ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರುವುದು ಭ್ರಮೆ: ಯಡಿಯೂರಪ್ಪ

ದಾವಣಗೆರೆ: ‘ಹಣ, ಹೆಂಡ, ತೋಳ್ಬಲ, ಅಧಿಕಾರದ ಬಲದಿಂದ ಹಾಗೂ ಜಾತಿಯ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆ ಒಂದು ಕಾಲವಿತ್ತು. ಆದರೆ, ಇಂದು ಇಡೀ ದೇಶದ ಜನ, ಕರ್ನಾಟಕದ ಜನ ನರೇಂದ್ರ ಮೋದಿ ಕಡೆ ನೋಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಕಲ್ಪಯಾತ್ರೆ ಮಹಾಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್‌ನ ಸುಳ್ಳು ಭರವಸೆಗಳನ್ನು ನಂಬುವ ಸ್ಥಿತಿಯಲ್ಲಿ ಇಂದು ಜನರಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಒಂಬತ್ತು ವರ್ಷಗಳಿಂದ ಒಂದು ದಿನವೂ ವಿಶ್ರಾಂತಿ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಮುಂದಿನ ಎರಡು ತಿಂಗಳು ನಮ್ಮ ಸಂಪೂರ್ಣ ಸಮಯವನ್ನು ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ ಮನೆ–ಮನೆಗೆ ತೆರಳಿ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರಗಳು ನೀಡಿದ ಕಾರ್ಯಕ್ರಮಗಳನ್ನು ತಲುಪಿಸಲು ಮೀಸಲಿಡಬೇಕು ಎಂದು ಹೇಳಿದರು.
ಎರಡು ತಿಂಗಳು ಹಳ್ಳಿ–ಹಳ್ಳಿಗಳಿಗೆ ಹೋಗಿ ಮೋದಿಯ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟು ಜನರ ಮನಸ್ಸನ್ನು ಗೆಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನೀವು ಹೆಂಡತಿ–ಮಕ್ಕಳೊಂದಿಗೂ ಪರಿಶ್ರಮ ಪಡಬೇಕು. ಮುಂದಿನ ಚುನಾವಣೆಯಲ್ಲಿ ಮೋದಿ ಅವರನ್ನು ಗೆಲ್ಲಿಸಿ ಮತ್ತೆ ಪ್ರಧಾನಿ ಮಾಡಲು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಒಂದು ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗದೇ ಇರುವ ವಿರೋಧ ಪಕ್ಷದ ನಾಯಕರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಈಗ ಗ್ಯಾರಂಟಿ ಕಾರ್ಡ್ ಮೂಲಕ ಸುಳ್ಳು ಭರವಸೆಗಳನ್ನು ನೀಡುತ್ತಿದೆ. 70 ವರ್ಷಗಳ ಕಾಲ ಇವರೇನು ಕಡುಬು ತಿನ್ನುತ್ತಿದ್ದರಾ?’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.