಗಳು ದರೋಡೆಕೋರರು ಎಂದು ಅತ್ಯಂತ ಹೀನಾಯವಾಗಿ ಶಿಕ್ಷಣ ಸಂಸ್ಥೆಗಳನ್ನು ಪ್ರತಿಬಿಂಬಿಸಲಾಯಿತು.
ವಿದ್ಯುತ್ ಬಿಲ್ ಕಟ್ಟದಿದ್ದಾಗ ವಿದ್ಯುತ್ ಕಡಿತಗೊಳಿಸಿದರೆ ಉಸಿರೆತ್ತದವರು ಶಾಲಾ ಶುಲ್ಕ ಪಾವತಿಗೆ ಮಾತ್ರ ಬೊಬ್ಬೆ ಹೊಡೆದರು. ಇದು ಹೇಗಿದೆ ಎಂದರೆ ಭೋಜನ ಮಾಡಿದ ನಂತರ ಹೋಟೇಲಿನವರು ಬಿಲ್ ಕೊಟ್ಟಾಗ ಹಣ ಕೊಡುವುದಿಲ್ಲ ಎಂದು ಮೊಂಡಾಟ ಮಾಡಿದಂತಿದೆ. ಮೂಲಭೂತ ಸೌಕರ್ಯಕ್ಕೆ ಅನುಗುಣವಾಗಿ ಶುಲ್ಕವಿರುತ್ತದೆ. ಫೀ ಹೆಚ್ಚಳ ಮಾಡಬೇಡಿರೆಂದರು. ಸರಿ ಆದರೆ ಫೀ ಕಟ್ಟದಿದ್ದರೂ ಮಕ್ಕಳನ್ನು ಉತ್ತೀರ್ಣಗೊಳಿಸಿ. ಮುಂದಿನ ತರಗತಿಗೆ ದಾಖಲೆ ಮಾಡಿಕೊಳ್ಳಿ ಎಂಬುದು ಸರಿಯಲ್ಲ.
2) ದಾಖಲೆ ಮಾಡಿಕೊಳ್ಳಿ. . . ಇಲ್ಲದಿದ್ದರೆ ಮಾನ್ಯತೆ ರದ್ದು.
ಮಾನ್ಯತೆ ಎಂಬುದು ಶಿಕ್ಷಣ ಇಲಾಖೆಯವರು ಈ ಸಂಸ್ಥೆಗಳ ಮೇಲೆ ಆಗಾಗ ಪ್ರಯೋಗಿಸುವ ಅಸ್ತ್ರ. ಆಗಸ್ಟ್ 30 ದಾಖಲಾತಿಗೆ ಕೊನೆಯ ದಿನಾಂಕ ಎಂದು ನಿಗದಿಪಡಿಸಿದ್ದರೂ. 20.07.2021 ರೊಳಗೆ ಮಕ್ಕಳನ್ನು ಮುಂದಿನ ತರಗತಿಗೆ ದಾಖಲಾತಿ ಮಾಡಿ ಎಂಬುದು ಯಾವ ನ್ಯಾಯ? ನಿಗದಿತ ಅವಧಿಗಿಂತ ಮೊದಲೇ ತಮ್ಮ ಅಧಿಕಾರ ಚಲಾಯಿಸುವವರು ಹೇಳಿದ ಹಾಗೆ ಕೇಳದಿದ್ದರೆ “ಮಾನ್ಯತೆ ರದ್ದು” ಎಂಬ ಬ್ರಹ್ಮಾಸ್ತç ಪ್ರಯೋಗಿಸುತ್ತಿದ್ದಾರೆ. ಫೀ ಕಟ್ಟಲು ಒತ್ತಾಯಿಸಬೇಡಿ ಎಂದರೆ ಯಾರು ಕಟ್ಟುತ್ತಾರೆ? ಬಸ್ಸಿನಲ್ಲಿ ಬೇಕಾದವರು ಮಾತ್ರ ಟಿಕೆಟ್ ತೆಗೆದುಕೊಳ್ಳಿ ಎಂದರೆ ಯಾರೂ ತೆಗೆದುಕೊಳ್ಳುವುದಿಲ್ಲ. ಅಲ್ಲಿಲ್ಲದ ನ್ಯಾಯ ಇಲ್ಲೇಕೆ? ವರ್ಷವಿಡೀ ಪಾಠ ಕೇಳಿದ ಮಕ್ಕಳ ವರ್ಗಾವಣೆ ಪತ್ರಕ್ಕೆ, ಅಂಕಪಟ್ಟಿಗೆ, ಕೊನೆಗೆ ಹಾಲ್‌ಟಿಕೆಟ್ ಪಡೆಯುವಾಗ ಪಾಲಕರ ಮೇಲೆ ಫೀ ಗೆ ಒತ್ತಡ ಹೇರಬೇಡಿ. ಒತ್ತಾಯಿಸಿದರೆ ಮಾನ್ಯತೆ ರದ್ದು ಎಂಬ ಅತಾರ್ಕಿಕ ಹೇಳಿಕೆ ನಿಲ್ಲಬೇಕು. ಇದರಿಂದ ಅವಕಾಶವಾದಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ.
3) ಖಖಿಇ ಎಂಬ ಭೂತ.
ಅಧಿಕಾರಿಗಳು ಪರಿವೀಕ್ಷಣೆಗೆ ಬಂದಾಗ ಖಖಿಇ ಬಗ್ಗೆ ಹೇಳುತ್ತಾರೆ. ನಿಜ. ದೇಶದ ಪ್ರತಿ ಮಗುವಿಗೆ 6 ರಿಂದ 14 ವರ್ಷದವರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದಿದೆ, ಆದರೆ ಈ ಮೂಲಭೂತ ಹಕ್ಕನ್ನು ಪೂರೈಸಲಾಗದ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತರಗತಿಯ ಒಟ್ಟು ದಾಖಲಾತಿಗೆ ಶೇಕಡ 25 ರಷ್ಟು ಖಖಿಇ ಸೀಟುಗಳನ್ನು ನಿಗದಿಪಡಿಸಿ ಈ ಮಕ್ಕಳ ಶಿಕ್ಷಣದ ವೆಚ್ಚ ಭರಿಸುತ್ತದೆಂದು ಹೇಳಿತು. ಖಾಸಗೀ ಸಂಸ್ಥೆಗಳಿಗೆ ಪ್ರತಿವರ್ಷ ಶೇಕಡ 25 ರಂತೆ ನೂರಾರು ಮಕ್ಕಳು ಪ್ರವೇಶ ಪಡೆದರು. ಇವರ ಶುಲ್ಕ ಪಾವತಿಗೆ ಒಂದು ನಿಗದಿತ ಸಮಯವಿಲ್ಲ. ಈ ವರ್ಷದ ಶುಲ್ಕ ಮುಂದಿನ ವರ್ಷ ಹೀಗೇ ವರ್ಷ ವರ್ಷವೂ ಸಾಗುತ್ತಿದೆ. ಖಖಿಇ ಹೆಸರು ಹೇಳಿಕೊಂಡು ಕ್ರಿಮಿನಲ್ ಕೇಸ್ ಹಾಕುತ್ತೇವೆಂದು ಅಬ್ಬರಿಸುವವರ ಮೌಢ್ಯ ಹಾಸ್ಯಾಸ್ಪದ. ಒಂದೆರಡು ತಿಂಗಳು ಸಂಬಳ ಬರುವುದು ತಡವಾದರೆ ಅರ್ಭಟಿಸುವ ಸರ್ಕಾರಿ ನೌಕರರು ನೂರಾರು ವಿದ್ಯಾರ್ಥಿಗಳ ಶುಲ್ಕ ಸಮಯಕ್ಕೆ ಸರಿಯಾಗಿ ಪಾವತಿಯಾಗದಿದ್ದರೆ ಯಾರನ್ನು ಕೇಳಬೇಕು ಎಂಬುದನ್ನು ಸ್ಪಷ್ಠೀಕರಿಸಬೇಕು.
4) ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅಗೌರವ
ಒಂದು ದೇಶ ಸುಶಿಕ್ಷಿತವಾದರೆ ಅದು ಸದೃಢವಾಗಿ ಬೆಳೆಯುತ್ತದೆ. ಇಡೀ ವಿಶ್ವ ಇಂದು ಭಾರತದತ್ತ ಅಚ್ಚರಿಯಿಂದ ನೋಡುತ್ತಿದೆ. ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಗಟ್ಟಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಗಣನೀಯ. ಪ್ರಾಮಾಣಿಕತೆಯಿಂದ, ಸೇವಾಭಾವನೆಯಿಂದ ಕಾರ್ಯನಿರತವಾಗಿರುವ ಶಿಕ್ಷಣ ಸಂಸ್ಥೆಗಳು ಅನೇಕ ಇವೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆಯನ್ನು ಗೌರವಿಸಿ. “ದಂಧೆಕೋರರು” ಎಂಬ ಅಸಭ್ಯ ಪದ ಬಳಕೆಯಾಗದಿರಲಿ.
5) ದಾಖಲೀಕರಿಸಿ – ಇಂದೀಕರಿಸಿ ಎಂಬ ಯಾಂತ್ರಿಕ ಶಬ್ಧಗಳು
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಅನಗತ್ಯ ಮಾಹಿತಿ ಕಲೆ ಹಾಕುವುದರಲ್ಲಿ ತೊಡಗಿದೆ. ಶಿಕ್ಷಕರು ಈ ಮಾಹಿತಿ ಕ್ರೋಢೀಕರಿಸಿ ಇಂದೀಕರಿಸಿತ್ತಾ ಶಿಕ್ಷಣದ ಪ್ರಮುಖ ಘಟ್ಟವಾದ ಬೋಧನಾ ಕಾರ್ಯಕ್ಕೆ ನ್ಯಾಯ ಸಲ್ಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಎಲ್ಲವೂ ಡಾಕ್ಯುಮೆಂಟೇಷನ್ … ಇದು ಯಾಂತ್ರಿಕ! ಮಕ್ಕಳ ಪ್ರಗತಿ ಂ ಃ ಅ ಗ್ರೇಡ್! ಯಾವುದೋ ಒಂದು ಭರ್ತಿ ಮಾಡಿದರೆ ಮುಗಿಯಿತು. ವಾಟ್ಸಾಪ್ ಮೆಸೇಜ್‌ಗಳಲ್ಲಿ ಕೇಳುವ ಮಾಹಿತಿಗೆ ಸಮಯಾವಕಾಶವೂ ಇರುವುದಿಲ್ಲ. ಇಂದೇ ಕಳಿಸಿ… ಈ ಕ್ಷಣವೇ ಕಳಿಸಿ ಎಂಬ ಟಿಪ್ಪಣಿಗಳು. ಸರ್ವರ್‌ಗಳು ಬ್ಯುಸಿ ಇದ್ದರೆ ಶಿಕ್ಷಕರಾಗಲಿ, ಸಿಬ್ಬಂದಿಯಾಗಲಿ ಸುತ್ತುವ ನಕ್ಷತ್ರ ನೋಡುತ್ತಲೇ ದಿನದೂಡಬೇಕಾಗುತ್ತದೆ. ಯಾವುದೇ ಮಾಹಿತಿ ಕೇಳಿದಾಗ ಅದನ್ನು ಸಂಗ್ರಹಿಸಲು ಕಾಲಾವಕಾಶಬೇಕು. ಇಲ್ಲದಿದ್ದಲ್ಲಿ ಅಂದಾಜಿನ ಮೇಲೆ ಮಾಹಿತಿ ತುಂಬಲಾಗುತ್ತದೆ. ಮಾಹಿತಿ ಯಾವ ಉದ್ಧೇಶಕ್ಕೆ ಎಂಬುದು ಸ್ಪಷ್ಟಪಡಿಸಿದರೆ ಒಳಿತು.
6) ಟಿ. ಸಿ ಇಲ್ಲದಿದ್ದರೂ ಪ್ರವೇಶ
ಇತ್ತೀಚಿಗೆ ಪತ್ರಿಕೆಗಳಲ್ಲಿ ಒಂದು ಸುದ್ದಿ ಅಚ್ಚಾಗಿತ್ತು. ಮಕ್ಕಳ ಟಿ.ಸಿ ಇಲ್ಲದಿದ್ದರೂ ಪ್ರವೇಶ ಕೊಡಿ ಎಂದು ಮಗುವಿನ ಪ್ರಥಮ ದಾಖಲೆಯಲ್ಲಿ ನಮೂದಾದ ವಿವರಗಳು ವಿದ್ಯಾಭ್ಯಾಸ ಮುಕ್ತಾಯವಾಗುವವರೆಗೂ ಏಕ ರೀತಿಯದಾಗಿರಬೇಕಾಗುತ್ತದೆ. ವ್ಯಾಸಂಗ ಪ್ರಮಾಣ ಪತ್ರ ಪಡೆಯುವಾಗ ಇದು ಮುಖ್ಯವಾಗುತ್ತದೆ. ಇಂತಹ ಹೇಳಿಕೆಗಳಿಂದ ಪಾಲಕರಿಗೆ ಗೊಂದಲ ಉಂಟಾಗುತ್ತಿದೆ.
7) ಓದಿಲ್ಲದಿದ್ದರೂ ಮುಂದಿನ ತರಗತಿಗೆ ಪಾಸ್
ಹಲವಾರು ಪಾಲಕರಿಗೆ ಕೊರೊನಾ ತೇರ್ಗಡೆಗಳಿಂದ ಅಸಮಾಧಾನ ಉಂಟಾಗಿದೆ. ವರ್ಷವಿಡೀ ಓದಿದ ಮಕ್ಕಳು ನಿರಾಶರಾಗಿದ್ದಾರೆ. ಕೆಲವು ಪಾಲಕರು ತಮ್ಮ ಮಕ್ಕಳನ್ನು ಹಿಂದಿನ ತರಗತಿಯಲ್ಲೇ ಮುಂದುವರಿಸಲು ಇಚ್ಛಿಸಿದ್ದಾರೆ. ಇಲಾಖೆಯಲ್ಲಿ ಪಾಲಕರ ಮನವಿಗೆ ಬೆಲೆಯೇ ಇಲ್ಲ. ಔಪಚಾರಿಕ ಶಿಕ್ಷಣದಿಂದ ವಂಚಿತರಾದ ಮಕ್ಕಳು ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಹರಾಗುತ್ತಾರೋ ಇಲ್ಲವೋ ಎಂಬ ಆತಂಕ ಮನೆಮಾಡಿದೆ. ಮಕ್ಕಳ ಬೌದ್ಧಿಕ ಮಟ್ಟ ಏಕರೀತಿಯಲ್ಲಿರುವುದಿಲ್ಲ. ಕಲಿಕೆಯಲ್ಲಿ, ಗ್ರಹಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಅದೇ ತರಗತಿಯಲ್ಲಿ ಉಳಿಸಿಕೊಂಡು ಮತ್ತೊಮ್ಮೆ ಪುನರಾವರ್ತನೆ ಮಾಡಿ ಎಂದು ಪಾಲಕರು ಲಿಖಿತ ಮನವಿ ಕೊಡುತ್ತಿದ್ದಾರೆ. ಇದಕ್ಕೆ ಇಲಾಖೆಯ ಒಪ್ಪಿಗೆ ಇಲ್ಲ, ತಮ್ಮ ಮಗುವಿಗೆ ಹೇಗೆ ಎಲ್ಲಿ ಶಿಕ್ಷಣ ಕೊಡಿಸಬೇಕೆಂಬುದು ಪಾಲಕರ ಆಯ್ಕೆಗೆ ಬಿಡಬೇಕು. ಇದನ್ನು ಇಲಾಖೆ ನಿರ್ಧರಿಸುವುದು ಸರಿಯಲ್ಲ. 1 ರಿಂದ 9 ರ ವರೆಗೆ ಪಾಸ್ ಎಂದಾದರೆ 10ರಲ್ಲಿ ಏಕೆ ಫೇಲಾಗುತ್ತಾರೆ? ಅಂದರೆ ಆಯಾ ತರಗತಿಯಲ್ಲಿ ಮಗು ಕಲಿಯಬೇಕಾದ ಸಾಮರ್ಥ್ಯ ಗಳಿಸಿಲ್ಲ. ಇದನ್ನು ಕೊಡಬಯಸುವ ಪಾಲಕರ ಆಶಯಕ್ಕೆ ಇಲಾಖೆ ಸ್ಪಂದಿಸಬೇಕು. ಮಗುವಿನ ಪರಿಪೂರ್ಣ ಕಲಿಕೆಗೆ ಆಸ್ಪದ ನೀಡಬೇಕು.
8) ಅವಸರದ ಕೂಸು “ಹೊಸ ಶಿಕ್ಷಣ ನೀತಿ”
ಹೊಸ ಶಿಕ್ಷಣ ನೀತಿಗೆ ಪೂರ್ಣ ಸಿದ್ಧತೆ ಬೇಕು. ಅವಸರದಲ್ಲಿ ಜಾರಿಗೆ ತಂದು ಅತಂತ್ರವಾಗಬಾರದು. ಪಠ್ಯಪುಸ್ತಕಗಳನ್ನು ಒದಗಿಸದೆ ಶಾಲಾ ಪ್ರಾರಂಭೋತ್ಸವ ಮಾಡಿದಂತೆ ಆದರೆ ಇಡೀ ಶಿಕ್ಷಣ ವ್ಯವಸ್ಥೆ ವಿಫಲವಾಗುತ್ತದೆ. ಪೂರ್ವ ಯೋಜನೆ, ಪೂರ್ವ ಸಿದ್ಧತೆ, ಮಾನವ ಸಂಪನ್ಮೂಲ, ಮೂಲ ಸೌಕರ್ಯಗಳನ್ನು ಒದಗಿಸಿ ಹೊಸ ಶಿಕ್ಷಣ ಜಾರಿಗೆ ಬಂದರೆ ಒಳಿತು. ಹಿಂದೆ 8ನೇ ತರಗತಿಯನ್ನು ಪ್ರಾಥಮಿಕ ತರಗತಿಗಳಿಗೆ ಸೇರ್ಪಡೆ ಮಾಡಿ ಆ ಮಕ್ಕಳಿಗೆ ಸರಿಯಾದ ಶಿಕ್ಷಕರನ್ನು ಒದಗಿಸದೆ ಯೋಜನೆ ವಿಫಲವಾದ ನಿದರ್ಶನವಿದೆ.
9) ಖಾಸಗಿ ಶಿಕ್ಷಕರ ಕಡೆಗಣನೆ
ಖಾಸಗಿ ಶಿಕ್ಷಣ ಸಂಸ್ಥೆಗಳು ಹಲವಾರು ಶಿಕ್ಷಕರಿಗೆ ಉದ್ಯೋಗ ಅವಕಾಶ ನೀಡಿದೆ. ಪಾಲಕರು ಪಾವತಿಸುವ ಶುಲ್ಕದಿಂದ ಶಾಲೆಗೆ ಬೇಕಾದ ಮೂಲ ಸೌಕರ್ಯ, ಕಟ್ಟಡ ನಿರ್ವಹಣೆ, ವಾಹನಗಳ ನಿರ್ವಹಣೆ ಮತ್ತು ವೇತನವನ್ನು ಭರಿಸಲಾಗುತ್ತಿತ್ತು. ಸರ್ಕಾರದ ದಿನಕ್ಕೊಂದು ಹೇಳಿಕೆಯಿಂದ ಶಿಕ್ಷಣ ಸಂಸ್ಥೆಗಳು ನಲುಗಿ ಹೋಗುತ್ತಿವೆ. ಎಷ್ಟೋ ಸಂಸ್ಥೆಗಳು ಖರ್ಚು – ವೆಚ್ಚ ನಿಭಾಯಿಸಲಾರದೆ ಮುಚ್ಚಿ ಹೋಗಿವೆ. ಶಿಕ್ಷಕರು ಬೀದಿ ಪಾಲಾಗಿದ್ದಾರೆ. ಟಿ. ವಿ. ಗಳಲ್ಲಿ ಬಿತ್ತರವಾದ ಹಣ್ಣು ಮಾರುವ ಶಿಕ್ಷಕರ ಬಗ್ಗೆ ಅನುಕಂಪ ತೋರಿಸುವ ಮಕ್ಕಳಲ್ಲಿರುವ ಕನಿಷ್ಠ ಕಾಳಜಿಯೂ ನಮ್ಮ ಸರ್ಕಾರಕ್ಕೆ ಇಲ್ಲವಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನೊಂದ ಶಿಕ್ಷಕರ ನೆರವಿಗೆ ಧಾವಿಸದೆ ಆಶ್ವಾಸನೆಗಳಲ್ಲೇ ಕಾಲದೂಡುತ್ತಿದೆ. ಎರಡೆರಡು ಬಾರಿ ಶಿಕ್ಷಕರ ವಿವರ ಕೇಳಿದ ಇಲಾಖೆ ಅದರ ಬಗ್ಗೆ ಚಕಾರವೆತ್ತಿಲ್ಲ. ಸರ್ಕಾರದ ಸಹಾಯ ಹಸ್ತದ ಭರವಸೆಗೆ ಶಿಕ್ಷಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. “ಫೀ ಕಟ್ಟಿ ದಾಖಲಾಗಿ” ಎಂಬ ಸ್ಪಷ್ಟ ನಿರ್ದೇಶನ ಬಂದರೆ ಸಂಸ್ಥೆಗಳವರು ಶಿಕ್ಷಕರ ವೇತನ ಪಾವತಿಸಬಹುದು. ಪೆಟ್ರೋಲ್, ಡಿಸೆಲ್, ವಿದ್ಯುತ್, ಆಹಾರ ಸಾಮಗ್ರಿಗಳ ಬೆಲೆ ದಿನೇ ದಿನೇ ಏರುತ್ತಿದೆ ಅದನ್ನು ಪ್ರತಿಭಟಿಸುತ್ತಿಲ್ಲ. ಶಾಲಾ ಶುಲ್ಕ ಮಾತ್ರಕ್ಕೆ ಏಕೆ ಈ ಕಡಿವಾಣ?
10) ಪಠ್ಯಪುಸ್ತಕಗಳ ಗೊಂದಲ
ಶಾಲೆ ಪ್ರಾರಂಭವಾದ ಒಂದೆರಡು ತಿಂಗಳವರೆಗೂ ಪಠ್ಯಪುಸ್ತಕಗಳು ಸಿಗುವುದಿಲ್ಲ. ಇಲ್ಲಿಯೂ ಖಾಸಗಿ ಶಾಲೆಯವರಿಗೆ ಮಲತಾಯಿ ಧೋರಣೆ. ಜನವರಿ – ಫೆಬ್ರವರಿಯಲ್ಲಿ ಬೇಡಿಕೆ ಸಲ್ಲಿಸಿ ಮುಂಗಡ ಹಣ ಪಾವತಿಸಬೇಕು. ಹಿಂದೆ ಪಠ್ಯಪುಸ್ತಕಗಳು ಅಂಗಡಿಗಳಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದವು. ಮಕ್ಕಳು ತಮಗೆ ಬೇಕಾದ ಪುಸ್ತಕಗಳನ್ನು ಖರೀದಿಸುತ್ತಿದ್ದರು. ಈಗ ಶಾಲೆಯವರಿಗೆ ಇದೊಂದು ಹೊರೆ. ಮಕ್ಕಳಿಂದ ಹಣ ವಸೂಲಿ… ನಂತರ ಕರೆದಾಗ ಕ್ಯೂನಿಂತು ಪುಸ್ತಕಗಳನ್ನು ನಮ್ಮದೇ ಖರ್ಚಿನಲ್ಲಿ ತರುವುದು. ಮಾರಾಟ ಪುಸ್ತಕಗಳ ಬದಲಿಗೆ ಉಚಿತ ವಿತರಣೆ ಪುಸ್ತಕಗಳನ್ನು ಕೊಟ್ಟರೂ ಬಾಯ್ಮುಚ್ಚಿಕೊಂಡಿರಬೇಕು. ಹರಿದ, ಪ್ರಿಂಟ್ ಇಲ್ಲದ ಪುಸ್ತಕಗಳನ್ನು ಕೊಟ್ಟರೂ ಪ್ರಸಾದವೆಂಬAತೆ ಸ್ವೀಕರಿಸಬೇಕು. ಖಾಸಗಿ ಸಂಸ್ಥೆಗಳಿಗೆ ಏಕಿಂಥ ಶಿಕ್ಷೆ? ಪಠ್ಯ ಪುಸ್ತಕಗಳನ್ನು ಮುಕ್ತ ಮಾರುಕಟ್ಟೆಗೆ ಬಿಟ್ಟರೆ ಶಿಕ್ಷಕರ ಹೊರೆ ತಪ್ಪೀತು!
ಇಷ್ಟೆಲ್ಲಾ ಗೊಂದಲಗಳ ನಡುವೆ ಇಲಾಖೆಯ ಜೊತೆಗೆ ಕೈ ಜೋಡಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಇಲ್ಲ ಸಲ್ಲದ ಗೂಬೆ ಕೂರಿಸುವ ಪರಿಪಾಠ ನಿಲ್ಲಬೇಕು. ಗುರು-ಶಿಷ್ಯ ಪರಂಪರೆಯ ಪವಿತ್ರ ಭಾವನೆ ಇರುವ ಸನ್ನಿವೇಶದಲ್ಲಿ ಅಸಹ್ಯವಾದ ಮಾತುಗಳಿಂದ ನಿಂದಿಸುವ, ಮಕ್ಕಳ ಮುಂದೆ ತುಚ್ಛವಾಗಿ ಬಿಂಬಿಸುವ ಕಾರ್ಯಕ್ರಮಗಳು ನಿಲ್ಲಬೇಕು. ಯಾರು ತಪ್ಪಿತಸ್ಥರೋ ಅವರನ್ನು ಮಾತ್ರ ಪ್ರಶ್ನಿಸಿ ವಿಚಾರಿಸಿ, ಎಲ್ಲವನ್ನೂ ಸಾರ್ವತ್ರೀಕರಣಗೊಳಿಸಬೇಡಿ. ವಿದ್ಯಾದೇಗುಲಗಳನ್ನು, ವಿದ್ಯಾಗುರುಗಳನ್ನು ಗೌರವಿಸಿ ಕಾಪಾಡುವ ಕಾರ್ಯ ನಡೆಯಲಿ.
– ಜಸ್ಟಿನ್ ಡಿಸೊಜಾ.
ಸಿದ್ಧಗಂಗಾ ಸಂಸ್ಥೆ