ಯಾರದ್ದೋ ಮನೆಗೆ ಯಾರೋ ಗೃಹಪ್ರವೇಶ! ಮನೆ ಖರೀದಿಸದೇ ಓನರ್‌ಷಿಪ್
ಶಿವಮೊಗ್ಗ: ಮನೆಯ ಮಾಲೀಕರು ಯಾರೋ? ಆದರೆ ಮನೆ ಬೀಗ ಒಡೆದು ಗೃಹಪ್ರವೇಶಿಸಿ ನಾನೇ ಈ ಮನೆಯ ಮಾಲೀಕ ಅಂತ ಹೇಳೋನು ಮತ್ಯಾರೋ … ಇಂಥದೊಂದು ಘಟನೆ ಇಲ್ಲಿನ ಗೋಪಾಲಗೌಡ ಬಡಾವಣೆಯಲ್ಲಿ ನಡೆದಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಾಗಿರುವ ಜಯಮ್ಮ ಎಂಬುವರು 12 ವರ್ಷಗಳ ಹಿಂದೆ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಟ್ವಿನ್ ಹೌಸ್ ಖರೀದಿ ಮಾಡಿ ಕ್ರಯ ಪತ್ರ ಮಾಡಿಸಿಕೊಂಡಿದ್ದು, ವಿದ್ಯುತ್ ಸಂಪರ್ಕವನ್ನೂ ತಮ್ಮ ಹೆಸರಿಗೆ ಬದಲಾವಣೆ ಮಾಡಿಸಿ ಕೊಂಡಿದ್ದರು.
ಟ್ವಿನ್ ಹೌಸ್‌ನಲ್ಲಿ ಒಂದು ಮನೆಯನ್ನು ಲೀಸ್‌ಗೆ ಕೊಟ್ಟಿದ್ದರು. ಖಾಲಿ ಇದ್ದ ಮತ್ತೊಂದು ಮನೆಗೆ ಬೀಗ ಹಾಕಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಲಗೇಜು ಸಮೇತ ಬಂದ ವ್ಯಕ್ತಿಯೊಬ್ಬ ಮನೆಗೆ ಹಾಕಿದ್ದ ಬೀಗ ಒಡೆದು ಗೃಹ ಪ್ರವೇಶ ಮಾಡಿಬಿಟ್ಟ. ಈ ಟ್ವಿನ್ ಹೌಸ್‌ನ ಮತ್ತೊಂದು ಮನೆಯಲ್ಲಿ ಲೀಸ್‌ಗೆ ಇದ್ದವರು ಬೆಂಗಳೂರಿನಲ್ಲಿರುವ ಈ ಮನೆಯ ಮಾಲೀಕರಾದ ಜಯಮ್ಮ ಅವರಿಗೆ ಫೋನ್ ಮಾಡಿ ಯಾರೋ ಬಂದು ಬೀಗ ಒಡೆದು ಗೃಹ ಪ್ರವೇಶ ಮಾಡಿದ್ದಾರೆ. ಅವರಿಗೆ ಮನೆಯನ್ನ ಲೀಸ್‌ಗೆ ಕೊಟ್ಟಿದ್ದೀರೋ? ಅಥವಾ ಬಾಡಿಗೆಗೋ ಎಂದು ಕೇಳಿದ್ದಾರೆ.
ಈ ಮಾತು ಕೇಳುತ್ತಿದ್ದಂತೆ ಮನೆಯ ಮಾಲೀಕರು ಗಾಬರಿಯಾಗಿದ್ದಾರೆ. ಯಾಕೆಂದರೆ ಅವರು ಖಾಲಿ ಇದ್ದ ಮತ್ತೊಂದು ಮನೆಯನ್ನು ಯಾರಿಗೂ ಕೊಟ್ಟಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗಕ್ಕೆ ಆಗಮಿಸಿದ ಅವರು, ಮನೆ ಬೀಗ ಒಡೆದು ವಾಸವಾಗಿರುವ ವ್ಯಕ್ತಿಯನ್ನು ಯಾರಪ್ಪಾ ನೀನು? ಎಂದು ಕೇಳಿದರೆ ಇದು ನನ್ನದೇ ಮನೆ. ನಿಮಗೆ ಏನಾಗಬೇಕಿತ್ತು? ಎಂದು ಕೇಳಿದ್ದಾನೆ. ಈ ಮನೆ ಓನರ್ ನಾನು ಎಂದು ಜಯಮ್ಮ ಹೇಳಿದ್ದಾರೆ.
ಕರೆಂಟ್ ಬಿಲ್ ನೋಡಿ ಶಾಕ್!:
ತಮ್ಮ ಟ್ವಿನ್ ಹೌಸ್‌ನ ಖಾಲಿ ಇದ್ದ ಒಂದು ಮನೆಯಲ್ಲಿ ತಮಗೆ ತಿಳಿಯದಂತೆ ಯಾರೋ ಬಂದು ವಾಸವಾಗಿರುವುದು ಗೊತ್ತಾಗುತ್ತಿದ್ದಂತೆ ಶಿವಮೊಗ್ಗಕ್ಕೆ ಬಂದ ಜಯಮ್ಮ, ಮನೆಯಲ್ಲಿ ವಾಸವಾಗಿರುವ ವ್ಯಕ್ತಿಯನ್ನು ಪ್ರಶ್ನೆ ಮಾಡಿದಾಗ ಆತ ಅವರಿಗೆ ಮನೆಯ ಕರೆಂಟ್ ಬಿಲ್ ಕೊಟ್ಟಿದ್ದಾನೆ. ಕರೆಂಟ್ ಬಿಲ್ ನೋಡಿ ಮನೆಯ ಮಾಲೀಕರಿಗೆ ಶಾಕ್ ಆಗಿದೆ. ಏಕೆಂದರೆ ಆ ಮನೆಯಲ್ಲಿ ವಾಸವಾಗಿರುವ ವ್ಯಕ್ತಿಯ ಹೆಸರಿನಲ್ಲೇ ಕರೆಂಟ್ ಬಿಲ್ ಇದೆ.
ಮನೆ ಖರೀದಿ ಮಾಡಿದಾಗ ಜಯಮ್ಮ ವಿದ್ಯುತ್ ಸಂಪರ್ಕವನ್ನೂ ತಮ್ಮ ಹೆಸರಿಗೆ ಬದಲಾವಣೆ ಮಾಡಿಸಿಕೊಂಡಿದ್ದರು. ಈಗ ನೋಡಿದರೆ ಟ್ವಿನ್ ಹೌಸ್‌ನಲ್ಲಿ ಒಂದು ಮನೆಯ ಕರೆಂಟ್ ಬಿಲ್ ಬೇರೆಯವರ ಹೆಸರಿನಲ್ಲಿದೆ. ಕೆದಕಿದಾಗ ಫೋರ್ಜರಿ ಸಹಿ ಮಾಡಿರುವುದು ಗೊತ್ತಾಗಿದೆ. ಈಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.