ಹಿರಿಯ ಕಾರ್ಮಿಕ ನಾಯಕ ಕಾಮ್ರೇಡ್ ಆನಂದ್‌ರಾಜ್ ಗೆ ಸನ್ಮಾನ.
ದಾವಣಗೆರೆ: ದಾವಣಗೆರೆ ಜಿಲ್ಲೆಯ ಹಿರಿಯ ಕಾರ್ಮಿಕ ನಾಯಕ ಕಾಂ. ಆನಂದ್‌ರಾಜ್ ಅವರ ಕಾರ್ಮಿಕ ಸಂಘಟನಾ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಎಐಟಿಯುಸಿ ಕರ್ನಾಟಕ ರಾಜ್ಯ ಸಮಿತಿಯ 11 ನೇ ರಾಜ್ಯ ಸಮ್ಮೇಳನದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹೆಚ್.ಜಿ.ಅವರಗೆರೆ ಉಮೇಶ್ ಹೇಳಿದರು.
ಸಿದ್ದೇಶ್ವರ ಮಿಲ್‌ನಲ್ಲಿ ತಮ್ಮ ಕಾರ್ಮಿಕ ಜೀವನ ಆರಂಭಿಸಿದ ಕಾಂ.ಆನಂದ್‌ರಾಜ್ ಅವರು ಸುದೀರ್ಘವಾಗಿ ಆರು ದಶಕಗಳ ಕಾಲ ಕಾರ್ಮಿಕ ಸಂಘಟನೆಯನ್ನು ದಾವಣಗೆರೆ ಜಿಲ್ಲೆಯಲ್ಲಿ ಮುನ್ನಡೆಸಿದ್ದಾರೆ. 1970 ರಲ್ಲಿ ಮಾಲೀಕ ವರ್ಗದ ಗೂಂಡಾಗಿರಿಗೆ ಒಳಗಾಗಿ ಮಾರಣಾಂತಿಕ ಪೆಟ್ಟು ತಿಂದು ಬದುಕುಳಿದ ಆನಂದ್‌ರಾಜ್ ಎಂದಿಗೂ ಕಾರ್ಮಿಕ ಸಂಘಟನೆಗೆ ಬೆನ್ನುಹಾಕಿದವರಲ್ಲ. ಕಾರ್ಮಿಕ ಸಂಘಟನೆಯ ಮಹಾನ್ ನಾಯಕರುಗಳಾದ ಕಾಂ.ಪಂಪಾಪತಿ ಹಾಗೂ ಕಾಂ.ಹೆಚ್.ಕೆ.ರಾಮಚಂದ್ರಪ್ಪ ಅವರ ಒಡನಾಡಿಯಾಗಿದ್ದ ಆನಂದ್‌ರಾಜ್ ಅವರು ಇಂದಿಗೂ ಎಐಟಿಯುಸಿ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಸಮಿತಿಗಳ ಖಜಾಂಚಿಯಾಗಿ ಸಂಘಟನೆಯನ್ನು ಮತ್ತು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿ ಮೈಸೂರಿನ ಗೋವಿಂದ ರಾವ್ ಮೆಮೋರಿಯಲ್ ಹಾಲ್‌ನ ಕಾಮ್ರೇಡ್ ಎಂ.ಸಿ.ನರಸಿಂಹನ್ ಸಭಾಂಗಣದಲ್ಲಿ ನಡೆಯುತ್ತಿರುವ ಎಐಟಿಯುಸಿ ಕರ್ನಾಟಕ ರಾಜ್ಯ ಸಮಿತಿಯ 11 ನೇ ರಾಜ್ಯ ಸಮ್ಮೇಳನದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಎಐಟಿಯುಸಿ ರಾಷ್ಟ್ರೀಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್, ರಾಷ್ಟ್ರೀಯ ಮಂಡಳಿಯ ಕಾರ್ಯಾಧ್ಯಕ್ಷ ಹೆಚ್.ಮಹದೇವನ್, ರಾಜ್ಯ ಸಮಿತಿಯ ಅಧ್ಯಕ್ಷ ಹೆಚ್.ವಿ.ಅನಂತ ಸುಬ್ಬರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯ ಭಾಸ್ಕರ್, ರಾಜ್ಯ ಉಪಾಧ್ಯಕ್ಷ ಹೆಚ್.ಜಿ.ಅವರಗೆರೆ ಉಮೇಶ್, ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಕಾರ್ಮಿಕ ಮುಖಂಡ ಅವರಗೆರೆ ಚಂದ್ರು, ಅವರಗೆರೆ ವಾಸು ಉಪಸ್ಥಿತರಿದ್ದರು.
ಧನ್ಯವಾದಗಳೊಂದಿಗೆ
ಕೆ.ರಾಘವೇಂದ್ರ ನಾಯರಿ
ದಾವಣಗೆರೆ ಜಿಲ್ಲಾಧ್ಯಕ್ಷರು
ಎಐಟಿಯುಸಿ
ಮೊ: 9844314543