ಸೆಪ್ಟೆಂಬರ್ 30 ರಂದು ದಾವಣಗೆರೆಯಲ್ಲಿ ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ – ಹೆಚ್ ಎಸ್ ಶಿವಶಂಕರ
ದಾವಣಗೆರೆ: ಇದೇ ತಿಂಗಳ ೩೦ ರಂದು ಮಧ್ಯಾಹ್ನ ೩ ಗಂಟೆಗೆ ಇಲ್ಲಿನ ತ್ರಿಶೂಲ್ ಕಲಾಭವನದಲ್ಲಿ ಶ್ರೀ ಮಹಂತ ಸ್ವಾಮೀಗಳ ಜಯಂತ್ಯುತ್ಸವ ಮತ್ತು ಕೂಡಲ ಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಕಾರ್ಯಕ್ರಮ ಕೈಗೊಳ್ಳಲು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದಿಂದ ಬುಧವಾರ ಸದ್ಯೋಜಾತ ಮಠದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ೨ಎ ಮೀಸಲಾತಿ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವುದಾಗಿ ಆರು ತಿಂಗಳ ಸಮಯಾವಕಾಶ ಕೇಳಿದ್ದರು. ಆದರೆ, ಈಗ ಅವರು ಸಿಎಂ ಸ್ಥಾನದಲ್ಲಿಲ್ಲ ಮತ್ತು ಕೊಟ್ಟಿದ್ದ ಗಡುವು ಸೆ.೧೫ಕ್ಕೆ ಮುಗಿದಿದ್ದು, ಈ ಅಭಿಯಾನ ಕಾರ್ಯಕ್ರಮದ ಮೂಲಕ ಮುಂದೆ ಕೈಗೊಳ್ಳುವ ಹೋರಾಟದ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುತ್ತೇವೆ ಎಂದರು.
ಬರುವ ತಿಂಗಳು ಅ.೧ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸಲು ಇಚ್ಛಿಸಿರುವ ಹೋರಾಟಕ್ಕೆ ಈ ಕಾರ್ಯಕ್ರಮ ಮುನ್ನುಡಿಯಾಗಲಿದೆ. ಈ ಅಭಿಯಾನದಲ್ಲಿ ಸುಮಾರು ೨೫ ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.
ಸೆ.೩೦ ರಂದು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಅಭಿಯಾನ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ವಿನಯ್ ಕುಲಕರ್ಣಿ, ಸಚಿವ ಅರವಿಂದ್ ಬೆಲ್ಲದ್, ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್, ಕಿತ್ತೂರುರಾಣಿ ಚೆನ್ನಮ್ಮ ಬಳಗದ ವೀಣಾ ಕಾಶಪ್ಪನವರ್ ಸೇರಿದಂತೆ ಸಮಾಜದ ಶಾಸಕರು, ಸಚಿವರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಬಿಎಸ್‌ಎನ್‌ಎಲ್ ಕಚೇರಿಯಿಂದ ಗಾಂಧಿವೃತ್ತದ ವರೆಗೆ ಬೈಕ್ ರ್‍ಯಾಲಿ ನಡೆಯಲಿದ್ದು, ಜಯಮೃತ್ಯುಂಜಯ ಶ್ರೀಗಳನ್ನು ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಕರೆತರಲಾಗುವುದು ಎಂದರು.
ಸಭೆಯಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ವಿ. ಅಶೋಕ್, ಮಾಜಿ ಮೇಯರ್ ಬಿ.ಜೆ. ಅಜಯಕುಮಾರ್, ಪಾಲಿಕೆ ಸದಸ್ಯ, ಸೋಗಿ ಶಾಂತಕುಮಾರ್, ಮುಖಂಡರಾದ ಮಹಾಂತೇಶ್ ಒಣರೊಟ್ಟಿ, ಜಯಪ್ರಕಾಶ್ ಸುತ್ತೂರು, ಮುರುಗೇಶ್ ಸೋಗಿ ಉಪಸ್ಥಿತರಿದ್ದರು.