ಸ್ಮಶಾನದ ಜಾಗ ಕಬಳಿಸಲು ಮುಂದಾದ ಎಪಿಎಂಸಿ ಅಧಿಕಾರಿಗಳು

IMG-20210716-WA0012

 

ದಾವಣಗೆರೆ. ಜು.೧೬;  ಅಭಿವೃದ್ಧಿ ಹೆಸರಿನಲ್ಲಿ ಸ್ಮಶಾನ ಭೂಮಿಯನ್ನು ಕಬಳಿಸಲು
ಎ ಪಿ ಎಂ ಸಿ ಅಧಿಕಾರಿಗಳು ಯತ್ನಿಸುತ್ತಿದ್ದಾರೆ.ಜಿಲ್ಲಾಡಳಿತ ಈ ಕೂಡಲೇ ಪರಿಶೀಲನೆ ನಡೆಸಿ ಸ್ಮಶಾನ ಜಾಗ ಉಳಿಸಿಕೊಡಬೇಕೆಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ದಾವಣಗೆರೆ ನಗರದ ಎಪಿಎಂಸಿ ಹಿಂಭಾಗದ ಹಳೇ ಚಿಕನಹಳ್ಳಿ ಸರ್ವೆ ನಂ . ೩೩ ರ ಸ್ಮಶಾನದ ಭೂಮಿಯನ್ನು ದಾವಣಗೆರೆ ನಗರದ ಹಳೆ ಚಿಕ್ಕನಹಳ್ಳಿ , ಕಬ್ಬೂರು ಬಸವ ನಗರ , ಭಾರತ್ ಕಾಲೋನಿ , ಹೆಚ್ ಕೆ ಆರ್ ನಗರ , ಅಣ್ಣಾ ನಗರ , ಶೇಖರಪ್ಪ ನಗರ ಎ ಮತ್ತು ಬಿ ಬ್ಲಾಕ್ ಮುಂತಾದ ಬಡಾವಣೆಗಳ ಜನರು ಅನಾದಿ ಕಾಲದಿಂದ ಬಳಕೆ ಮಾಡುತ್ತಾ ಬಂದಿದ್ದಾರೆ , ಅಲ್ಲಿನ ಸಮಾಧಿ ಸ್ಥಳದಲ್ಲಿ ಪ್ರತಿ ವರ್ಷ ತಮ್ಮ ಪೂರ್ವಿಕರ ಆರಾಧನೆಯನ್ನೂ ಮಾಡುತ್ತಾ ಬರುತ್ತಿದ್ದಾರೆ.

ಆದರೆ ಇತ್ತೀಚೆಗೆ ಎ ಪಿ ಎಂ ಸಿ ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ನೆಪದಲ್ಲಿ ಸ್ಮಶಾನವನ್ನು ಬೇರ್ಪಡಿಸಿದ್ದ ಹಳೆಯ ಕಾಂಪೌಂಡ್ ಗೋಡೆಯನ್ನು ಒಡೆದು ಹಾಕಿ , ಅನೇಕ ಸಮಾಧಿಗಳನ್ನು ಜೆಸಿಬಿ ಯಂತ್ರ ಬಳಸಿ ಧ್ವಂಸ ಮಾಡಿದ್ದಾರೆ.ಈ ಭಾಗದಲ್ಲಿ ವರ್ತಕರಿಗೆ ಗೋಡೌನ್ ಗಳ ನಿರ್ಮಿಸಲು ಸಿದ್ದತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಬಡಾವಣೆಗಳ ಜನರು ಬಳಕೆ ಮಾಡಲು ಹತ್ತಿರದಲ್ಲಿ ಬೇರೆ ಯಾವುದೇ ಸ್ಮಶಾನ ಇರುವುದಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಈ ಸ್ಮಶಾನ ಜಾಗವನ್ನು ಸಾರ್ವಜನಿಕರಿಗೆ ಉಳಿಸಿ ಕೊಡುವಂತೆ ಮನವಿ ಮಾಡಿದ್ದೆವು ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ ಆದರೆ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿರುವುದಿಲ್ಲ . ಈ ಬಗ್ಗೆ  ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿತ್ತು ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು , ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ . ಅಲ್ಲದೇ ಈ ಬಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವವರೆಗೆ ಸ್ಮಶಾನದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ .

ಆದರೂ ಕೂಡ ಎ ಪಿ ಎಂ ಸಿ ಅಧಿಕಾರಿಗಳು ಜೆ ಸಿ ಬಿ ಮೂಲಕ ಕಾಮಗಾರಿ ನಡೆಸುತ್ತಿದ್ದಾರೆ . ಇದು ಅತ್ಯಂತ ಖಂಡನೀಯ , ಈ ಬಗ್ಗೆ ಜಿಲ್ಲಾಧಿಕಾರಿಯವರು ಒಂದು ವಾರದೊಳಗೆ ತೀರ್ಮಾನ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಲಾಗುವುದು. ಹಾಗೆಯೇ ಎಪಿಎಂಸಿ ಕಚೇರಿ ಮುಂದೆಯೂ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿ.ಹನುಮಂತಪ್ಪ ಹಳೇಚಿಕನಹಳ್ಳಿ, ಸಂತೋಷ್‌ಎಂ . ನೋಟದವರ, ಮರಿಯಪ್ಪ ಹಳೇಚಿಕನಹಳ್ಳಿ, ಅಣ್ಣಾಮಲೈ ಇದ್ದರು.

Leave a Reply

Your email address will not be published. Required fields are marked *

error: Content is protected !!