ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ತುಂಬಾ ಸ್ಲೋ.! ಶುಲ್ಕಗಳ ಹೆಚ್ಚಳ ತುಂಬಾ ತುಂಬಾ ಫಾಸ್ಟ್.! ಬಿಜೆಪಿ ಸರ್ಕಾರದಲ್ಲಿ ಮಾತ್ರ ಸಾಧ್ಯ – ಕೆ.ಎಲ್.ಹರೀಶ್ ಬಸಾಪುರ

ದಾವಣಗೆರೆ: ರಾಜ್ಯ ಬಿಜೆಪಿ ಸರ್ಕಾರ, ಸರ್ಕಾರಿ ಕಚೇರಿಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಿದ್ದು, ಆದರೆ ನೀಡಬೇಕಾದ ಸೌಕರ್ಯಗಳನ್ನು ಮಾತ್ರ ಸರಿಯಾಗಿ ನೀಡುತ್ತಿಲ್ಲ ಎಂಬುದಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಣಿ, ಮುಟೇಶನ್, ಅಳತೆ , ಅದ್ಬಸ್ತ್ ಗಾಗಿ ಅರ್ಜಿ ಹಾಕಲು ಬರುವ ರೈತರಿಗೆ ಸಿಗುವ ಸಿದ್ಧ ಉತ್ತರ ಸರ್ವರ್ ಸ್ಲೋ ಎನ್ನುವುದೇ ಸಾಕ್ಷಿ.
ನಗರದ ಹೊರ ಭಾಗದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ರೈತರು ಬರುವಷ್ಟರಲ್ಲಿಯೇ ಸುಸ್ತಾಗಿರುತ್ತಾರೆ. ಇನ್ನು ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವ ವೇಳೆಗೆ ಕಚೇರಿ ಸಿಬ್ಬಂದಿಯ ಉತ್ತರ ಮತ್ತದೇ ಸರ್ವರ್ ಸ್ಲೋ.
ಪಣಿ, ಮುಟೇಶನ್, ಅಳತೆ , ಅದ್ಬಸ್ತ್ ಹಾಗೂ ಇನ್ನಿತರ ರೈತರ ಸಂಬಂಧಪಟ್ಟ ಅರ್ಜಿ ಪಡೆಯಲು ಒಬ್ಬರೇ ಮಹಿಳಾ ಸಿಬ್ಬಂದಿ ಇದ್ದು, ಮಾಹಿತಿ ಪಡೆಯಲು ಹಾಗೂ ಅರ್ಜಿ ಸಲ್ಲಿಸಲು ಅವರ ಬಳಿಗೆ ತೆರಳಬೇಕು ಅದರ ಮೇಲೆ ಸರ್ವರ್ ಸಮಸ್ಯೆ, ಇನ್ನೊಬ್ಬ ಸಿಬ್ಬಂದಿ ನೇಮಿಸಲಾಗದಷ್ಟು ಬಡತನದಲ್ಲಿ ಇದೆಯೇ ನಮ್ಮ ಸರ್ಕಾರ ಎಂಬ ಪ್ರಶ್ನೆ ರೈತರದ್ದು.
ಎಲ್ಲರಿಗೂ ಅನ್ನ ನೀಡುವ ಅನ್ನದಾತ ರೈತನಿಗೆ ಕೂರಲು ಸಹ ನಮ್ಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕುರ್ಚಿಗಳಿಲ್ಲ ಎಂಬುದೇ ವಿಪರ್ಯಾಸ. ನಾಡಕಚೇರಿಗಳಲ್ಲಿಯೂ ಸಹ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಹೇಳುತ್ತರಾದರು ಅಲ್ಲಿಯೂ ಸಹ ಮತ್ತದೇ ಸಮಸ್ಯೆ ಸರ್ವರ್ ಸ್ಲೋ.
ದೂರದ ಹುಚ್ಚವನಹಳ್ಳಿ ಗ್ರಾಮದಿಂದ ಬಂದಿದ್ದ ಪರಮೇಶಪ್ಪ ಎಂಬ ರೈತ ತಾನು ಬೆಳಗ್ಗೆಯಿಂದಲೂ ಇಲ್ಲಿ ಕಾಯುತ್ತಿದ್ದು ನಾವು ನೀಡುತ್ತಿರುವ ಹಣಕ್ಕೆ ಈ ಸರ್ಕಾರದಲ್ಲಿ ಬೆಲೆಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇನ್ನು ಗೋಪನಹಳ್ ಗ್ರಾಮದ ಪ್ರಭು, ಈಚಗಟ್ಟ ಗ್ರಾಮದ ದರ್ಶನ್, ರವಿಕುಮಾರ್, ಓಬನಹಳ್ಳಿ ಗ್ರಾಮದ ಅಬ್ದುಲ್ ಕೌಸೂರ್ ಸೇರಿದಂತೆ ಅನೇಕ ರೈತರ ಸಮಸ್ಯೆ ಒಂದೇ ನಾವು ಬೆಳಗ್ಗೆ 11 ಗಂಟೆಗೆ ಬಂದಿದ್ದೆವು ಈಗ ನೋಡಿ ಸಮಯ 4.30 ಕೇವಲ ಅರ್ಜಿ ಹಾಕುವುದೇ ಆದರೆ ಕೆಲಸ ಆಗುವುದು ಇನ್ಯಾವಾಗೋ ಎಂಬ ಬೇಸರದಿಂದ ಮನೆ ಕಡೆ ನಡೆದರು.
ಆಧುನಿಕ ತಂತ್ರಜ್ಞಾನದಲ್ಲಿ ನಮ್ಮ ದೇಶದ ವಿಜ್ಞಾನಿಗಳು, ಇಂಜಿನಿಯರ್ ಗಳು ಅನೇಕ ಆವಿಷ್ಕಾರಗಳನ್ನು ಕಂಡುಹಿಡಿದಿದ್ದು, ನಮ್ಮ ಸರ್ಕಾರ ನಿಜವಾಗಿಯೂ ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ಇದ್ದರೆ ಸರ್ಕಾರಿ ಕಚೇರಿಯ ಸರ್ವರ್ ಗಳ ಬಗ್ಗೆ ಸ್ವಲ್ಪ ಗಮನ ಹರಿಸಿ ಅವರು ನೀಡುತ್ತಿರುವ ಹಣಕಾದರೂ ಸರಿಯಾದ ಸೌಲಭ್ಯ ನೀಡುವಂತಾಗಲಿ ಎಂಬುದೇ ಎಲ್ಲರ ಬಯಕೆ.

 
                         
                       
                       
                       
                       
                       
                       
                      