ಜೀರಾ ಸೋಡಾ ಬಾಟಲ್ ನಲ್ಲಿ ಸೈನೆಡ್ ಬೆರೆಸಿ ಕೊಲೆ ಮಾಡಿದ್ದ ಭೂಪ.!? ಆರೋಪಿಯನ್ನ ಬಂಧಿಸಿದ ದಾವಣಗೆರೆ ಪೋಲೀಸ್
ದಾವಣಗೆರೆ : ಒಡವೆ ಮಾಡಿಕೊಡಲು ನೀಡಿದ್ದ 110 ಗ್ರಾಂ. ಬಂಗಾರವನ್ನು ವಾಪಸ್ ಕೇಳಿದ್ದಕ್ಕೆ ಸೈನೆಡ್ ಬೆರೆಸಿ ಕೊಲೆ ಸಂಚು ರೂಪಿಸಿದ್ನಾ ಈ ಭೂಪ? ಹೌದು ಈ ರೀತಿಯ ಪ್ರಕರಣವೊಂದು ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧನದಲ್ಲಿರಿಸಲಾಗಿದೆ.
ಜನವರಿ 22ರಂದು ವಿನೋಬನಗರದ ದರ್ಶನ್ ರಾಯ್ಕರ್ ಎಂಬ ವ್ಯಕ್ತಿಯೊಬ್ಬ ತನಗೆ ಪರಿಚಯಸ್ಥನಾಗಿದ್ದ ಮಂಜು @ಪಿಂಟು ಎಂಬ ವ್ಯಕ್ತಿಗೆ 110 ಗ್ರಾಂ ಬಂಗಾರವನ್ನು ಕೊಟ್ಟು ಒಡವೆಗಳನ್ನು ಮಾಡಿಕೊಡುವಂತೆ ಹೇಳಿದ್ದಾನೆ. ಅದರಂತೆ ಮಂಜು @ಪಿಂಟು ಒಡವೆ ಮಾಡಿಕೊಡುವುದಾಗಿ ಹೇಳಿ ಒಡವೆ ಪಡೆದುಕೊಂಡು ಒಡವೆ ಮಾಡಿಕೊಡದೆ ಸತಾಯಿಸಿದ್ದಾನೆ. ಇದರಿಂದ ಬೇಸತ್ತು ದರ್ಶನ್ ರಾಯ್ಕರ್ ಮತ್ತು ಆತನ ತಮ್ಮ ಅರ್ಜುನ್ ರಾಯ್ಕರ್ ಇಬ್ಬರು ಮಂಜುಗೆ ಬಂಗಾರ ಕೇಳಿದ್ದಾರೆ.
ಈ ವೇಳೆ ಮಂಜು ಸಿ. ಜಿ ಆಸ್ಪತ್ರೆಗೆ ಹೋಗಿ ಬಂದು ಕೊಡುವೆ ಎಂದು ಹೇಳಿದ್ದು, ಈತನೊಂದಿಗೆ ಅರ್ಜುನ್ ರಾಯ್ಕರ್ ಹೋಗಿದ್ದಾನೆ. ಇದಾಗಿ ಸ್ವಲ್ಪ ಸಮಯದಲ್ಲೇ ಮನೆ ಹತ್ತಿರ ಬಂದ ಮಂಜು ಅರ್ಜುನ್ ರಾಯ್ಕರ್ ಗೆ ಜೀರಾ ಸೋಡಾ ಕೊಟ್ಟು ಇದನ್ನು ಕುಡಿಯುತ್ತಿರು ಮನೆಗೆ ಹೋಗಿ ಬರುವೆನೆಂದು ಹೇಳಿ ಹೋಗಿದ್ದಾನೆ. ಇಲ್ಲಿ ಜೀರಾ ಸೋಡಾ ಕುಡಿದ ಅರ್ಜುನ್ ರಾಯ್ಕರ್ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅರ್ಜುನ್ ರಾಯ್ಕರ್ ಮೃತಪಟ್ಟಿದ್ದಾರೆ.
ಈ ಸಾವಿನ ಕುರಿತು ಅನುಮಾನ ಇದೆ ಎಂದು ದೂರು ಕೊಟ್ಟ ಮೇರೆಗೆ ಬಡಾವಣೆ ಠಾಣೆ ಪೊಲೀಸರು ತನಿಖೆ ಆರಂಭಿಸಿದಾಗ ಮೃತ ವ್ಯಕ್ತಿಯ ದೇಹದಲ್ಲಿ ಮತ್ತು ಜೀರಾ ಸೋಡಾ ಬಾಟಲಿನಲ್ಲಿ ಸೈನೆಡ್ ಎಂಬ ವಿಷಯದ ಅಂಶ ಪತ್ತೆಯಾಗಿದೆ. ಈ ಕುರಿತು ತನಿಖೆ ಮುಂದುವರೆದಿದೆ.
ಪ್ರಕರಣದ ಪತ್ತೆಗಾಗಿ ಆರ್. ಬಿ. ಬಸರಗಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ನರಸಿಂಹ ತಾಮ್ರಧ್ವಜ, ಪೊಲೀಸ್ ಉಪಾಧೀಕ್ಷಕರು, ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ಹರೀಶ್, ಅಂಜಿನಪ್ಪ ಪೂಜಾರ್, ಹರೀಶ್ ಕೆ. ಬಿ. ಸಿದ್ದೇಶ್, ಸೈಯದ್ ಅಲಿ, ಹನುಮಂತಪ್ಪ, ಬಸವರಾಜ್ ಜಂಬೂರ್, ರಾಮಾಂಜನೇಯ ಕೊಂಡಿ ಅವರನ್ನೊಳಗೊಂಡ ತಂಡವು ಫೆ.23ರಂದು ಆರೋಪಿ ಮಂಜುನಾಥ್ ಚಿತ್ರಗಾರ @ ಪಿಂಟು ಈತನನ್ನು ಪತ್ತೆ ಮಾಡಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಸದರಿ ಕೊಲೆ ಪ್ರಕರಣ ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರಾದ ಸಿ. ಬಿ. ರಿಷ್ಯಂತ್ ಶ್ಲಾಘಿಸಿದ್ದಾರೆ.