ಎಸ್‌ಎಸ್‌ಎಲ್‌ಸಿ : ಶೂನ್ಯ ಫಲಿತಾಂಶ ಪಡೆದ ಶಾಲೆಗಳು ಎಷ್ಟು? ಯಾಕೆ ಶೂನ್ಯ ಫಲಿತಾಂಶ ಬಂತು ಗೊತ್ತಾ?
ದಾವಣಗೆರೆ: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಯಾವ ಜಿಲ್ಲೆ ಮೊದಲ ಸ್ಥಾನದಲ್ಲಿದೆ, ಯಾವ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದಿದ್ದಾನೆ, ಯಾವ ಜಿಲ್ಲೆಯ ಯಾವ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿದೆ ಎಂಬುವುದನ್ನು ಗಮನಿಸುವುದರಲ್ಲಿ ಮಗ್ನರಾಗಿದ್ದೇವೆ. ಆದರೆ ರಾಜ್ಯದಲ್ಲಿ ಬರೋಬ್ಬರಿ 20 ಶಾಲೆಗಳು ಶೂನ್ಯ ಫಲಿತಾಂಶವನ್ನು ಪಡೆದಿದ್ದು, ಯಾವ ಕಾರಣಕ್ಕೆ ಈ ಶಾಲೆಗಳಿಗೆ ಶೂನ್ಯ ಫಲಿತಾಂಶ ಬಂತು ಎಂಬ ಮಾಹಿತಿ ತಿಳಿದು ಬಂದಿಲ್ಲ.
ಸರ್ಕಾರದ ಫಲಿತಾಂಶ ಪ್ರಕಟಣೆ ರಾಜ್ಯದ 20 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿರುವ ಕುರಿತು ಅಂಕಿ-ಅ0ಶಗಳನ್ನು ಪ್ರಕಟಿಸಿದ್ದು, ಯಾವ ಕಾರಣಕ್ಕೆ ರಾಜ್ಯದ 20 ಶಾಲೆಗಳು ಶೂನ್ಯ ಫಲಿತಾಂಶ ಪಡೆಯಿತು. ಹಾಗಾದರೆ ಆ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾಭ್ಯಾಸ ದೊರಕುತ್ತಿದೆಯೇ? ಅಥವಾ ಆ ಶಾಲೆಗಳ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದೆಯೇ ಅಥವಾ ಇಲ್ಲವೋ ಸೇರಿದಂತೆ ಹಲವು ಅನುಮಾನಗಳು ಮಕ್ಕಳ ಪೋಷಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಸಹಜವಾಗಿ ಮೂಡಲಿದೆ. ಹಾಗಾಗಿ ಸರ್ಕಾರ ರಾಜ್ಯದ 20 ಶಾಲೆಗಳು ಯಾವ ಕಾರಣಕ್ಕಾಗಿ ಶೂನ್ಯ ಫಲಿತಾಂಶ ಪಡೆಯಿತು ಎಂಬುದರ ಬಗ್ಗೆ ರಾಜ್ಯದ ಜನತೆಗೆ ಮಾಹಿತಿ ಒದಗಿಸುವುದು ಅಗತ್ಯವಾಗಿದೆ.ಈ ಅಂಶಗಳ ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಇಂತಹ ಶಾಲೆಗಳನ್ನು ಗುರುತಿಸಿ ಉತ್ತಮ ಫಲಿತಾಂಶ ಬರಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ.
ರಾಜ್ಯದ 2 ಸರ್ಕಾರಿ ಶಾಲೆಗಳು, 3 ಅನುದಾನಿತ ಶಾಲೆಗಳು, 15 ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 20 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ ಎಂಬ ಮಾಹಿತಿ ಲಭ್ಯವಿದ್ದು, ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ. 2019-20ರಲ್ಲಿ 4 ಸರ್ಕಾರಿ ಶಾಲೆಗಳು, 10 ಅನುದಾನಿತ ಶಾಲೆಗಳು, 47 ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 61 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿತ್ತು. 2020-21ರಲ್ಲಿ ಯಾವ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿರಲಿಲ್ಲ.