ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವೇ ಕಾಂಗ್ರೆಸ್ ಗೆಲುವಿಗೆ ಕಾರಣವಾಗುತ್ತದೆ – ಬಸವರಾಜು ವಿ ಶಿವಗಂಗಾ
ಚನ್ನಗಿರಿ : ಇಡೀ ದೇಶದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಕಾಣುತ್ತಿದೆ. ಚುನಾವಣೆಗೂ ಕೊಟ್ಟ ಸುಳ್ಳು ಭರವಸೆಗಳಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಅವರು ತಿಳಿಸಿದರು. ತಾಲ್ಲೂಕಿನ ಜಮ್ಮಾಪುರ ಹಾಗೂ ತಿಪ್ಪಗೊಂಡನಹಳ್ಳಿಗೆ ಭೇಟಿ ನೀಡಿದ ಅವರು ಗ್ರಾಮದ ಹಿರಿಯರು ಹಾಗೂ ಕಾಂಗ್ರೆಸ್ನ ಯುವ ನಾಯರೊಂದಿಗೆ ಚರ್ಚೆ ನಡೆಸಿದರು. ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಸದೃಢವಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನ ಸಂಘಟನೆ ಮಾಡಲಾಗುತ್ತಿದೆ. ಚುನಾವಣೆ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕೆ ನಾನು ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ. ಕಳೆದ ಹಲವು ವರ್ಷಗಳಿಂದಲೂ ಸಹ ನಾನು ಪಕ್ಷದ ವರಷ್ಠರ ಸೂಚನೆ ಮೇರೆಗೆ ಪಕ್ಷ ಸಂಘಟನೆ ಮಾಡುತ್ತಾ ಬಂದಿದ್ದೇನೆ. ಕ್ಷೇತ್ರದಲ್ಲಿ ಇದೀಗ ಬಿಜೆಪಿ ವಿರೋಧಿ ಅಲೆ ಕಾಣುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನರು ತತ್ತರಿಸಿ ಹೋಗಿದ್ದಾರೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ಜನ ಸಾಮಾನ್ಯರು ಜೀವನ ನಡೆಸದಂತ ಪರಿಸ್ಥಿತಿ ಉಂಟಾಗುತ್ತಿದೆ. ನಿರುದ್ಯೋಗ ತಾಂಡವಾಡುತ್ತಿದೆ, ಉನ್ನತ ವ್ಯಾಸಂಗ ಮಾಡಿದ ಸಾವಿರಾರು ಯುವಕರು ಕೆಲಸವಿಲ್ಲದೆ ಮನೆಯಲ್ಲಿ ಇರುವಂತಾಗಿದೆ. ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವಂತ ಕೆಲಸಗಳನ್ನ ಜಾರಿಗೊಳಿಸಬೇಕಿದೆ. ಆಡಳಿತ ಪಕ್ಷ ಕೇವಲ ರಸ್ತೆ, ಸಮುದಾಯ ಭವನ ಗುದ್ದಲಿ ಪೂಜೆಯಲ್ಲೇ ಕಾಲ ಕಳೆಯುತ್ತಿದೆ ಎಂದರು. 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಇದನ್ನ ಕ್ಷೇತ್ರ ಜನರೇ ನಿರ್ಧಾರ ಮಾಡಿದ್ದಾರೆ. ಅಧಿಕಾರ ಇರಲಿ ಬಿಡಲಿ ನಾನು ಈ ತಾಲ್ಲೂಕಿನ ಮಗನಾಗಿ ನಿಮ್ಮ ಜೊತೆ ಇರುತ್ತೇನೆ ಎಂದು ಬಸವರಾಜು ವಿ ಶಿವಗಂಗಾ ತಿಳಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡರು, ಯುವ ನಾಯಕರು ಉಪಸ್ಥಿತರಿದ್ದರು