ಶಾಲಾ ಶಿಕ್ಷಕರ ನೇಮಕಾತಿ! ಅಭ್ಯರ್ಥಿಗಳಿಗೆ ಎರಡು ಬಾರಿ ತಪಾಸಣೆ: ಒಂದೂವರೆ ಗಂಟೆ ಮುಂಚೆ ಹಾಜರಿರುವುದು ಕಡ್ಡಾಯ
ದಾವಣಗೆರೆ : ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ತಡೆಗಟ್ಟಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಇಎನ್‌ಟಿ ಸರ್ಜನ್‌ಗಳ ಮೂಲಕ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.
ಎಲ್ಲಾ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ಎರಡು ಬಾರಿ ತಪಾಸಣೆಗೆ ಒಳಪಡಿಸಲಾಗುವುದು. ಮೊದಲ ಬಾರಿ ಪರೀಕ್ಷಾ ಕೇಂದ್ರ ಆವರಣಕ್ಕೆ ಪ್ರವೇಶಿಸುವಾಗ ಪರೀಕ್ಷಾ ಸಿಬ್ಬಂದಿಯವರಿ0ದ ತಪಾಸಣೆ ಮಾಡಲಾಗುತ್ತದೆ. ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆಗೆ ಒಳಪಡಿಸಿ ಶೂ, ಸಾಕ್ಸ್ ಮತ್ತು ಚಪ್ಪಲಿಗಳನ್ನು ಬಿಟ್ಟು ಕೊಠಡಿಯೊಳಗೆ ಪ್ರವೇಶಿಸಬೇಕು.ಎರಡನೇ ಬಾರಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುನ್ನ ಕೊಠಡಿ ಮೇಲ್ವಿಚಾರಕರಿಂದ ತಪಾಸಣೆ ಮಾಡಲಾಗುವುದು. ಯಾವುದೇ ರೀತಿಯ ಅಕ್ರಮಗಳು ಆಗಬಾರದೆಂಬ ಕಾರಣಕ್ಕೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಮ್ಮಲ್ಲಿ ಇ.ಎನ್.ಟಿ ಸರ್ಜನ್‌ಗಳನ್ನು 3 ಕೇಂದ್ರಗಳಿಗೆ ನೇಮಿಸಿದ್ದು, ಅಭ್ಯರ್ಥಿಗಳನ್ನು ತಪಾಸಣೆ ಮಾಡಲಿದ್ದಾರೆ.
ಅಭ್ಯರ್ಥಿಗಳು ಮೊಬೈಲ್, ಎಲೆಕ್ಟ್ರಾನಿಕ್ ವಾಚ್ ಸೇರಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣ ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಗೌಪ್ಯತಾ ದೃಷ್ಟಿಯಿಂದ ಅಭ್ಯರ್ಥಿಗಳು ಎರಡು ಬಾರಿ ತಪಾಸಣೆಗೆ ಒಳಪಡಬೇಕಾಗಿರುವುದರಿಂದ ಪ್ರತಿ ಅಧಿವೇಶನ ಬೆಳಿಗ್ಗೆ 8 ಗಂಟೆಗೆ ಮತ್ತು ಅಪರಾಹ್ನ 1 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುವುದು ಮತ್ತು ಪರೀಕ್ಷೆ ಪ್ರಾರಂಭವಾಗುವುದಕ್ಕೆ ಅರ್ಧಗಂಟೆ ಮುಂಚೆ ಪರೀಕ್ಷಾ ಕೇಂದ್ರದ ಪ್ರವೇಶದ ಬಾಗಿಲನ್ನು ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.ಮೇ.21 ರಿಂದ 22 ರವರೆಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರತಿ ಅಧಿವೇಶನದ ಪರೀಕ್ಷೆ ಪ್ರಾರಂಭದ ಅವಧಿಗಿಂತ 1.30 ಗಂಟೆ ಮುಂಚಿತವಾಗಿ ಹಾಜರಿರುವುದು ಕಡ್ಡಾಯ ಎಂದು ತಿಳಿಸಿದ್ದಾರೆ.