ಸಮಸ್ಯೆಗಳ ಆಗರವಾಗಿರುವ ಆಜಾದ್ ನಗರದ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಎಸ್ ಡಿ ಪಿ ಐ ಆಗ್ರಹ
ದಾವಣಗೆರೆ :ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ದ ಆಜಾದ್ ನಗರ ಬ್ರಾಂಚ್ ಸಮಿತಿ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ದಾವಣಗೆರೆ ನಗರದ 12ನೇ ವಾರ್ಡಿನ ಆಜಾದ್ ನಗರದ ಮಾಗನಹಳ್ಳಿ ರಸ್ತೆಯ ಸರ್ಕಾರಿ ಶಾಲೆ ಪಕ್ಕದಲ್ಲೇ ಇರುವ ಒಳಚರಂಡಿ ಮತ್ತು ಚರಂಡಿಯಿಂದ ಸದಾ ರಸ್ತೆಯ ಮೇಲೆ ನೀರು ಉಕ್ಕಿ ಹರಿಯುವುದರಿಂದ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಜನಸಾಮಾನ್ಯರು, ಶಾಲಾ ಮಕ್ಕಳು ಮತ್ತು ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟು ಮಾಡುತ್ತದೆ.ಮಳೆ ಬಂದಾಗ ಸಮಸ್ಯೆ ಹೇಳಲು ಸಾಧ್ಯವಿಲ್ಲದಷ್ಟು ವಿಪರೀತ ಎನಿಸುವಷ್ಟು ಭಾಸವಾಗುತ್ತದೆ. ಹಾಗೂ 2 ನೇ ಮುಖ್ಯ ರಸ್ತೆಯಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ CC ಚರಂಡಿಗಳಿಗೆ ಸ್ಲಾಬ್ ಗಳನ್ನು ಅಳವಡಿಸದ ಕಾರಣ, ಚರಂಡಿಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯದ ಕಾರಣ ರಸ್ತೆಯಲ್ಲಿ ಕೊಳಚೆ ನೀರು ಹರಿದು ಜನಸಾಮಾನ್ಯರಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿದೆ, ಸ್ಲಾಬ್ ಅಳವಡಿಸಿದ ಕಾರಣ ಚರಂಡಿಗಳಲ್ಲಿ ಹಲವು ಬಾರಿ ಮಕ್ಕಳು ಬಿದ್ದಿರುವ ಘಟನೆಗಳು ಕೂಡ ಸಂಭವಿಸಿವೆ. ಎಲ್ಲಿ ಬೇಕೆಂದರಲ್ಲಿ ಕೊಳಚೆ ನೀರು ನಿಂತುಕೊಂಡು ಸಾಂಕ್ರಾಮಿಕ ರೋಗಗಳು ನಗರದಲ್ಲಿ ಸರ್ವೆ ಸಾಮಾನ್ಯ ಎಂಬಂತಾಗಿದೆ.
ಆದ್ದರಿಂದ ತಾವು ಸ್ಲಾಬ್ ಅಳವಡಿಸದೆ ಇರುವ ಚರಂಡಿಗಳಿಗೆ ಶೀಘ್ರವಾಗಿ ಸ್ಲಾಬ್ ಅಳವಡಿಸಬೇಕು, ಮತ್ತು ಹೂಳು ತುಂಬಿಕೊಂಡಿರುವ ಚರಂಡಿಗಳನ್ನು ಶೀಘ್ರವಾಗಿ ಹೂಳು ತೆಗೆಸುವ ಮೂಲಕ ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹರಿಸಲು ತಾವು ಈ ಕೂಡಲೇ ಮುಂದಾಗಬೇಕು. ಅದೇ ರೀತಿ ನಗರದಲ್ಲಿ ನಾಯಿಗಳ ಸಮಸ್ಯೆ ಪರಿಹರಿಸಲು ಸಾಧ್ಯವಾಗದಷ್ಟು ಕಠಿಣವೆಂಬಂತೆ ಜನಸಾಮಾನ್ಯರಿಗೆ ನಿತ್ಯ ದಿನಬೆಳಗಾದರೆ ನಾಯಿಗಳಿಂದ ಒಂದಲ್ಲ ಒಂದು ಸಮಸ್ಯೆಗಳು ಸರ್ವೇಸಾಮಾನ್ಯ ಎಂಬಂತಾಗಿದೆ ಆದ್ದರಿಂದ ತಾವು ಈ ಎಲ್ಲ ಸಮಸ್ಯೆಗಳ ಬಗ್ಗೆ ಮುತುವರ್ಜಿ ವಹಿಸಿ ಪರಿಹರಿಸಲು ಆಗ್ರಹಿಸಿ ಮನವಿ ಪತ್ರವನ್ನು ನೀಡಲಾಯಿತು.
ಈ ಸಮಯದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ಜಬಿಉಲ್ಲ, ಸಹ ಕಾರ್ಯದರ್ಶಿ ಮೊಹಮ್ಮದ್ ಖುಬೈಬ್ ಆಜಾದ್ ನಗರ ಬ್ರಾಂಚಿನ ಉಪಾಧ್ಯಕ್ಷರಾದ ಆದಿಲ್, ಕೋಶಾಧಿಕಾರಿ ಅಲ್ತಾಫ್ ಹುಸೈನ್, ಅಸ್ಲಾಂ ಮತ್ತು ಇತರರು ಉಪಸ್ಥಿತರಿದ್ದರು.