ಎಸ್ಎಸ್ಎಲ್ಸಿಯಲ್ಲಿ ಪಾಸಾದ ವಿದ್ಯಾರ್ಥಿನಿ ಭೀಕರ ಹತ್ಯೆ ಪ್ರಕರಣ: ಆರೋಪಿ ಬಂಧನ
ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಪ್ರಕಾಶ್ (32) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಸ್ವಗ್ರಾಮ ಹಮ್ಮಿಯಾಲದಲ್ಲೇ ಈತನ ಬಂಧನವಾಗಿದೆ ಎಂದು ತಿಳಿದು ಬಂದಿದೆ.
ಗುರುವಾರ ಸಂಜೆ ಮೀನಾಳ ತಂದೆ, ತಾಯಿ ಮೇಲೆ ಹಲ್ಲೆ ಮಾಡಿ, ನಂತರ ಮೀನಾಳನ್ನು ಸ್ವಲ್ಪ ದೂರ ಎಳೆದೊಯ್ದು ತಲೆಯನ್ನು ಕತ್ತರಿಸಿ ಪರಾರಿಯಾಗಿದ್ದ. ಪೊಲೀಸರು ಆರೋಪಿಯ ಶೋಧ ಕಾರ್ಯ ತೀವ್ರಗೊಳಿಸಿದ ಹಂತದಲ್ಲೇ ಶುಕ್ರವಾರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವ್ಯಾಪಕ ಊಹಾಪೋಹಗಳು ಹಬ್ಬಿತ್ತು. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಈ ಸುದ್ದಿಯನ್ನು ಅಲ್ಲಗಳೆದಿದ್ದರು. ಇದೀಗ ಆರೋಪಿಯ ಬಂಧನವಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಎಸ್ಪಿ ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿಯನ್ನು ಮಧ್ಯಾಹ್ನದ ವೇಳೆಗೆ ನೀಡುವುದಾಗಿ ತಿಳಿಸಿದ್ದಾರೆ.
ಈತನಿಗಾಗಿ ಹಗಲು ರಾತ್ರಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದೆವು. ಈ ವೇಳೆ ಬೆಳಿಗ್ಗೆ ಗ್ರಾಮದ ಸಮೀಪ ಕಾಡಿನಲ್ಲಿ ಈತ ಅವಿತುಕೊಂಡಿರುವ ಕುರಿತ ಮಾಹಿತಿ ಲಭಿಸಿತು. ಕೂಡಲೇ ಇಂದು ಬೆಳಿಗ್ಗೆ ಆತನನ್ನು ಬಂಧಿಸಲಾಯಿತು. ಇನ್ನು ಬಾಲಕಿಯ ರುಂಡದ ಕುರಿತು ಇನ್ನಷ್ಟೇ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.