ನಮೋದ್ಯಮ, ಆ್ಯಪ್ ಕಂಪನಿಗಳಿಗೆ ಎಸ್ಟಿಪಿಐ ಅನುಕೂಲ:ತ್ಯಾಗಿ
ದಾವಣಗೆರೆ: ರಾಜ್ಯದ ಮಧ್ಯಭಾಗದಲ್ಲಿರುವ ದಾವಣಗೆರೆ ಜಿಲ್ಲೆ ಸ್ವಚ್ಛ, ಸುಂದರ ನಗರವಾಗಿದ್ದು, ವಿವಿಧ ಐಟಿ ಕಂಪನಿಗಳಿಗೆ, ದಾವಣಗೆರೆಯಲ್ಲಿ ನವೋದ್ಯಮ ಕಂಪನಿಗಳು, ಆ್ಯಪ್ ಕಂಪನಿಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ಸಾಫ್ಟ್ವೇರ್ ಟೆಕ್ನಾಲಜಿಸ್ ಪಾರ್ಕ್ ಆಫ್ ಇಂಡಿಯಾದ ಬೆಂಗಳೂರಿನ ಹಿರಿಯ ನಿರ್ದೇಶಕ ಶೈಲೇಂದ್ರ ತ್ಯಾಗಿ ಮಾಹಿತಿ ನೀಡಿದರು.
ದಾವಣಗೆರೆ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಸಿದ್ಧವಾಗುತ್ತಿರುವ ಎಸ್ಟಿಪಿಐ ಉಪಕೇಂದ್ರದ ಕುರಿತು ಮಾಹಿತಿ ನೀಡಿದರು.
ಈ ಕೇಂದ್ರವು ದಾವಣಗೆರೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉದ್ಯೋಗಾವಕಾಶ ಲಭ್ಯವಾಗಲು ನೆರವಾಗಲಿದೆ. ಒಟ್ಟಾರೆ ರಾಜ್ಯದ ಮಧ್ಯಭಾಗವೂ ಕೂಡ ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಸೇರಿದಂತೆ ಹಲವು ಐಟಿ ಉದ್ಯಮಗಳು ಜಿಲ್ಲೆಯತ್ತ ಬರಲು ಎಸ್ಟಿಪಿಐ ಉಪಕೇಂದ್ರ ಸೂಕ್ತ ವೇದಿಕೆ ಕಲ್ಪಿಸಲಿದೆ. ದಾವಣಗೆರೆ ಸಂಸದರ ಸತತ ಪ್ರಯತ್ನದಿಂದ ಇದು ಸಾಕಾರಗೊಳ್ಳುತ್ತಿದೆ ಎಂದು ಶ್ಲಾಘಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ದಾವಣಗೆರೆಯಲ್ಲಿ ಎಸ್ಟಿಪಿಐ ಉಪಕೇಂದ್ರ ಪ್ರಾರಂಭಕ್ಕೆ ಕಳೆದ ಡಿಸೆಂಬರ್ ತಿಂಗಳಿನಿಂದಲೇ ಸಿದ್ಧತೆ ಪ್ರಾರಂಭಿಸಲಾಗಿತ್ತು. ಆದರೆ ಮುಕ್ತ ವಿ.ವಿ.ಯವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ವಿಷಯದಲ್ಲಿ ಸ್ವಲ್ಪ ವಿಳಂಬವಾಯಿತು. ಈಗಾಗಲೆ ಕಾಮಗಾರಿ ಸಮರೋಪಾದಿಯಲ್ಲಿ ನಡೆದಿದೆ. ಮಾರ್ಚ್ ಒಳಗಾಗಿ ಎಲ್ಲ ಪ್ರಮುಖ ಸಿದ್ಧತೆಗಳು ಆಗಲಿವೆ ಎಂದರು.
ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣ, ವಿಶ್ವವಿದ್ಯಾಲಯ ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಾವಣಗೆರೆ ಜಿಲ್ಲೆಗೆ ಎಸ್ಟಿಪಿಐ ಉಪಕೇಂದ್ರವು ಇನ್ನಷ್ಟು ಗರಿಮೆ ಮೂಡಿಸಲಿದೆ. ವಾರಕ್ಕೊಮ್ಮೆ ಇಲ್ಲಿನ ಕೇಂದ್ರಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಲಾಗುವುದು. ಸಂಸದರ ಮಾರ್ಗದರ್ಶನದಲ್ಲಿ ಎಸ್ಟಿಪಿಐ ಉಪಕೇಂದ್ರವನ್ನು ಆದಷ್ಟು ಶೀಘ್ರ ಸಿದ್ಧಪಡಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ದಾವಣಗೆರೆಯಲ್ಲಿ ಉಪಕೇಂದ್ರ ಪ್ರಾರಂಭಿಸಲು ಎಸ್ಟಿಪಿಐ 2.62 ಕೋಟಿ ರೂ. ಅನುದಾನ ವಿನಿಯೋಗಿಸುತ್ತಿದೆ. ರಾಜ್ಯದಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಎಸ್ಟಿಪಿಐ ಉಪಕೇಂದ್ರಗಳಿದ್ದು, ದಾವಣಗೆರೆಯಲ್ಲಿ 4ನೇ ಉಪಕೇಂದ್ರ ಪ್ರಾರಂಭವಾಗಲಿದೆ. ಉಪಕೇಂದ್ರದಲ್ಲಿ 200 ಸಿಟಿಂಗ್ ಸಾಮಥ್ರ್ಯದ ಪ್ಲಗ್ ಅಂಡ್ ಪ್ಲೇ ಸೌಲಭ್ಯ ಒದಗಿಸಲಾಗುವುದು, ಅಲ್ಲದೆ ಹೈಸ್ಪೀಡ್ ಡಾಟಾ ಟ್ರಾನ್ಸ್ ಪರ್, ಸಾರ್ಟ್ಅಪ್ ಇನ್ಕ್ಯೂಬೇಷನ್ ಸೆಂಟರ್ ವ್ಯವಸ್ಥೆ ದೊರಕಿಸಲಾಗುವುದು ಎಂದರು.
ಐಟಿ ಕಂಪನಿಗಳು ಹಾಗೂ ಸ್ಟಾರ್ಟ್ಅಪ್ ಕಂಪನಿಗಳಿಗೆ ಎಸ್ಟಿಪಿಐ ಉಪಕೇಂದ್ರವು ಉತ್ತಮ ವೇದಿಕೆಯಾಗಲಿದ್ದು, ಜಿಲ್ಲಾಡಳಿತವು ಇವುಗಳಿಗೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡಿಕೊಡಲಿದೆ. ಎಸ್ಟಿಪಿಐ ಹಿರಿಯ ನಿರ್ದೇಶಕರಾದ ಶೈಲೇಂದ್ರ ತ್ಯಾಗಿ ಅವರು ದಾವಣಗೆರೆಯಲ್ಲಿ ಗುಜರಾತ್ನ ಗಾಂಧಿನಗರಕ್ಕೆ ಹೋಲಿಕೆ ಮಾಡಿ, ನಗರವು ಸ್ವಚ್ಛ ಹಾಗೂ ಸುಂದರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂತೆಯೇ ನಗರವನ್ನು ಇನ್ನಷ್ಟು ಸ್ವಚ್ಛವಾಗಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಹುಬ್ಬಳ್ಳಿ ಎಸ್ಟಿಪಿಐ ಕೇಂದ್ರದ ಜಂಟಿನಿರ್ದೇಶಕ ಸಸಿಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು ಹಾಗೂ ಜಿಪಂ ಉಪಕಾರ್ಯದರ್ಶಿ ಬಿ.ಆನಂದ್, ಪ್ರಸನ್ನ, ಯಶವಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.