ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ? ಸುಳಿವು ಕೊಟ್ಟ ನಡ್ಡಾ

ಕೊಪ್ಪಳ: ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಜೊತೆ ಬಿಜೆಪಿ ಜನರ ಮುಂದೆ ಹೋಗಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಕೊಪ್ಪಳ ಸೇರಿದಂತೆ ರಾಜ್ಯದ 10 ಜಿಲ್ಲೆಗಳ ನೂತನ ಕಾರ್ಯಾಲಯ ಭವನಗಳ ಉದ್ಘಾಟನೆ ಮತ್ತು 3 ಜಿಲ್ಲೆಗಳ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮರ್ಥ ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವ, ಯಡಿಯೂರಪ್ಪ, ಬೊಮ್ಮಾಯಿ ಅವರ ನೇತೃತ್ವದಲ್ಲಿ ದೇಶ- ರಾಜ್ಯದಲ್ಲಿ ಮಹಿಳಾ ಸಶಕ್ತೀಕರಣ ಕಾರ್ಯ ನಡೆಯಿತು. 12 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣ ನಡೆಯಿತು ಎಂದು ವಿವರಿಸಿದರು.
ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ್, ವಿಜಯಪುರ, ಬಾಗಲಕೋಟೆ, ಕೋಲಾರ, ಚಾಮರಾಜನಗರ, ಹಾವೇರಿ ಮತ್ತು ಗದಗದಲ್ಲಿ ನಿರ್ಮಿಸಿದ ನೂತನ ಕಾರ್ಯಾಲಯಗಳನ್ನು ಕೊಪ್ಪಳದಲ್ಲಿ ಜೆ.ಪಿ.ನಡ್ಡಾ ಅವರು ಉದ್ಘಾಟಿಸಿದರು. ವಿಜಯನಗರ, ಕೊಡಗು ಮತ್ತು ಉತ್ತರಕನ್ನಡ ಜಿಲ್ಲಾ ಕಚೇರಿ ಕಟ್ಟಡಗಳಿಗೆ ಅವರು ಶಿಲಾನ್ಯಾಸ ನೆರವೇರಿಸಿದರು.
ಆಯುಷ್ಮಾನ್ ಭಾರತ್ ಮೂಲಕ 5 ಲಕ್ಷ ರೂಪಾಯಿಯ ಸ್ವಾಸ್ಥ್ಯ ರಕ್ಷಣೆ ಲಭಿಸಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಹರ್ ಘರ್ ಜಲ್ (ನಳ್ಳಿ ನೀರು) ಲಭಿಸುತ್ತಿದೆ. ಉಜ್ವಲ ಯೋಜನೆಯಡಿ 9 ಕೋಟಿ ಸಿಲಿಂಡರ್ ಸಂಪರ್ಕ ಕೊಡಲಾಗಿದೆ ಎಂದು ತಿಳಿಸಿದರು. ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ಕರ್ನಾಟಕ ಸರಕಾರ ನೀಡಿದೆ. ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕ. ಸಂಕಷ್ಟದಲ್ಲಿರುವ ಸಮಾಜದ ಎಲ್ಲರಿಗೂ ಯಡಿಯೂರಪ್ಪ- ಬೊಮ್ಮಾಯಿ ಸರಕಾರ ನೆರವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರಾ ಮಾಡಿದ್ದರು. ಅದು ಭಾರತ್ ಜೋಡೋ ಯಾತ್ರೆ ಅಲ್ಲ; ಅದು ಪ್ರಾಯಶ್ಚಿತ್ತ ಯಾತ್ರೆ. ಇವರ ಪೂರ್ವಜರೇ ಭಾರತದ ಒಡೆಯುವಿಕೆಗೆ ಕಾರಣರಾಗಿದ್ದರು ಎಂದು ಟೀಕಿಸಿದರು. ದೇಶದ್ರೋಹಿಗಳ ಜೊತೆ ಅವರು ಯಾತ್ರೆ ಮಾಡಿದ್ದರು ಎಂದು ಆಕ್ಷೇಪಿಸಿದರು.
ವಿಕಾಸ ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತೇ ಇಲ್ಲ. ಭ್ರಷ್ಟತೆಯೇ ಕಾಂಗ್ರೆಸ್ ಹಿನ್ನೆಲೆ ಮತ್ತು ಇತಿಹಾಸ. ಅದೇ ಇತಿಹಾಸವನ್ನು ಇಲ್ಲಿಯೂ ಕಾಂಗ್ರೆಸ್ಸಿಗರು ಹೊಂದಿದ್ದಾರೆ ಎಂದ ಅವರು, ಬಿಜೆಪಿಯನ್ನು ಬೆಂಬಲಿಸಿದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.
ರಾಜ್ಯದ 10 ಜಿಲ್ಲೆಗಳಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಬಿಜೆಪಿ ಕಾರ್ಯಾಲಯಗಳ ಉದ್ಘಾಟನೆ ಹಾಗೂ 03 ಜಿಲ್ಲೆಗಳ ನೂತನ ಕಾರ್ಯಾಲಯಗಳ ಶಂಕುಸ್ಥಾಪನೆ ಕಾರ್ಯಕ್ರಮ. https://t.co/QDBOUEOXjs
— Basavaraj S Bommai (@BSBommai) December 15, 2022
ಕೋವಿಡ್‍ನಿಂದ ಚೀನಾ ಮುಕ್ತವಾಗಿಲ್ಲ. ಯುರೋಪ್‍ನಲ್ಲಿ, ಅಮೇರಿಕಾದಲ್ಲೂ ಇದೇ ಸ್ಥಿತಿ ಇದೆ. ಭಾರತವು ಎಲ್ಲರಿಗೂ ಕೋವಿಡ್ ಲಸಿಕೆ ನೀಡಿ ಕೋವಿಡ್‍ಮುಕ್ತ ದೇಶÀವನ್ನಾಗಿ ಮಾಡಿದ್ದೇವೆ. ಬಿಜೆಪಿ ಸಾಧನೆಯ ಜೊತೆ ಮುನ್ನಡೆದಿದೆ. ಸಿದ್ದರಾಮಯ್ಯ ಕರ್ನಾಟಕಕ್ಕಾಗಿ ಏನು ಮಾಡಿದ್ದಾರೆ ಎಂದು ಹೇಳಲು ಅವರಲ್ಲಿ ವಿಷಯವೇ ಇಲ್ಲ ಎಂದು ಟೀಕಿಸಿದರು. ಶಿವಕುಮಾರ್ ಅವರದೂ ಇದೇ ಸ್ಥಿತಿ ಎಂದರು. ವಂದೇ ಭಾರತ್ ರೈಲು ಭಾರತದ ವಿಕಾಸಕ್ಕೆ ಪೂರಕ ಎಂದು ಅವರು ತಿಳಿಸಿದರು.
ಕೆಂಪೇಗೌಡ ವಿಮಾನನಿಲ್ದಾಣ ಅಭಿವೃದ್ಧಿಗೆ ಗರಿಷ್ಠ ಮೊತ್ತ ಹಣವನ್ನು ಹೂಡಲಾಗಿದೆ. ನವ ಮಂಗಳೂರು ಬಂದರು ಅಭಿವೃದ್ಧಿಯು ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು.
370ನೇ ವಿಧಿ ರದ್ದು, ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜಾರೋಹಣ, ತುಷ್ಟೀಕರಣ ಇಲ್ಲದೆ ಎಲ್ಲರಿಗೂ ನ್ಯಾಯ ದೊರಕಿಸಿ ಕೊಡುವ ಕಡೆ ಬಿಜೆಪಿ ಮುನ್ನಡೆದಿದೆ. ಶಾಬಾನೊ ಕೇಸಿನ ವಿರೋಧ ಮಾಡಿದ ಬಿಜೆಪಿ ಅಯೋಧ್ಯೆಯಲ್ಲಿ ಮಂದಿರಕ್ಕಾಗಿ ಶಿಲಾನ್ಯಾಸ ನೆರವೇರಿಸಿದೆ ಎಂದು ವಿವರಿಸಿದರು.
ನಮ್ಮಲ್ಲಿ ಪಕ್ಷ ಎಂದು ಒಂದು ಕುಟುಂಬ. ಇತರ ಪಕ್ಷಗಳಲ್ಲಿ ಒಂದು ಕುಟುಂಬವೇ ಪಕ್ಷ ಎಂಬ ಸ್ಥಿತಿ ಇದೆ. ಭಾರತ ಜಿ20 ಅಧ್ಯಕ್ಷತೆ ವಹಿಸಿದೆ. ಇದು ಹೆಮ್ಮೆಯ ವಿಚಾರ ಎಂದು ತಿಳಿಸಿದರು. 2014ರಲ್ಲಿ ಮೋದಿಜಿ ಮತ್ತು ಅಮಿತ್ ಶಾ ಅವರು ಜಿಲ್ಲಾ ಸ್ವಂತ ಕಾರ್ಯಾಲಯದ ವಿಚಾರವನ್ನು ಮಂಡಿಸಿದ್ದರು. ಬಿಜೆಪಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಾಲಯ ಹೊಂದುವತ್ತ ಮುನ್ನಡೆದಿದೆ ಎಂದು ತಿಳಿಸಿದರು.
10 ಕಾರ್ಯಾಲಯಗಳ ಉದ್ಘಾಟನೆ, 3 ಕಾರ್ಯಾಲಯಕ್ಕೆ ಶಿಲಾನ್ಯಾಸವು ಸೌಭಾಗ್ಯದ ವಿಚಾರ ಎಂದು ಮೆಚ್ಚುಗೆ ಸೂಚಿಸಿದ ಅವರು, ಯಡಿಯೂರಪ್ಪ ಅವರಂಥ ನಾಯಕರು, ಕಾರ್ಯಕರ್ತರ ಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.
ಅಂಜನಿಪುತ್ರ ಹನುಮಾನ್‍ಗೆ ನಮನಗಳು. ಇದು ಪುಣ್ಯಭೂಮಿ. ನಮನಗಳು ಎಂದು ತಿಳಿಸಿದರು. ಸಾಂಸ್ಕøತಿಕ ದೃಷ್ಟಿಯಿಂದ ವಿಭಿನ್ನ ಭೂಮಿ ಇದು ಎಂದು ವಿವರಿಸಿದರು. ರಾಜ್ಯದ ಇತರೆ ಒಂಭತ್ತು ಜಿಲ್ಲೆಗಳ ಜಿಲ್ಲಾ ಕಾರ್ಯಾಲಯ ಭವನದ ಉದ್ಘಾಟನೆಯನ್ನು ವಚ್ರ್ಯುವಲ್ ಮಾಧ್ಯಮದ ಮೂಲಕ ಜೆ.ಪಿ.ನಡ್ಡಾ ಅವರು ನೆರವೇರಿಸಿದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಎಸ್. ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.