ಸರ್ಕಾರಿ ನೌಕರರಿಗೆ ಮತ್ತೊಂದು ಮೂಗುದಾರ: ಅನಪೇಕ್ಷಿತ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ

ಬೆಂಗಳೂರು: ಇನ್ನುಮುಂದೆ ಸರ್ಕಾರಿ ನೌಕರರು, ಅಧಿಕಾರಿಗಳು ಸರ್ಕಾರದ ನೀತಿಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿಕೂಲ ಹೇಳಿಕೆ ನೀಡಿದರೆ ಅಂತಹವರ ಮೇಲೆ ಶಿಸ್ತುಕ್ರಮ ಜರುಗಿಸುವುದಾಗಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ ಎಚ್ಚರಿಕೆ ನೀಡಿದೆ.
ನಾಗರೀಕ ಸೇವೆಯಲ್ಲಿರುವ ಸರ್ಕಾರಿ ನೌಕರರು, ಅಧಿಕಾರಿ ವರ್ಗದವರು ಸರ್ಕಾರದ ವಿರುದ್ಧ ಅನಪೇಕ್ಷಿತ ಹೇಳಿಕೆಗಳನ್ನು ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇಂತಹ ಪ್ರಸಂಗಗಳು ಸರ್ಕಾರದ ಆಡಳಿತ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತವೆ ಹಾಗೂ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡುತ್ತವೆ. ಆದ್ದರಿಂದ ಮಾಧ್ಯಮದ ಮುಂದೆ ಕೇಂದ್ರ, ರಾಜ್ಯ ಅಥವಾ ಯಾವುದೇ ಸರ್ಕಾರಗಳ ಕುರಿತು ಯಾವುದೇ ಅನಪೇಕ್ಷಿತ ಹೇಳಿಕೆ ನೀಡುವಂತಿಲ್ಲ ಎಂದು ಸರ್ಕಾರ ತಡೆಯೊಡ್ಡಿದೆ.
ನಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದ ಹೊರತು ಯಾರೇ ಸರ್ಕಾರಿ ನೌಕರರು ಸರ್ಕಾರದ ಯಾವ ಅಧಿಕೃತ ಕೃತ್ಯವು ಪ್ರತಿಕೂಲ ಟೀಕೆಯ ಅಥವಾ ಮಾನಹಾನಿ ಸ್ವರೂಪದ ನಿಂದನೆಯ ವಸ್ತು ವಿಷಯವಾಗಿರುವುದೂ ಆ ಯಾವುದೇ ಅಧಿಕೃತ ಕೃತ್ಯದ ಸಮರ್ಥನೆಗಾಗಿ ಯಾವುದೇ ನ್ಯಾಯಾಲಯಕ್ಕೆ ಅಥವಾ ಪತ್ರಿಕೆಗೆ ಮೊರೆ ಹೋಗತಕ್ಕದ್ದಲ್ಲ ಎಂದು ಸೂಚಿಸಿದೆ.
ಸರ್ಕಾರಿ ಯೋಜನೆಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಯನ್ನು ಪ್ರಸಾರ ಮಾಡುವುದು ಸೇರಿದಂತೆ ಇತರ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿದ್ದಲ್ಲಿ ಮಾತ್ರ ಅಧಿಕಾರಿಗಳು ಮಾಧ್ಯಮಗಳನ್ನು ಬಳಸಬಹುದಾಗಿದ್ದು, ಕುಂದು ಕೊರತೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳನ್ನು ವೇದಿಕೆಗಳನ್ನಾಗಿರಿಸಿಕೊಂಡು ಇಲಾಖೆಯ ಅಥವಾ ಸರ್ಕಾರದ ಸಾಧನೆಗಳನ್ನು ಅಧಿಕಾರಿಗಳ ವೈಯಕ್ತಿಕ ಸಾಧನೆಗಳೆಂಬಂತೆ ಪ್ರದರ್ಶಿಸಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಈ ನಿಟ್ಟಿನಲ್ಲಿ ಇಲಾಖೆಯ ಸಾಧನೆಗಳ ಬಗ್ಗೆ ಅಥವಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಬೇಕಾದ ಸಂದರ್ಭದಲ್ಲಿ ಅಧಿಕಾರಿಗಳು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸದೇ ಸರ್ಕಾರದ ಅಥವಾ ಆಡಳಿತ ಹೆಸರಿನಲ್ಲಿ ತೆರೆಯಲಾದ ಖಾತೆಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ತಿಳಿಸಿದ್ದಾರೆ.