ಶ್ರೀರಾಮುಲುಗೆ ಸಾರಿಗೆ ಇಲಾಖೆ ಜೊತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ ಹಾಸ್ಯಾಸ್ಪದ – ಯುವ ಮುಖಂಡ ಅಂಜು ಕುಮಾರ್
ದಾವಣಗೆರೆ: ಶ್ರೀರಾಮುಲು ಅವರಿಗೆ ಈ ಹಿಂದೆ ನೀಡಿದ್ದ ಸಮಾಜ ಕಲ್ಯಾಣದ ಖಾತೆ ಜತೆಗೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಖಾತೆ ನೀಡುವಂತೆ ನಾಯಕ ಸಮಾಜ ಒತ್ತಾಯಿಸಿದೆ.
ಈ ಹಿಂದೆ ನೀಡಿದ್ದ ಸಮಾಜ ಕಲ್ಯಾಣ ಖಾತೆಯನ್ನು ತೆಗೆದು ಸಾರಿಗೆ ಖಾತೆಯ ಜೊತೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನೀಡಿರುವುದು ಹಾಸ್ಯಾಸ್ಪದ ಹಾಗೂ ದೂರದೃಷ್ಟಿ ರಹಿತ ನಿರ್ಧಾರವಾಗಿದೆ ಎಂದು ಯುವ ಮುಖಂಡ ಅಂಜು ಕುಮಾರ್ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಮಾಜ ಕಲ್ಯಾಣದ ಖಾತೆ ಜೊತೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನೀಡಿದರೆ ಖಾತೆ ನಿಭಾಯಿಸಲು ಹಾಗೂ ಪರಿಶಿಷ್ಟರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಆದರೆ ಈಗ ಸಾರಿಗೆ ಇಲಾಖೆ ಜತೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ ನೀಡಿರುವುದು ಕನ್ನಡದ ಪ್ರಸಿದ್ಧ ನಾಣ್ಣುಡಿಯಂತೆ ಇಮಾಂಸಾಬ್‌ಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎನ್ನುವಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರವು ನೂತನ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ನಮ್ಮ ನಾಯಕ ಸಮುದಾಯಕ್ಕೆ ಕೊಟ್ಟ ಮಾತಿನಂತೆ ಮೀಸಲಾತಿ ಹಾಗೂ ಉಪಮುಖ್ಯಮಂತ್ರಿ ಸ್ಥಾನ ನೀಡದೇ ಕೇವಲ ಒಂದು ಸಚಿವ ಸ್ಥಾನ ನೀಡಿದ್ದು, ಇದು ನಮ್ಮ ಸಮುದಾಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಅಲ್ಲದೇ, ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಸಚಿವ ಶ್ರೀರಾಮುಲು ಅವರಿಗೆ ಒಂದಕ್ಕೊಂದು ಸಂಬಂಧವಿಲ್ಲದ ಖಾತೆಗಳನ್ನು ನೀಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಈ ಬಗ್ಗೆ ಆಲೋಚಿಸಿ, ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಜೊತೆಗೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯನ್ನು ನೀಡಲಿ ಎಂದು ಅವರು ಒತ್ತಾಯಿಸಿದ್ದಾರೆ.