ಜ.16 ರಿಂದ ಏಕಂಕ ನಾಟಕ ಸ್ಪರ್ಧೆ: ಯಶವಂತ ಸರದೇಶಪಾಂಡೆ
ದಾವಣಗೆರೆ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ವೃತ್ತಿ ರಂಗಭೂಮಿ ರಂಗಾಯಣದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಜ.16 ರಿಂದ 25 ರವರೆಗೆ ಕನ್ನಡ ಏಕಾಂಕ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಯಶವಂತ ಸರದೇಶಪಾಂಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಂಭತ್ತು ದಿನಗಳ ಕಾಲ ದಾವಣಗೆರೆಯ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ ನಾಟಕ ಸ್ಪರ್ಧೆ ನಡೆಯಲಿದ್ದು, ಶಾಲಾ ಮತ್ತು ಕಾಲೇಜು ವಿಭಾಗದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದೇಶಭಕ್ತಿಯ ಕಥಾವಸ್ತು ಹೊಂದಿದ ಏಕಾಂಕಗಳಿಗೆ ಆದ್ಯತೆ ಇರುತ್ತದೆ. ಪ್ರತಿ ತಂಡಕ್ಕೆ 1,500 ರೂ. ಪ್ರವೇಶ ಶುಲ್ಕ ನಿಗಧಿ ಪಡಿಸಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ರಂಗಭೂಮಿ ಬಗ್ಗೆ ಆಸಕ್ತಿ ಹೆಚ್ಚಿಸಲು ಈ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ರಂಗವೇದಿಕೆ, ಧ್ವನಿ-ಬೆಳಕಿನ ಕನಿಷ್ಟ ವ್ಯವಸ್ಥೆ
ಮಾಡಲಾಗುತ್ತದೆ. ಏಕಾಂಕಗಳಿಗೆ ಬೇಕಾಗುವ ಪ್ರಸಾದನ, ವೇಷಭೂಷಣ, ಸಂಗಸಜ್ಜಿಕೆ, ಸಂಗೀತದ ವ್ಯವಸ್ಥೆಯನ್ನು ಆಯಾ ತಂಡಗಳು
ಮಾಡಿಕೊಳ್ಳಬೇಕು ಎಂದರು.
ಉತ್ತಮವಾದ ಮೂರು ನಾಟಕಗಳನ್ನು ಆಯ್ಕೆ ಮಾಡಿ, ಪ್ರಥಮ, ದ್ವಿತಿಯ ಮತ್ತು ತೃತೀಯ ಬಹುಮಾನ ನೀಡಲಾಗುವುದು. ನಿರ್ದೇಶಕ, ಬರಹಗಾರ, ಸಂಗೀತಜ್ಞ ಇತ್ಯಾದಿ ಹತ್ತು ವೈಯಕ್ತಿಕ ಬಹುಮಾನ ಇರುತ್ತದೆ. ಪ್ರಥಮ 10,000 ರೂ., ದ್ವಿತೀಯ 7,500 ರೂ. ಹಾಗೂ ತೃತಿಯ
5,000 ರೂ. ನಗದು ಬಹುಮಾನ ನೀಡಲಾಗುವುದು. ವೈಯಕ್ತಿಕ
ಬಹುಮಾನವಾಗಿ ತಲಾ ಒಂದು ಸಾವಿರ ರು., ಕೊಡಲಾಗುವುದು. ವಿವರಗಳಿಗೆ
ದೂ:08192-200635 ಸಂಪರ್ಕಿಸಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.