ಉಚಿತ ಲಸಿಕೆ, ರೆಮಿಡಿಸಿವಿರ್, ಆಕ್ಸಿಜನ್ ತರಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಕರೋನಾ ತಡೆಗಟ್ಟಲು ಲಾಕ್ ಡೌನ್, ಕರ್ಫ್ಯೂ ಪರಿಹಾರವಲ್ಲ: ಸರ್ಕಾರ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು: ಡಾ ಶಾಮನೂರು ಶಿವಶಂಕರಪ್ಪ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ್

ಶಾಮನೂರು ಶಿವಶಂಕರಪ್ಪ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ
ದಾವಣಗೆರೆ: ಕೊರೋನಾದ 2ನೇ ಅಲೆ ತೀವ್ರವಾಗಿದ್ದು, ಇದನ್ನು ತಡೆಗಟ್ಟಲು ಲಾಕ್‍ಡೌನ್ ಮತ್ತು ಕಪ್ರ್ಯೂ ಒಂದೇ ಪರಿಹಾರವಲ್ಲ, ಸರ್ಕಾರ ಮತ್ತು ಜಿಲ್ಲಾಡಳಿತ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿ, ಅವಶ್ಯ ಇರುವವರಿಗೆ ಉಚಿತವಾಗಿ ವ್ಯಾಕ್ಸಿನ್, ರೆಮಿಡಿಸಿವಿರ್ ಚುಚ್ಚುಮದ್ದನ್ನು ನೀಡಬೇಕೆಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಹಾಗೂ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ಒತ್ತಾಯಿಸಿದ್ದಾರೆ.
ನವೆಂಬರ್ ನಲ್ಲಿ ಕೊರೋನಾ 2ನೇ ಅಲೆ ಆರಂಭಗೊಳ್ಳುವ ಬಗ್ಗೆ ಸರ್ಕಾರದ ಗಮನಕ್ಕೆ ಇದ್ದರೂ ಸಹ ಸರ್ಕಾರ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜವಾಬ್ದಾರಿಯುತ ಕೆಲಸ ಮಾಡದೇ ತೀವ್ರವಾಗಿ ನಿರ್ಲಕ್ಷಿಸಿದ್ದರಿಂದ ಇಂದು ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.
ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಸರ್ಕಾರ ಜನರನ್ನು ತಪ್ಪಿತಸ್ಥರು ಎಂದು ಬಿಂಬಿಸದೇ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಸರ್ಕಾರ ಮತ್ತು ಜಿಲ್ಲಾಡಳಿತ ಇದೀಗ ಪರಿಸ್ಥಿತಿ ಇನ್ನಷ್ಟು ಕೈಮೀರದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿರುವ ಅವರು ರಾಜ್ಯದ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ತೀವ್ರವಾಗಿದ್ದು, ದಾವಣಗೆರೆಯಲ್ಲಿ ಕೊರೋನಾ ಹೆಚ್ಚಳವಾಗದಂತೆ ತಡೆಯುವ ಕೆಲಸ ನಮ್ಮಿಂದನೇ ಆಗಬೇಕಿದ್ದು, ಅವಶ್ಯವಾಗಿ ಹೊರಬರಬೇಕೆಂಬ ಜನರು ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳುವ ಮೂಲಕ ಜಾಗರೂಕತೆಯಿಂದ ಇರಬೇಕೆಂದು ನಾಗರೀಕರಲ್ಲಿ ಮನವಿ ಮಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 15 ಲಕ್ಷ ಜನಸಂಖ್ಯೆ ಇದ್ದು, ಕನಿಷ್ಟ ಪಕ್ಷ ಪ್ರತಿದಿನ 15 ಸಾವಿರ ಜನರಿಗೆ ಲಸಿಕೆ ಹಾಕಬೇಕು. 8-10 ಸಾವಿರ ಲಸಿಕೆ ಜಿಲ್ಲೆಗೆ ಬಂದರೆ ಏನು ಉಪಯೋಗವಾಗುವುದಿಲ್ಲ. ಜಿಲ್ಲಾಡಳಿತ ಈ ಕೂಡಲೇ ಸರ್ಕಾರಕ್ಕೆ ಸಮರ್ಪಕ ಲಸಿಕೆ, ಆಕ್ಸಿಜನ್ ಹಾಗೂ ರೆಮಿಡಿಸಿಯರ್ ಇಂಜೆಕ್ಷನ್ ಪೂರೈಕೆ ಮಾಡಲು ಒತ್ತಡ ಹಾಕುವಂತೆ ಆಗ್ರಹಿಸಿದ್ದು, ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ಮತ್ತು ಅವಶ್ಯವಿರುವವರಿಗೆ ರೆಮಿಡಿಸಿವಿರ್ ಚುಚ್ಚುಮದ್ದನ್ನು ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ದಾವಣಗೆರೆ ಜಿಲ್ಲಾ ಆಸ್ಪತ್ರಯಲ್ಲಿ 41 ವೆಂಟಿಲೇಟರ್‍ಗಳಿದ್ದರೂ ಸಹ ಕೇವಲ 20 ವೆಂಟಿಲೇಟರ್ ಗಳನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದ್ದು, ಇನ್ನು 21 ವೆಂಟಿಲೇಟರ್ ಗಳನ್ನು ಏಕೆ ಬಳಸಿಕೊಳ್ಳುತ್ತಿಲ್ಲ? ವೆಂಟಿಲೇಟರ್‍ಗಳನ್ನು ನಿರ್ವಹಿಸುವ ಸಿಬ್ಬಂದಿಗಳನ್ನು ನೇಮಿಸಿಕೊಂಡಿಲ್ಲವೇ? ಎಂದು ಅವರುಗಳು ಪ್ರಶ್ನಿಸಿದ್ದಾರೆ. ಲಾಕ್‍ಡೌನ್ ಮತ್ತು ಕಪ್ರ್ಯೂ ಹೆಸರಿನಲ್ಲಿ ಜನರ ಪ್ರಶ್ನಿಸುವ ಹಕ್ಕನ್ನು ಕಸಿದುಕೊಂಡಂತಾಗಲಿದ್ದು, ಅಧಿಕಾರಿಗಳು ಜನರನ್ನು ದಾರಿ ತಪ್ಪಿಸಲು ಲಾಕ್‍ಡೌನ್ ಮತ್ತು ಕಪ್ರ್ಯೂನ್ನು ಬಳಸಿಕೊಂಡು ಜನರಿಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ತಲುಪಬೇಕಾದ ಅಗತ್ಯ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಿದರು.