ಸಹೋದರಿಯರ ಸಾವು: ಹತ್ಯೆ ಶಂಕೆ ವ್ಯಕ್ತಪಡಿಸಿದ ಕುಟುಂಬ.! ಕೊಲೆಗಾರ ಯಾರು ಗೊತ್ತಾ.?

ದಾವಣಗೆರೆ: ನಗರದ ಆಂಜನೇಯ ಮಿಲ್ ಬಡಾವಣೆಯಲ್ಲಿ ಇಬ್ಬರು ಸಹೋದರಿಯರು ಹತ್ಯೆಗೀಡಾಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದವರಾದ ಗೌರಮ್ಮ (34), ರಾಧಮ್ಮ (32) ಮೃತ ಸಹೋದರಿಯರಾಗಿದ್ದು, ಈ ಇಬ್ಬರು ಆಂಜನೇಯ ಕಾಟನ್ ಮಿಲ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಗೌರಮ್ಮನ ಪತಿ ಮಂಜುನಾಥ್ ಪರಸ್ಥಳದಲ್ಲಿ ತರಗಾರನಾಗಿ ಕೆಲಸ ಮಾಡುತ್ತಿದ್ದ ಕಾರಣ ಕಳೆದ ಹತ್ತು ವರ್ಷಗಳಿಂದ ಗೌರಮ್ಮ, ರಾಧಮ್ಮ ವಾಸವಿದ್ದರು.
ಕಳೆದ ಐದಾರು ದಿನಗಳಿಂದ ಮನೆಯ ಬಾಗಿಲು ತೆಗೆದಿರಲಿಲ್ಲ. ಕೆಲಸಕ್ಕೂ ಹೋಗಿರಲಿಲ್ಲ. ಸ್ನೇಹಿತರು ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಇದರಿಂದ ಸಂಶಯಗೊಂಡ ಸ್ಥಳೀಯರು ಮನೆಯ ಬಾಗಿಲನ್ನು ಒಡೆದು ತೆಗೆದಾಗ ಇಬ್ಬರು ಸಹೋದರಿಯರು ಸಾವುಕಂಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ದಾಖಲಿಸಿದ್ದು, ಗೌರಮ್ಮನ ಪತಿ ಮಂಜುನಾಥನ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಗೌರಮ್ಮನಿಗೂ ಆಕೆಯ ಪತಿ ಮಂಜುನಾಥನ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು. ಗೌರಮ್ಮನ ಪತಿ ಮಂಜುನಾಥ ಕಳೆದ ಬುಧವಾರದಿಂದ ಶುಕ್ರವಾರದವರೆಗೆ ಇವರೊಟ್ಟಿಗೆ ಇದ್ದ.
ನಂತರದಲ್ಲಿ ಈ ಇಬ್ಬರೂ ಸಹೋದರಿಯರೂ ಮನೆಯಿಂದ ಹೊರಗೆ ಬಂದಿಲ್ಲ. ಕರೆಯನ್ನೂ ಸ್ವೀಕರಿಸಿಲ್ಲ. ಮೇಲ್ನೋಟಕ್ಕೆ ಮಂಜುನಾಥ್ ಹತ್ಯೆ ಮಾಡಿರಬಹುದೆಂದು ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.