ಸಮಾಜದಲ್ಲಿನ ಪಿಡುಗು ನಿವಾರಿಸಲು ಸಾಮಾಜಿಕ ನ್ಯಾಯದಿನ ಆಚರಣೆ- ಪ್ರವೀಣ್ ನಾಯಕ್
ದಾವಣಗೆರೆ: ಸಮಾಜದಲ್ಲಿನ ಸಾಕಷ್ಟು ಪಿಡಗುಗಳನ್ನು ಬಗೆಹರಿಸಲು ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಅವರು ಹೇಳಿದರು. ಮಂಗಳವಾರ ನಗರದ ಎ.ವಿ ಕಮಲಮ್ಮ ಮಹಿಳಾ ಕಾಲೇಜಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಾವಣಗೆರೆ ಹಾಗೂ ಜಿಲ್ಲಾ ವಕೀಲರ ಸಂಘ ದಾವಣಗೆರೆ ಇವರ ಸಹಯೋಗದೊಂದಿಗೆ ಆಯೋಜಿಸಿದ ವಿಶ್ವ ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ವರ್ಷದ ಧ್ಯೇಯವಾಕ್ಯ ‘ಔಪಚಾರಿಕ ಉದ್ಯೋಗದ ಮೂಲಕ ಸಾಮಾಜಿಕ ನ್ಯಾಯ ಸಾಧಿಸುವುದು’ ಎಂಬುದಾಗಿದೆ. ಬಡತನ ನಿರ್ಮೂಲನೆ, ಮೂಲಭೂತ ಹಕ್ಕುಗಳಿಂದ ವಂಚಿತರಾದ ವರ್ಗಗಳನ್ನು ರಕ್ಷಿಸುವುದು, ಲಿಂಗಭೇದವನ್ನು ತಡೆಗಟ್ಟುವುದು, ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸುವುದು, ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವುದು ಹೀಗೆ ಮೊದಲಾದ ಪಿಡುಗುಗಳನ್ನು ಹೋಗಲಾಡಿಸುವುದಕ್ಕೆ ಸಾಮಾಜಿಕ ನ್ಯಾಯ ದಿನದಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜ ನಮಗೇನು ಕೊಡುತ್ತದೆ ಎಂಬುದಕ್ಕಿಂತ, ನಾವು ಸಮಾಜಕ್ಕೆ ಏನು ಕೊಡುತ್ತೇವೆ ಎಂಬುದು ಮುಖ್ಯವಾಗಿದೆ, ಕಾನೂನು ಸೇವಾ ಪ್ರಾಧಿಕಾರದಿಂದ ಹಲವಾರು ಕಾರ್ಯಕ್ರಮಗಳು ಲಭ್ಯವಿದ್ದು ಲೋಕ ಅದಾಲತ್ ಕಾರ್ಯಕ್ರಮ, ಸರ್ಕಾರದ ಸವಲತ್ತುಗಳನ್ನು ಜನರಿಗೆ ನೀಡುವುದು, ರಾಜಿ ಸಂಧನಾಗಳು, ಮಹಿಳಾ ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಬಡವರ ಪರ ವಕೀಲರನ್ನು ಉಚಿತವಾಗಿ ನೇಮಿಸಿ ಕೊಡಲಾಗುತ್ತಿದ್ದು ಜನಸಾಮಾನ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜು ಡಿ.ಪಿ ಮಾತನಾಡಿ, ವಿಶ್ವ ಸಾಮಾಜಿಕ ನ್ಯಾಯ ದಿನವು ನಿರುದ್ಯೋಗ ನಿವಾರಣೆ ಮೂಲ ಉದ್ದೇಶ ಹೊಂದಿದೆ. ನಾವು ಯಾವುದೇ ಕೆಲಸ ಮಾಡಬೇಕು ಅಂದರೆ ಮಾನಸಿಕ ಸ್ಥಿತಿ ಸದೃಢವಾಗಿರಬೇಕು ಬದುಕು ಭದ್ರತೆ ಇದ್ದರೆ ಕೆಲಸಗಳು ಸಿಗುತ್ತದೆ, ಇದರಿಂದ ಸುಸ್ಥಿರ ಅಭಿವೃದ್ಧಿಯಾಗುತ್ತದೆ, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗುತ್ತದೆ ಎಂದು ಹೇಳಿದರು.
ಹಿರಿಯ ವಕೀಲ ಎಲ್.ಹೆಚ್ ಅರುಣ್ ಕುಮಾರ್ ವಿಶೇಷ ಉಪನ್ಯಾಸ ನೀಡಿ, ಅನ್ಯಾಯದ ವಿರುದ್ಧ ದನಿಯೆತ್ತುವುದಕ್ಕಾಗಿ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ. ಬಡತನ ಲಿಂಗತಾರತಮ್ಯ ಮೊದಲಾದ ಸಾಮಾಜಿಕ ಸಮಸ್ಯೆ, ವಿವಿಧ ಸಮಾಜಗಳನ್ನು ಒಂದುಗೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸುತ್ತಿದೆ. ಪ್ರಸ್ತುತ ದಿನಗಳಲ್ಲಿ ಪ್ರಪಂಚಾದ್ಯಂತ ಎಲ್ಲವೂ ಖಾಸಗೀಕರಣ ಆಗುತ್ತಿದ್ದು, ಉದ್ಯೋಗ ಭದ್ರತೆ ಸಿಗುತ್ತಿಲ್ಲ. ಖಾಸಗೀಕರಣವೇ ಸಾಮಾಜಿಕ ಅನ್ಯಾಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ವಿ.ಕೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಪಿ. ಕುಮಾರ್ ಮಾತನಾಡಿ, ನಾವು ಬಹಳಷ್ಟು ದಿನಾಚರಣೆಗಳನ್ನು ಆಚರಿಸುತ್ತೇವೆ ಅದರೆ ಅವುಗಳ ಮೂಲ ಉದ್ದೇಶಗಳನ್ನು ಎಲ್ಲರೂ ಮರೆಯುತ್ತೇವೆ. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಎಂಬ ಭಾವನೆ ನನ್ನದು. ಸಾಮಾಜಿಕ ನ್ಯಾಯವನ್ನು ಒದಗಿಸಲು ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ. ವಿಶ್ವ ಸಾಮಾಜಿಕ ನ್ಯಾಯದಿನದಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮಕಾರ್ಯಗಳನ್ನು ಮಾಡುವ ಧ್ಯೇಯವನ್ನು ಹೊಂದಬೇಕು ಎಂದರು.
ಕಾರ್ಯಕ್ರಮದ ಸಂಯೋಜಕರಾದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ನ್ಯಾಕ್ ಸಂಯೋಜನಾಧಿಕಾರಿ ಪ್ರೋ. ಜಿ.ಸಿ ನೀಲಾಂಬಿಕ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಣಧೀರ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರೊ. ಶಿವಕುಮಾರ್ ಸ್ವಾಗತಿಸಿದರು, ಸಹನಾ ಮತ್ತು ಅಂಜನ ಪ್ರಾರ್ಥಿಸಿದರು, ಪ್ರೋ. ಪಾಲಾಕ್ಷ ವಂದಿಸಿದರು, ವಿದ್ಯಾರ್ಥಿನಿ ಅಮೂಲ್ಯ ನಿರೂಪಿಸಿದರು.