Sports: ಖೋ ಖೋ ಚಾಂಪಿಯನ್ ಷಿಪ್: ಕರ್ನಾಟಕ ಮತ್ತು ಕೇರಳಕ್ಕೆ ಪ್ರಶಸ್ತಿ ಡಿಸೆಂಬರ್ ಅಥವಾ ಮಾರ್ಚ್‍ನಲ್ಲಿ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿ: ದಿನೇಶ್ ಕೆ.ಶೆಟ್ಟಿ

ದಾವಣಗೆರೆ: (Sports) ಡಿಸೆಂಬರ್ ಅಥವಾ ಮಾರ್ಚ್‍ನಲ್ಲಿ ದಾವಣಗೆರೆಯಲ್ಲಿ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಖೋ ಖೋ ಸಂಸ್ಥೆಯ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ ಅವರು ತಿಳಿಸಿದರು.
ಅವರಿಂದು ದಾವಣಗೆರೆ ಜಿಲ್ಲಾ ಕ್ರಿಡಾಂಗಣದಲ್ಲಿ ಆಯೋಜಿಸಿರುವ 31ನೇ ದಕ್ಷಿಣ ಭಾರತ ಮಟ್ಟದ ಪುರುಷ ಮತ್ತು ಮಹಿಳೆಯರ ಖೋ ಖೋ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ದಾವಣಗೆರೆಯಲ್ಲಿ ಪ್ರತಿ ಕ್ರೀಡಾಕೂಟವನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ಖೋ ಖೋ ರಾಷ್ಟ್ರಮಟ್ಟದ ಪಂದ್ಯಾವಳಿಗೂ ಸಹಕಾರ ನೀಡುವರು ಎಂದರು.

ಖೋ ಖೋ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದರೆ, ಕೇರಳ ದ್ವಿತೀಯ ಸ್ಥಾನ, ತಮಿಳುನಾಡು ತೃತೀಯ ಸ್ಥಾನ  ಪಡೆಯಿತು. ಪುರುಷರ ವಿಭಾಗದಲ್ಲಿ ಕೇರಳ ಮೊದಲ ಸ್ಥಾನ ಪಡೆದರೆ, ಕರ್ನಾಟಕ ದ್ವಿತೀಯ ಸ್ಥಾನ, ಆಂಧ್ರಪ್ರದೇಶ ತೃತೀಯ ಸ್ಥಾನ ಪಡೆಯಿತು.
ಮಹಿಳೆಯರ ವಿಭಾಗದಲ್ಲಿ ಬೆಸ್ಟ್ ಡಿಪೆಂಡರ್ ಆಗಿ ಆಂಧ್ರಪ್ರದೇಶದ ಕುಮಾರಿ, ಬೆಸ್ಟ್ ಅಟ್ಯಾಕರ್ ಆಗಿ ತಮಿಳುನಾಡಿನ ಜಯಶ್ರೀ, ಬೆಸ್ಟ್ ಆಲ್ ರೌಂಡರ್ ಆಗಿ ಕೇರಳದ ಕಾವ್ಯ ಕೃಷ್ಣ, ಹಾಗೂ ಪುರುಷರ ವಿಭಾಗದಲ್ಲಿ ಬೆಸ್ಟ್ ಡಿಪೆಂಡರ್ ಆಗಿ ತೆಲಂಗಾಣದ ಜಿ.ದಿನೇಶ್, ಬೆಸ್ಟ್ ಅಟ್ಯಾಕರ್ ಆಗಿ ಆಂಧ್ರಪ್ರದೇಶದ ಮಾರಿಶೆಟ್ಟಿ, ಬೆಸ್ಟ್ ಆಲ್ ರೌಂಡರ್ ಆಗಿ ಕರ್ನಾಟಕದ ಆದಿತ್ಯ ಪಾಟೀಲ್ ಪ್ರಶಸ್ತಿ ಪಡೆದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿ.ಎಸ್.ಮಂಜುನಾಥ್, ಕ್ರೀಡಾ ಇಲಾಖೆಯ ಶ್ರೀಹರ್ಷ, ಡಿ.ಎಸ್.ಹೇಮಂತ್, ಮಲ್ಲಿಕಾರ್ಜುನ್ ಕಬಡ್ಡಿ, ರಾಮಲಿಂಗಪ್ಪ, ರಾಜ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ರವಿ, ಚಂದ್ರು, ಗೋಪಿ, ಕೊಟ್ರೇಶ್ ಮತ್ತಿತರರಿದ್ದರು.

 
                         
                       
                       
                       
                      