ಎಸ್ ಎ ಆರ್ ಪರವಾಗಿ ಮಠಾಧೀಶರು ಇರದಿದ್ದರೇ, ಹೇಗೆ ಶಾಸಕರಾಗುತ್ತಿದ್ರಿ.? – ಹರೀಶ್ ಬಸಾಪುರ

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್ ರವರು ಮಠಾಧೀಶರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ಹೇಳಿಕೆಗಳನ್ನು ವಿರೋಧಿಸುತ್ತಿರುವುದನ್ನು ನೋಡಿದರೆ ಹಾಸ್ಯಾಸ್ಪದವೆನಿಸುತ್ತದೆ.
ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ ಪಕ್ಷದ ಶಾಸಕರು ಮಾತ್ರವಲ್ಲದೆ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ತಮ್ಮ ಸಮುದಾಯದ ಒಬ್ಬ ನಾಯಕನಿಗೆ ಆಗುತ್ತಿರುವ ಅನ್ಯಾಯವನ್ನು ಆ ಸಮುದಾಯದ ಅಧ್ಯಕ್ಷರಾಗಿ ವಿರೋಧಿಸುತ್ತಿದ್ದಾರೆ ವಿನಹ ಬೇರೆ ಕಾರಣದಿಂದಲ್ಲ, ಸಮುದಾಯದ ಅಧ್ಯಕ್ಷರಾಗಿ ಆ ಸಮುದಾಯದ ಏಳಿಗೆಗಾಗಿ ಶ್ರಮಿಸುವುದು ಅವರ ಕರ್ತವ್ಯವಾಗಿದ್ದು, ಅವರ ನಡೆ ಸಮುದಾಯದ ಹಿತದೃಷ್ಟಿಯಿಂದ ಸ್ವಾಗತಾರ್ಹ ಇದನ್ನು ವಿರೋಧಿಸುತ್ತಿರುವ ಶಾಸಕರ ನಡೆ ನೋಡಿದರೆ ಅವರಿಗೆ ಸಮುದಾಯಕ್ಕಿಂತ ವೈಯಕ್ತಿಕ ಲಾಭವೇ ಮುಖ್ಯವೆನಿಸುತ್ತದೆ.
ಇನ್ನು ಮಠಾಧೀಶರ ನಡೆಯ ಬಗ್ಗೆ ಸಾರ್ವಜನಿಕರು ಮತ್ತು ಇತರ ನಾಯಕರು ವಿರೋಧಿಸುತ್ತಿರುವುದು ಏನೇ ಇರಲಿ, ಆದರೆ ಮಠಾಧೀಶರ ಕೃಪಾ ಕಟಾಕ್ಷದಿಂದಲೇ ಶಾಸಕರಾಗಿ ರಾಜಕೀಯ ಏಳಿಗೆಯನ್ನು ಕಂಡ ರವೀಂದ್ರನಾಥ್ ಅವರು ಈಗ ಮಠಾಧೀಶರ ನಡೆಯನ್ನು ವಿರೋಧಿಸುತ್ತಿರುವುದು ಮಾತ್ರ ಹಾಸ್ಯಾಸ್ಪದವಲ್ಲವೇ ಬೇರೆ ಏನು ಅಲ್ಲ, ಅವರು 1994ರ ವಿಧಾನಸಭಾ ಚುನಾವಣೆಯ ಇತಿಹಾಸವನ್ನು ಮರೆತಂತಿದೆ.