ರಾಹುಲ್ ವಿರುದ್ಧ ಸಾವರ್ಕರ್ ಮೊಮ್ಮಗ ಕಿಡಿ ಸಾರ್ವರ್ಕರ್ ಕ್ಷಮೆ ಕೇಳಿದ್ದನ್ನು ಸಾಬೀತುಪಡಿಸಲು ಆಗ್ರಹ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಾರ್ವರ್ಕರ್ ಅವರ ಮೊಮ್ಮಗ ಕಿಡಿಕಾರಿದ್ದಾರೆ.
ತಮ್ಮ ತಾತ ಬ್ರಿಟೀಷರ ಬಳಿ ಕ್ಷಮೆ ಕೇಳಿದ್ದರು ಎಂಬುದನ್ನು ಸಾಬೀತು ಮಾಡಿ ಎಂದು ಹಿಂದೂ ರಾಷ್ಟ್ರವಾದಿ ವಿ.ಡಿ. ಸಾವರ್ಕರ್ ಅವರ ಮೊಮ್ಮಗ ಹರಿಹಾಯ್ದಿದ್ದಾರೆ.
ನನ್ನ ಹೆಸರು ಸಾವರ್ಕರ್ ಅಲ್ಲ, ಗಾಂಧಿ. ಗಾಂಧಿ ಎಂದಿಗೂ ಕ್ಷಮೆ ಕೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು.
ರಾಹುಲ್ ಗಾಂಧಿಯವರು ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಲೋಕಸಭೆ ಸದಸ್ಯತ್ವ ಕಳೆದುಕೊಂಡ ಬಳಿಕ ನಡೆಸಿದ್ದ ಮೊದಲ ಸುದ್ದಿಗೋಷ್ಠಿಯಲ್ಲಿ, ಸಾವರ್ಕರ್ ಹೆಸರು ಉಲ್ಲೇಖಿಸಿ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್, ‘ಕ್ಷಮೆ ಕೇಳಲು ನಾನೇನು ಸಾವರ್ಕರ್ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸಾವರ್ಕರ್ ಕ್ಷಮೆ ಕೇಳಿದ್ದರು ಎಂಬುದನ್ನು ಸಾಬೀತು ಮಾಡುವ ದಾಖಲೆಗಳನ್ನು ತೋರಿಸುವಂತೆ ಅವರಿಗೆ ಸವಾಲು ಹಾಕುತ್ತೇನೆ’ ಎಂದಿದ್ದಾರೆ.
ರಾಜಕೀಯ ಪ್ರಚಾರಕ್ಕಾಗಿ ದೇಶಪ್ರೇಮಿಗಳ ಹೆಸರುಗಳನ್ನು ಬಳಸುವುದು ತಪ್ಪು ಮತ್ತು ಶೋಚನೀಯ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.