ಎಸ್ ಪಿ ರಿಷ್ಯಂತ್ ಚಾರ್ಜ್, 48 ಗಂಟೆಯಲ್ಲಿ ಹರಿಹರ-ಹೊನ್ನಾಳಿಯಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಮರಳು ವಶ
ದಾವಣಗೆರೆ: ಹೊನ್ನಾಳಿ-ನ್ಯಾಮತಿ ತಾಲ್ಲೂಕಿನ ತುಂಗಾ ಭದ್ರ ನದಿ ಪಾತ್ರದಲ್ಲಿ ಅಕ್ರಮ ಮರಳು ಸಂಗ್ರಹಣೆ ಸ್ಥಳಗಳ ಮೇಲೆ, ಹಾಗೂ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಪೊಲೀಸರು ಲಕ್ಷಾಂತರ ಮೌಲ್ಯದ ಮರಳನ್ನು ವಶಕ್ಕೆ ಪಡೆದಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿ ಗ್ರಾಮ ಹಾಗೂ ನ್ಯಾಮತಿ ತಾಲ್ಲೂಕಿನ ಹಿರೇಮಳಲಿ ಗ್ರಾಮದಲ್ಲಿ ಅಕ್ರಮ ಮರಳು ಸಂಗ್ರಹಣೆ ಮಾಡಿದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಹೊನ್ನಾಳಿ ಪೊಲೀಸ್ ವೃತ್ತ ನಿರೀಕ್ಷಕ ದೇವರಾಜ್ ಟಿ.ವಿ ಅವರ ನೇತೃತ್ವದಲ್ಲಿ ದಾಳಿ ನಡೆಸಿರುವ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 05 ಟಿಪ್ಪರ್ ಲಾರಿಯ ಲೋಡಿನಷ್ಟು ಮರಳು ಅಂದಾಜು 1,25 ಲಕ್ಷ ಹಾಗೂ ನ್ಯಾಮತಿ ತಾಲ್ಲೂಕ್ ಚೀಲೂರು- ಸವಳಂಗ ಮಧ್ಯೆ ಮೂರು ಟ್ರಾಕ್ಟರ್‌ಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರಾಕ್ಟರ್ ಟೈಲರ್‌ನಲ್ಲಿದ್ದ ಸುಮಾರು 20 ಸಾವಿರ ಮೌಲ್ಯದ ಮರಳು,
ಹಾಗೂ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾಸ್ವೇಹಳ್ಳಿ ಹಾಗೂ ಬೆನಕನಹಳ್ಳಿ ಗ್ರಾಮದ ಮಧ್ಯೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್ ಲಾರಿಯನ್ನು ಹಾಗೂ ಲಾರಿಯಲ್ಲಿದ್ದ ಸುಮಾರು 75 ಸಾವಿರ ಮೌಲ್ಯದ ಒಟ್ಟು 2.20 ಲಕ್ಷ ಮೌಲ್ಯದ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನ್ಯಾಮತಿ ಮತ್ತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.