Science: ಪ್ರಾಯೋಗಿಕ ಸತ್ಯ ಶೋಧನೆಗೆ ಹಚ್ಚುವುದೇ ವಿಜ್ಞಾನ – ಕುಮಾರ್ ಎಸ್ ಕೆ

ದಾವಣಗೆರೆ: (Science) ಮೇಲ್ನೊಟಕ್ಕೆ ಕಾಣುವ ಯಾವುದೇ ವಿಷಯವನ್ನು ಸೀದಾಸಾದಾ ಒಪ್ಪಿಕೊಳ್ಳದೆ ಅದರ ಪ್ರಾಯೋಗಿಕ ಸತ್ಯ ಶೋಧನೆಗೆ ಹಚ್ಚಿ ಮೂಲ ಹುಡುಕುವಂತೆ ಪ್ರೇರೇಪಿಸುವುದೇ ವಿಜ್ಞಾನ ಎಂದು ಎಸ್ ಡಿ ಎಲ್ ಟ್ರಸ್ಟ್ ನ ಚಿಟ್ಟಕ್ಕಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಎಸ್ ಕೆ ಕುಮಾರ್ ಹೇಳಿದರು.
ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ದಿನಾಂಕ : 28.2./2025 ರ ಬೆಳಿಗ್ಗೆ 11.30 ಕ್ಕೆ ಏರ್ಪಡಿಸಿದ್ದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಕಂಡ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರಾದ ಸರ್ ಸಿ ವಿ ರಾಮನ್ ಅವರು 1928 ರ ಫೆಬ್ರವರಿ 28 ರಂದು ಬೆಳಕಿನ ಚದುರುವಿಕೆ ಕುರಿತು ತಿಳಿಸಿಕೊಟ್ಟ ಸ್ಮರಣಾರ್ಥ ಪ್ರತಿ ವರ್ಷ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು
ನಮಗೆ ಗೊತ್ತಿಲ್ಲದ ಎಷ್ಟೋ ಪ್ರಾಕೃತಿಕ ವಾಸ್ತವ ಸಂಗತಿಗಳನ್ನು ಹಲವಾರು ವಿಜ್ಞಾನಿಗಳು ಆಳವಾಗಿ ಸಂಶೊಧನೆ ಮಾಡಿ ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ನಿಯಮಗಳ ಆಧಾರದ ಮೇಲೆ ಬೆಳಕಿಗೆ ತಂದಿದ್ದಾರೆ . ಸರ್ ಜಗದೀಶ್ ಚಂದ್ರ ಬೋಸ್, ನ್ಯೂಟನ್, ಐನ್ ಸ್ಟೈನ್ ರಂತಹ ಅನೇಕ ಮೇಧಾವಿ ವಿಜ್ಞಾನಿಗಳು ಪ್ರಪಂಚಕ್ಕೆ ಕೊಟ್ಟಿರುವ ವೈಜ್ಞಾನಿಕ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಇಂತಹ ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಓದುವುದರಿಂದ ವೈಜ್ಞಾನಿಕ ಮನೋಭಾವ ಹಾಗೂ ಸಂಶೋಧನಾಸಕ್ತಿ ನಮ್ಮಲ್ಲೂ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಕೂಡ ಕಾರ್ಯೋನ್ಮುಖವಾಗಿ ದೇಶಕ್ಕೆ ಕೊಡುಗೆ ನೀಡಬಲ್ಲ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು.
7 ನೇ ತರಗತಿ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕಿ ನಂದಿತ ವಿಜ್ಞಾನ ದಿನಾಚರಣೆಯ 2025 ರ ಥೀಮ್ ಕುರಿತು ಹಾಗೂ ವಿಜ್ಞಾನ ಶಿಕ್ಷಕರಾದ ಸಿದ್ಧಾರ್ಥ್ ವಿಜ್ಞಾನ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು. ಶಿಕ್ಷಕಿ ಸೋನಾ ಸಬು ಕಾರ್ಯಕ್ರಮದ ನಿರೂಪಣೆ ಮಾಡಿದರೆ, 8 ನೇ ತರಗತಿ ವಿದ್ಯಾರ್ಥಿನಿಯರಾದ ಯಾಚಿಕಾ ಸ್ವಾಗತಿಸಿ, ಹರಿಪ್ರಿಯ ವಂದಿಸಿದರು.
ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳು ವೇದಿಕೆಯಲ್ಲಿ ಪ್ರದರ್ಶನಗೊಂಡವು. ಉಪ ಪ್ರಾಂಶುಪಾಲರಾದ ಕು. ಅಖಿಲೇಶ್ವರಿ ಉಪಸ್ಥಿತರಿದ್ದರು.