ತ್ಯಾಜ್ಯ ಸಂಗ್ರಹಣಾ ಕೇಂದ್ರ ನಿರ್ಮಾಣದಲ್ಲಿ ಅವ್ಯವಹಾರ ತನಿಖೆಗೆ ಸಿದ್ದೇಶ್ವರ ಸೂಚನೆ

ತ್ಯಾಜ್ಯ ಸಂಗ್ರಹಣಾ ಕೇಂದ್ರ ನಿರ್ಮಾಣದಲ್ಲಿ ಅವ್ಯವಹಾರ ತನಿಖೆಗೆ ಸಿದ್ದೇಶ್ವರ ಸೂಚನೆ

ದಾವಣಗೆರೆ : ಮಲೇಬೆನ್ನೂರು ತ್ಯಾಜ್ಯ ಸಂಗ್ರಹಣಾ ಕೇಂದ್ರ ನಿರ್ಮಾಣದಲ್ಲಿ ಅವ್ಯವಹಾರದ ಬಗ್ಗೆ ಬುಧವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಯಿತು.
ಗಂಭೀರ ಚರ್ಚೆಯ ನಂತರ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ಅವ್ಯವಹಾರ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯ್ತಿ ಸಿಇಒ ಅವರಿಗೆ ಸೂಚಿಸಿದರು.
ದಿಶಾ ಸಮಿತಿ ಸದಸ್ಯ ರಂಗನಾಥ್, ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಎಸ್ಟಿಮೇಷನ್ ಪ್ಲಾನ್‌ಗೂ ಪ್ರಸ್ತುತ ನಿರ್ಮಾಣಗೊಂಡಿರುವ ಘಟಕಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಆರೋಪಿಸಿದರು.
ಮಲೇಬೆನ್ನೂರು ಪುರಸಭೆಯ ಸಂತೆ ಮೈದಾನದಲ್ಲಿ ಖಾಲಿ ಇರುವ ಜಾಗದಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ನಿರ್ಮಾಣದ ಅಂದಾಜು ಪಟ್ಟಿಯನ್ನು ತೋರಿಸುತ್ತಾ, ಹೆಚ್ಚು ಗುಣಮಟ್ಟದ ವಸ್ತುಗಳನ್ನು ತೋರಿಸಿ ಅಂದಾಜು ಮೊತ್ತ ಹೆಚ್ಚು ತೋರಿಸಿ, ನಂತರ ಕಡಿಮೆ ಗುಣಮಟ್ಟದ ವಸ್ತುಗಳಿಂದ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಮತ್ತೋರ್ವ ಸದಸ್ಯ ಗಂಗಾಧರ್ ಜಿ.ವಿ. ದನಿ ಗೂಡಿಸಿ, ಅವ್ಯವಹಾರದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ `ಟ್ರಾನ್ಸ್‌ಫರ್ ಮಾಡಿಸುವುದಾದರೆ ಮಾಡಿಸಿ’ ಎಂದು ಹೇಳುತ್ತಾರೆ ಎಂದಾಗ ಅಧಿಕಾರಿಗಳ ಮೇಲೆ ಸಿದ್ದೇಶ್ವರ ಗರಂ ಆದರು.
ಸರ್ಕಾರಿ ಸಂಬಳ ಪಡೆದು ನ್ಯಾಯಯುತವಾಗಿ ಕೆಲಸ ಮಾಡಬೇಕು ಎಂದು ಸಿದ್ದೇಶ್ವರ್ ಹೇಳಿದರು. ಶಾಸಕ ಪ್ರೊ.ಎನ್. ಲಿಂಗಣ್ಣ, ವರ್ಗಾವಣೆ ಆಗುವ ಇಚ್ಛೆ ಇದ್ದರೆ ಆಗಿಬಿಡಿ ಎಂದರು. ನೀವು ಮಾಡುವ ಕೆಲಸಗಳಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಅಧಿಕಾರಿಗಳಿಗೆ ಸಿದ್ದೇಶ್ವರ್ ತರಾಟೆಗೆ ತೆಗೆದುಕೊಂಡರು.
ಪರಿಶೀಲನೆಗೆ ಹೋದಾಗ ಅಧಿಕಾರಿ ಮೊಬೈಲ್ ಸ್ವಿಚ್‌ ಆಫ್ : ಪರಿಶೀಲನೆಗೆ ದಿನ ಗೊತ್ತು ಪಡಿಸಿ, ಆ ದಿನ ನಾವು ಹೋದಾಗ ಅಧಿಕಾರಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ದಿಶಾ ಸಮಿತಿ ಸದಸ್ಯ ಜಿ.ವಿ. ಗಂಗಾಧರ್ ಆರೋಪಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶೇ.98.16 ರಷ್ಟು ಸಾಧನೆ ಮಾಡಿರುವುದಾಗಿ ಅಧಿಕಾರಿಗಳು ಹೇಳಿದಾಗ, ಜಗಳೂರು ಹಾಗೂ ದಾವಣಗೆರೆ ತಾಲ್ಲೂಕಿನಲ್ಲಿ ಕಡಿಮೆ ಸಾಧನೆಯಾಗಿರುವ ಕುರಿತು ಸಂಸದರು ಕಾರಣ ಕೇಳಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿ.ಪಂ. ಸಿಇಒ ಡಾ.ಎ. ಚನ್ನಪ್ಪ, ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್ ಸೇರಿದಂತೆ ದಿಶಾ ಸಮಿತಿ ಸದಸ್ಯರು ಸಭೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!