ಜನಸಂಖ್ಯೆ ಇಲ್ಲದ ಕಡೆ ಪರಿಶಿಷ್ಟರ ಅನುದಾನ ಬಳಕೆ ಮಾಡದಂತೆ ಕಟ್ಟೆಚ್ಚರ,  ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

ದಾವಣಗೆರೆ: ಅನುಸೂಚಿತ ಜಾತಿ ಮತ್ತು ಬುಡಕಟ್ಟು ಯೋಜನೆಯಡಿ ಮೂಲಭೂತ ಸೌಕರ್ಯಗಳ ಸೃಜನೆ ವೇಳೆ ಈ ಜನಸಂಖ್ಯೆಯನ್ನಾಧರಿಸಿ ಧನ ವಿನಿಯೋಗವಾಗಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಎಸ್.ಸಿ.ಪಿ, ಟಿ.ಎಸ್.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನುಸೂಚಿತ ಜಾತಿ ಮತ್ತು ಬುಡಕಟ್ಟು ಯೋಜನೆಯಡಿ ಮೀಸಲಿರಿಸಿದ ಅನುದಾನವನ್ನು ಆಸ್ತಿಗಳ ಸೃಜನೆ ಮತ್ತು ಮೂಲಭೂತ ಸೌಕರ್ಯಗಳನ್ನು ಸೃಜನೆ ಮಾಡುವಾಗ ಈ ವರ್ಗದ ಜನರು ಹೆಚ್ಚು ಇರುವ ಕಡೆ ಮತ್ತು ಅನುಕೂಲವಾಗುವ ನಿಟ್ಟಿನಲ್ಲಿ ಆಸ್ತಿಗಳ ಸೃಜನೆಯಾಗಬೇಕು. ಜನಸಂಖ್ಯೆಯೇ ಇಲ್ಲದ ಕಡೆ ಈ ಅನುದಾನ ಬಳಕೆ ಮಾಡಬಾರದೆಂದು ಸೂಚನೆ ನೀಡಿದರು.

ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಈಗಾಗಲೇ ಇಲಾಖಾವಾರು ಕ್ರಿಯಾ ಯೋಜನೆಗಳು ಅನುಮೋದನೆಯಾಗಿ ಅನುದಾನವು ಬಿಡುಗಡೆಯಾಗಿದೆ. ಈ ಇಲಾಖೆಯವರು ಫಲಾನುಭವಿಗಳ ಯೋಜನೆಗಳಾಗಿದ್ದಲ್ಲಿ ಮುಂಚಿತವಾಗಿ ಅರ್ಜಿಯನ್ನು ಆಹ್ವಾನಿಸಿ ಫಲಾನುಭವಿಗಳ ಆಯ್ಕೆಯನ್ನು ಅಂತಿಮಗೊಳಿಸಿಟ್ಟುಕೊಳ್ಳಬೇಕು. ಹರಿಹರದ ಬೆಸ್ಕಾಂ ವಿಭಾಗಕ್ಕೆ ವಿದ್ಯುತ್ ಮೂಲಭೂತ ಸೌಕರ್ಯ ಸೃಜನೆಯಡಿ ಪ.ಜಾತಿಗೆ ರೂ.70 ಲಕ್ಷ ಮತ್ತು ಪ.ಪಂಗಡದವರಿಗೆ ರೂ.35 ಲಕ್ಷ ಬಿಡುಗಡೆಯಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು. ಇದಕ್ಕೆ ಜಿಲ್ಲಾಧಿಕಾರಿಯವರು ಕಾಲಮಿತಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಕ್ರಮ ವಹಿಸಬೇಕೆಂದು ತಿಳಿಸಿ ಅಧಿಕ ಮಳೆಯಿಂದ ಹೊನ್ನಾಳಿ ಆಸ್ಪತ್ರೆ ಒಳಗೆ ನೀರು ನುಗ್ಗಿದ್ದು ವಿದ್ಯುತ್ ಸಂಪರ್ಕದ ವೈರ್‍ಗಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಿದರು.

ಎಸ್.ಸಿ.ಪಿ, ಟಿ.ಎಸ್.ಪಿ. ಕ್ರಿಯಾ ಯೋಜನೆಯನ್ವಯ ಜಿಲ್ಲೆಗೆ ಕೇಂದ್ರ, ರಾಜ್ಯ, ಜಿಲ್ಲೆ ಸೇರಿ ರೂ.345.5 ಕೋಟಿಗಳಷ್ಟು ಅನುದಾನ ನಿಗದಿ ಮಾಡಿದ್ದು ಇದರಲ್ಲಿ 125.31 ಕೋಟಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಅನುದಾನದಲ್ಲಿ 98.82 ಕೋಟಿ ಖರ್ಚು ಮಾಡಲಾಗಿದೆ. ನಿಗಧಿತ ಗುರಿಗೆ ಶೇ 28.60 ರಷ್ಟು ಸಾಧನೆ ಮಾಡಿದ್ದು ಬಿಡುಗಡೆಯಾದ ಅನುದಾನವನ್ನು ಶೇ 78.86 ರಷ್ಟು ವೆಚ್ಚ ಮಾಡಲಾಗಿದೆ. ಮುಂದಿನ ಸಭೆ ವೇಳೆಗೆ ಬಿಡುಗಡೆಯಾದ ಅನುದಾನಕ್ಕೆ ಶೇ 100 ರಷ್ಟು ಸಾಧನೆ ಮಾಡಿರಬೇಕೆಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರಾದ ಡಾ; ಮಹಂತೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!