ಸೋಲದೇ ಗೆದ್ದರೆ ಮಂದಹಾಸ.! ಸೋತು ಗೆದ್ದರೆ ಇತಿಹಾಸ.!

ದಾವಣಗೆರೆ: ಮನುಷ್ಯ ಜೀವನವು ಕಾಲ ಚಕ್ರವಿದ್ದಂತೆ. ಕಾಲಚಕ್ರ ಉರುಳಿದಂತೆ ಮೇಲಿದ್ದವರು ಕೆಳಗೆ , ಕೆಳಗಿರುವವರು ಮೇಲೆ ಹೋಗಲೇಬೇಕು. ಇಂದು ಸೋತವರು ನಾಳೆ ಗೆಲ್ಲುತ್ತಾರೆ, ಇಂದು ಗೆದ್ದವರು ನಾಳೆ ಸೋತು ಮತ್ತೆ ಗೆಲ್ಲುತ್ತಾರೆ. ಗೆಲುವು ನಿಶ್ಚಿತವಲ್ಲ ಸೋಲು ಶಾಶ್ವತವಲ್ಲ. ಗೆಲ್ಲಬೇಕೆಂಬ ಹಠ ಛಲ ನಿಮ್ಮಲ್ಲಿದ್ದರೆ ನಿಮ್ಮ ಗೆಲುವಿಗೆ ಯಾವುದೂ ಅಡ್ಡಿಯಾಗುವುದಿಲ್ಲ. ಅದಕ್ಕೆ ದೊಡ್ಡವರು ಹೇಳಿರುವುದು ಸೋಲದೇ ಗೆದ್ದರೆ ಮಂದಹಾಸ ಸೋತು ಗೆದ್ದರೆ ಇತಿಹಾಸ ಎಂದು. ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಏನೇನೋ ಸಾಧಿಸಬೇಕೆಂಬ ಕನಸು ಕಾಣುತ್ತಾರೆ..
ಆದರೆ ಸಾಧಿಸುವವರು ಕೆಲವರು ಮಾತ್ರ ಅಂತಹವರು ಛಲಬಿಡದೆ ಗೆದ್ದು ಇತಿಹಾಸ ಸೃಷ್ಟಿ ಮಾಡುತ್ತಾರೆ. ಇನ್ನೂ ಕೆಲವರು ಕಷ್ಟಗಳು ಎದುರಾದವೆಂದು ಸಾಧನೆಯ ಹಾದಿಯನ್ನು ಅರ್ಧಕ್ಕೆ ಮುಗಿಸಿ ಹೊರಡುತ್ತಾರೆ. ಇನ್ನೂ ಕೆಲವರಿಗೆ ಸಾಧಿಸಬೇಕೆಂದು ಹೋರಾಡುತ್ತಿದ್ದರೂ ಸಹ ಮನೆಯ ಪರಿಸ್ಥಿತಿ ಅವರ ಕೈಯನ್ನು ಕಟ್ಟಿಹಾಕಿರುತ್ತದೆ. ಆದರೆ ಸಾಧನೆ ಅಷ್ಟು ಸುಲಭವಾಗಿ ಸಿಗುವಂತಹದ್ದಲ್ಲ ಅದಕ್ಕೆ ಧೃಢ ಮನಸ್ಸು, ವಿಶ್ವಾಸ, ಹಠ ಎಲ್ಲದ್ದಕ್ಕಿಂತ ಹೆಚ್ಚಾಗಿ ಸೋತಾಗ ಮತ್ತೆ ಗೆದ್ದೇ ಗೆಲ್ಲುವೆನೆಂಬ ನಂಬಿಕೆಯಿರಬೇಕು..
ಪ್ರತಿಯೊಬ್ಬ ಸಾಧಕನಿಗೂ ಗೆಲುವು ಇಂದು ಸಿಗದಿರಬಹುದು ಹಾಗೆಯೇ ಮುಂದೇ ಸಿಗುವುದೇ ಇಲ್ಲ ಎಂದಲ್ಲ. ಅದು ಸಿಗುವುದು ಆತ್ಮವಿಶ್ವಾಸದಿಂದ ಮುನ್ನುಗಿದಾಗ ಮಾತ್ರ. ನಾವು ಅದೆಷ್ಟೋ ಸಾಧಕರನ್ನು ನೋಡಿ ನಾವೂ ಸಹ ಅವರಂತೆಯೇ ಆಗಬೇಕೆಂದು ಅಂದುಕೊಂಡಿರುತ್ತೇವೆ. ಆದರೆ ಆ ಸಾಧಕರು ಗೆದ್ದಾಗ ಅವರ ಗೆಲುವನ್ನು ಸ್ವೀಕರಿಸುವ ನಾವು ಅವರು ಸಾಧಿಸುವ ಮೊದಲು ಅನುಭವಿಸಿರಿವ ಕಷ್ಟಗಳ ಬಗ್ಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬ ಸಾಧಕನೂ ಸಹ ಸಾಧಿಸುವ ಮೊದಲು ಅದೆಷ್ಟೋ ಕಷ್ಟಗಳನ್ನು ಅನುಭವಿಸುರುತ್ತಾರೆ. ಹೀಗೆ ಜೀವನದಲ್ಲಿ ಸಾಧಿಸುವ ಛಲವಿರುವ ರು ಸಾಧಕನ ಗೆಲುವನ್ನು ನೋಡದೆ ಅದರ ಹಿಂದಿನ ಕಷ್ಟಗಳನ್ನು ಅರಿತು ಕೊಂಡಾಗ ಸಾಧನೆ ಮಾಡಲು ಸ್ಫೂರ್ತಿ ಸಿಕ್ಕಂತಾಗುತ್ತದೆ ಅಂತಹ ಸಾಧಕರ ಬಗ್ಗೆ ಕೆಲವು ಮಾಹಿತಿಗಳು ನಿಮಗಾಗಿ…….
ಜೀವನದಲ್ಲಿ ಏನಾದರೂ ಸಾಧಿಸಲೇಬೇಕೆಂದು ಮುಂಬೈಗೆ ಬಂದಿಳಿದ ಯುವಕ ತನ್ನ ಪ್ರಾರಂಭದ ದಿನಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಸಹ ಪರದಾಡಿ ಮಲಗಲು ಜಾಗವಿಲ್ಲದೇ ರಸ್ತೆಯ ಪಕ್ಕದ, ಬೀಚಿನ ಮುರುಕಲು ಬೆಂಚ್ ನ ಮೇಲೆ ಮಲಗುತ್ತಿದ್ದ. ಮುಂದೆ ಆತ ಭಾರತೀಯ ಚಿತ್ರರಂಗವನ್ನು ಆಳಿದ ಬಾದ್ ಶಾ ಆತ ಬೇರಾರೂ ಅಲ್ಲ ಇವತ್ತಿನ ಬಾಲಿವುಡ್ ನ ಬಾದ್ ಶಾ ಶಾರೂಖ್ ಖಾನ್. ಅಂದು ಕಷ್ಟ ಎಂದು ಓಡಿ ಹೋಗಿದ್ದರೆ ಇಂದು ಅವರು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ..
ಜೀವನದಲ್ಲಿ ಗೆಲ್ಲಬೇಕೆಂದರೆ ಓದು ಬಹಳ ಮುಖ್ಯ ಎಂದುಕೊಂಡಿರುವವರು ಬಹಳ ಜನ. ಹೌದು ಓದು ಬಹಳ ಮುಖ್ಯ ಆದರೆ ಓದದೇ ಇರುವವರು ಸಾಧಿಸಲು ಅನರ್ಹರು ಎಂದಲ್ಲ. ಇಲ್ಲೊಬ್ಬ ಹುಡುಗ ತನ್ನ 8 ನೇ ತರಗತಿಯ ಪರೀಕ್ಷೆಯಲ್ಲಿ ಸತತ ಎರಡು ಬಾರಿ ಫೇಲ್ ಆಗಿದ್ದನು. ಇವನೂ ಸಹ ಅಂದು ಸೋಲನ್ನು ಒಪ್ಪಿಕೊಂಡಿದ್ದರೆ ಈ ಹುಡುಗ ಕ್ರೆಕೆಟ್ ದೇವರಾಗುತ್ತಿರಲಿಲ್ಲ..
ಹೌದು ಈ ಹುಡುಗ ಬೇರಾರೂ ಅಲ್ಲ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸಚಿನ್ ತೆಂಡುಲ್ಕರ್.
ಇನ್ನು ಜೀವನದಲ್ಲಿ ಕಷ್ಟಕ್ಕೆ ಸಿಲುಕಿ ತನ್ನ ಕುಟುಂಬ ನಿರ್ವಹಣೆಯ ಹೊಣೆ ಹೊತ್ತು ಬಿಡುಗಾಸಿಗಾಗಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ತನ್ನ ಕಷ್ಟಗಳನ್ನು ಮೆಟ್ಟಿ ನಿಂತು ಇಂದು ಜಗತ್ತಿನ ಶ್ರೀಮಂತರಲ್ಲೊಬ್ಬರಾದ ಧೀರೂಭಾಯಿ ಅಂಬಾನಿ..
ಇನ್ನು ಮತ್ತೊಬ್ಬ ಹುಡುಗ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ದಾರಿ ಹುಡುಕುವಾಗ ಕೊನಗೆ ಆಲ್ ಇಂಡಿಯಾ ರೇಡಿಯೋನಲ್ಲಿ ಅವಕಾಶ ಕೇಳಿಕೊಂಡು ಹೋದಾಗ ಅವರ ಧ್ವನಿ ಗಡುಸು ಎಂದು ಅಲ್ಲಿಂದ ಹೊರ ಕಳುಹಿಸಲಾಯಿತು. ಅವಕಾಶ ವಂಚಿತನಾಗಿ ನಿರಾಶನಾಗಿ ಹೊರಬಂದ ಹುಡುಗ ಸುಮ್ಮನೇ ಕೂರದೇ ಕಷ್ಟ ಪಟ್ಟು ಭಾರತದಲ್ಲೆ ಹೆಸರಾಂತ ಚಲನಚಿತ್ರ ನಟನಾದ ಆತ ಬೇರಾರೂ ಅಲ್ಲ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್.. ಇಂದು ಆತನಿಗೆ ಕೋಟಿಗಟ್ಟಲೆ ಹಣ ನೀಡಲು ಕಂಪೆನಿಗಳು ಸರ್ಕಾರಗಳು ಮುಂದೆ ಬರುತ್ತಿವೆ .
ತಾನು ಹುಟ್ಟಿದಾಗಿನಿಂದಲೂ ಸಮಾಜದಲ್ಲಿರುವ ಜಾತಿ ವ್ಯವಸ್ಥೆಯ ವಿಷವ ಗುಹೆಯೊಳಗೆ ಸಿಲುಕಿ ಅವಮಾನಗೊಂಡು, ಶಾಲೆಗಳಲ್ಲಿ ತನಗೆ ಊರಲ್ಲೂ ಅವಕಾಶವಿಲ್ಲದೆ ಬೇರೆಯಾಗಿಯೇ ಜೀವನದುದ್ದಕ್ಕೂ ಅವಮಾನಗಳನ್ನು ಸಹಿಸಿಕೊಂಡು ಆ ಅವಮಾನಗಳೇ ಅವಕಾಶಗಳೆಂದು ಭಾವಿಸಿ ಪುಸ್ತಕಗಳೇ ಜೀವನವೆಂದು ನಂಬಿ ಸುದ್ದಿ ಈ ದೇಶಕ್ಕೆ ಬಹುದೊಡ್ಡ ಧರ್ಮಗ್ರಂಥವೆನಿಸಿದೆ ಸಂವಿಧಾನವನ್ನು ಬರೆದು ಕೊಟ್ಟ ಮಹಾ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ನಮ್ಮ ಕಣ್ಣೆದುರೇ ಜೀವಂತ ಉದಾಹರಣೆಯಾಗಿ ಇರುವುದನ್ನು ನಾವು ಸಾಧನೆಗೆ ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು
ತನ್ನ ಮೂವತ್ತನೇ ವರ್ಷದವರೆಗೂ ಬಸ್ ಕಂಡಕ್ಟರ್ ಆಗಿ ಸಾಧಿಸಬೇಕೆನ್ನುವ ಹಂಬಲವಿದ್ದರೂ ಅದನ್ನೆಲ್ಲ ಸಹಿಸಿಕೊಂಡು ಛಲಬಿಡದೇ ಬಂದ ಕಷ್ಟಗಳನ್ನು ಎದುರಿಸಿ ಇಂದು ಭಾರತದಲ್ಲೇ ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳುವ ತಮ್ಮ ಸ್ಟೈಲ್ ನಿಂದಲೇ ಜನರ ಮನಗೆದ್ದಿರುವ ನಮ್ಮ ಸೂಪರ್ ಸ್ಟಾರ್ ರಜನಿಕಾಂತ್ ರವರು. ಇವರೂ ಸಹ ಕಷ್ಟ ಎಂದು ಎದೆಗುಂದಿದ್ದರೆ ಇಂದು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ..
ಈ ಸಾಧಕರೆಲ್ಲರೂ ಸಹ ಕಷ್ಟಗಳನ್ನು ಎದುರಿಸಿ ಇಂದು ಈ ಮಟ್ಟಕ್ಕೆ ಸಾಧಿಸಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಯಾರೂ ಸಹ ಕಷ್ಟಗಳನ್ನು ಅನುಭವಿಸದೇ ಸಾಧಕ ಎಂಬ ಬಿರುದನ್ನು ಪಡೆಯುವುದಿಲ್ಲ. ಮೇಲೆ ಹೇಳಿರುವುದು ಕೇವಲ ಕೆಲವು ಸಾಧಕರ ಬಗ್ಗೆಯಷ್ಟೇ. ಇಂತಹ ಅದೆಷ್ಟೋ ಸಾಧಕರು ಜೀವನದಲ್ಲಿ ಕಷ್ಟ , ನೋವುಗಳಳನ್ನು ಸಹಿಸಿ ಬಂದ ದಾರಿಯನ್ನು ಮರೆಯದೇ ಇಂದು ಸಾಧಕರಾಗಿ ಬೆಳೆದಿದ್ದಾರೆ. ನಾವುಗಳೂ ಅಷ್ಟೆ ಇಂದು ಕಷ್ಟ ಎಂದು ಹಿಂಜರಿದು ಹೆಜ್ಜೆ ಹಿಂದಿಟ್ಟರೆ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ..
ವೆಂಕಟೇಶ್ ಬಾಬು ಎಸ್. ದಾವಣಗೆರೆ.