ನಿವೇಶನ ಬೇಡಿಕೆ ಅರ್ಜಿ ಪಡೆಯಲು ನೂಕುನುಗ್ಗಲು: ದೂಡಾ ಪ್ರಾಧಿಕಾರಕ್ಕೆ ಸಲಹೆ ನೀಡಿದ ಯುವಕನ ವಿಡಿಯೋ ವೈರಲ್

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳ ಬೇಡಿಕೆ ಸಮೀಕ್ಷೆಗೆ ಅರ್ಜಿ ಆಹ್ವಾನಿಸಿದ್ದು, ಜನರು ಅರ್ಜಿ ಹಾಕಲು ಯಾವುದೇ ಕೋವಿಡ್ ನಿಯಮ ಪಾಲಿಸದೇ ನೂಕುನುಗ್ಗಲಿನಿಂದ ದಾಂಗುಡಿ ಇಡುತ್ತಿದ್ದಾರೆ.
ಈ ಬಗ್ಗೆ ಯುವಕನೋರ್ವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ಕರೋನಾ ಸಂದರ್ಭದಲ್ಲಿ ಜನರನ್ನು ಒಟ್ಟುಗೂಡಿಸಿ ಅರ್ಜಿಗೆ ಆಹ್ವಾನಿಸಿರುವ ದರ್ದೇನಿತ್ತು? ಇದು ಹೀಗೆ ಮುಂದುವರೆದರೆ ಮೂರನೇ ಅಲೆ ಬರುವುದಿಲ್ಲವೇ? ದೂಡಾ ಅಧಿಕಾರಿ ವರ್ಗದವರಿಗೆ ಈ ಬಗ್ಗೆ ಸಣ್ಣ ಪ್ರಜ್ಞೆಯೂ ಇಲ್ಲವೇ ಎಂದು ಪ್ರಶ್ನಿಸಿದ್ದಾನೆ.
ವೆಂಕಟೇಶ್ ಎಂಬ ಯುವಕ ವಿಡೀಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ದೂಡಾ ಪ್ರಾಧಿಕಾರಕ್ಕೆ ಸಲಹೆ ನೀಡಿದ್ದು, ಅರ್ಜಿ ಆಹ್ವಾನಿಸಬೇಕೆಂದರೆ ಆನ್ ಲೈನ್ ಮೂಲಕವೇ ಅರ್ಜಿ ಹಾಕಲು ತಿಳಿಸಬೇಕಿತ್ತು. ಆಗ ಇಂತಹ ನೂಕು ನುಗ್ಗಲುಂಟಾಗುತ್ತಿರಲಿಲ್ಲ ಎಂದಿದ್ದಾನೆ.
ನಮ್ಮ ಜನರಿಗೆ ಪ್ರಶ್ನೆ ಮಾಡುವ ಸಾಮಾನ್ಯ ತಿಳುವಳಿಕೆಯೂ ಇಲ್ಲವೇ? ಆನ್ ಲೈನ್ ನಲ್ಲಿಯೇ ಅರ್ಜಿ ಹಾಕಲು ದೂಡಾಕ್ಕೆ ಪ್ರಶ್ನಿಸಬೇಕಿತ್ತು. ಇದು ಕರೋನಾ ಸಂದರ್ಭ ಆಗಿರುವುದರಿಂದ ಜೀವ ಮುಖ್ಯವಾಗಿದ್ದು, ಜನರು ಈ ಬಗ್ಗೆ ಸ್ವಲ್ಪವಾದರೂ ಎಚ್ಚೆತ್ತುಕೊಳ್ಳಬೇಕಿದೆ ಎಂದಿದ್ದಾನೆ.