ಎಸ್.ಸಿ.ಪಿ, ಟಿ.ಎಸ್.ಪಿ ಅನುದಾನ ಶೇ. 100 ರಷ್ಟು ಸದ್ಬಳಕೆಯಾಗಬೇಕು: ಶಿವಾನಂದ ಕಾಪಶಿ
ದಾವಣಗೆರೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಪ್ರತಿ ಇಲಾಖಾವಾರು ವಿವಿಧ ಯೋಜನೆಗಳಡಿ ಬಿಡುಗಡೆಯಾಗುವ ಅನುದಾನವನ್ನು ಶೇ. 100 ರಷ್ಟು ಸಮರ್ಪಕವಾಗಿ ಸದ್ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಪರಿಶಿಷ್ಟ ಜಾತಿ ವಿಶೇಷ ಘಟಕ ಯೊಜನೆ ಪರಿಶಿಷ್ಟ ಪಂಗಡದ ಗಿರಿಜನ ಉಪಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟರ ವಿಶೇಷ ಘಟಕ ಯೊಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಯು ಶೇ.40 ಕ್ಕಿಂತ ಹೆಚ್ಚು ಇರುವ ಗ್ರಾಮಗಳ ಕಾಲೋನಿಗಳಲ್ಲಿ ವ್ಯವಸ್ಥಿತ ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು, ಗ್ರಾಮಾಂತರ ಕೈಗಾರಿಕಾ ಕೇಂದ್ರಗಳಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿನ ನಿರುದ್ಯೋಗಿ ಅರ್ಹಫಲಾನುಭವಿಗಳನ್ನು ಗುರುತಿಸಿ ಉತ್ತಮ ಗುಣಮಟ್ಟದ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ನೀಡಬೇಕು, ಈಗಾಗಲೇ ಸೌಲಭ್ಯ ಪಡೆದ ಫಲಾನುಭವಿಗಳನ್ನು ಹೊರತಾಗಿ ಉಳಿದ ಫಲಾನುಭವಿಗಳನ್ನು ಪರಿಗಣಿಸಬೇಕು ಎಂದರು.
ನಗರದ ಟಿ.ವಿ.ಸ್ಟೇಷನ್ ಬಳಿ ಇರುವ ಕೆರೆಯ ನೀರಿನ ಮಟ್ಟ ಕುಸಿದಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಕುಂದುವಾಡ ಕೆರೆಗೆ ರಾಜನಹಳ್ಳಿ ನದಿಯಿಂದ ಜಾಕ್ವೆಲ್ ಮೂಲಕ ನೀರನ್ನು ಪೂರೈಕೆ ಮಾಡುತ್ತಿದ್ದು, ಆ ಭಾಗದ ಜನರಿಗೆ ನೀರಿನ ಕೊರತೆಯಿಲ್ಲ ಎಂದರು.
ನಗರದ ಸಮೀಪದಲ್ಲಿರುವ ಕುಂದವಾಡ ಗ್ರಾಮದಲ್ಲಿರುವ ಕೆರೆಯವರೆಗೆ ನಿರ್ಮಾಣವಾಗಿರುವ ರಸ್ತೆಯು ಕಾಲೋನಿಯಲ್ಲಿ ನಿರ್ಮಿಸಬೇಕಾಗಿತ್ತು ಎಂದು ಜಿಲ್ಲಾಧಿಕಾರಿಗಳು ಹೇಳಿದಾಗ ಕಾಲೋನಿ ಜನರೇ ಹೆಚ್ಚಾಗಿ ಆ ಮಾರ್ಗಗಳಲ್ಲಿ ಸಂಚರಿಸುವುದರಿಂದ ಜನರ ಅನುಮತಿ ಮೇರೆಗೆ ರಸ್ತೆಯನ್ನು ಅಲ್ಲಿಯೇ ನಿರ್ಮಾಣ ಮಾಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಡಿ.ಡಿ.ಪಿ.ಐ ತಿಪ್ಪೇಶಪ್ಪ, ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಡಾ. ನಾಗರಾಜ ಇತರರು ಉಪಸ್ಥಿತರಿದ್ದರು.